ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಎತ್ತಂಗಡಿ ಹಿಂದೆ ಬೃಹತ್ ಕಾರಣ
ಬೆಂಗಳೂರು, ಜುಲೈ 18: ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರ ಮಧ್ಯೆ, ರಾಜ್ಯ ಸರ್ಕಾರದ ಮತ್ತೊಂದು ನಡೆ ಬೆಂಗಳೂರಿಗರಲ್ಲಿ ಆಶ್ಚರ್ಯ ಮೂಡಿಸಿದೆ. ಕೊರೊನಾ ವೈರಸ್ ನಿಯಂತ್ರಣದ ಸಲುವಾಗಿ ಬೆಂಗಳೂರಿನಲ್ಲಿ ಒಂದು ವಾರದ ಲಾಕ್‌ಡೌನ್ ಜಾರಿ ಮಾಡಿ 4 ದಿನಗಳು ಕಳೆದಿವೆ. ಇದೇ ಸಂದರ್ಭದಲ್ಲಿ ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿರುವುದು ಕುತೂಹಲ ಮೂಡಿಸಿದೆ.
Recommended Video
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಂಜುನಾಥ್ ಪ್ರಸಾದ್ ಅವರನ್ನು ಬಿಬಿಎಂಪಿ ಆಯುಕ್ತರನ್ನಾಗಿ ವರ್ಗಾಯಿಸಿ ಸರ್ಕಾರ ಆದೇಶ ಮಾಡಿದೆ. ಬಿ.ಎಚ್. ಅನಿಲ್ ಕುಮಾರ್ ಅವರು ರಾಜ್ಯ ಸರ್ಕಾರದ ಎದುರು ಇಟ್ಟಿದ್ದ ಒಂದು ಬೃಹತ್ ಬೇಡಿಕೆಯೇ ಅವರ ವರ್ಗಾವಣೆಗೆ ಕಾರಣ ಎನ್ನಲಾಗುತ್ತಿದೆ. ಹೌದು. ಎರಡು ದಿನಗಳ ಹಿಂದೆ ಆಯುಕ್ತರಾಗಿದ್ದ ಅನಿಲ್ ಕುಮಾರ್ ಸರ್ಕಾರದ ಎದುರು ಬೇಡಿಕೆಯೊಂದನ್ನು ಇಟ್ಟಿದ್ದರು. ಹಾಗಾದರೆ ಅವರು ಇಟ್ಟಿದ್ದ ಬೇಡಿಕೆಯಾದರೂ ಏನು?

ಮಂಜುನಾಥ್ ಪ್ರಸಾದ್ ನೇಮಕ
ಬಿ.ಎಚ್. ಅನಿಲ್ ಕುಮಾರ್ ಅವರು ಬಿಬಿಎಂಪಿ ಆಯುಕ್ತರಾಗಿ ನೇಮಕವಾಗುವ ಮೊದಲು ಮಂಜುನಾಥ್ ಪ್ರಸಾದ್ ಅವರೇ ಬಿಬಿಎಂಪಿ ಆಯುಕ್ತರಾಗಿದ್ದರು. ಹೀಗಾಗಿ ಈ ಹಿಂದೆಯೂ ಬಿಬಿಎಂಪಿ ಆಯುಕ್ತರಾಗಿ ಕೆಲಸ ಮಾಡಿರುವ ಅನುಭವವನ್ನು ಮಂಜುನಾಥ್ ಪ್ರಸಾದ್ ಹೊಂದಿದ್ದಾರೆ. ಹಿರಿಯ ಐಎಎಸ್ ಅಧಿಕಾರಿ ಮಂಜುನಾಥ್ ಪ್ರಸಾದ್ ಅವರು 2016 ರಿಂದ 2019ರವರೆಗೆ ಬಿಬಿಎಂಪಿ ಕಮಿಶನರ್ ಆಗಿ ಕೆಲಸ ಮಾಡಿದ್ದಾರೆ.
ಆ ಸಂದರ್ಭದಲ್ಲಿ ಘನತ್ಯಾಜ್ಯ ಘಟಕಗಳ ನಿರ್ಮಾಣ, ಪೌರ ಕಾರ್ಮಿಕರ ಸಂಖ್ಯೆಯನ್ನು 20 ಸಾವಿರದಿಂದ 30 ಸಾವಿರಕ್ಕೆ ಏರಿಕೆ ಮಾಡಿದ್ದು, ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಹೊತ್ತಿಕೊಂಡ ಪ್ರಕರಣಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಪೀಠದ ಎಚ್ಚರಿಕೆ ಕೊಟ್ಟಿತ್ತು. ಅದೇ ಸಮಯದಲ್ಲಿ ಬೆಳ್ಳಂದೂರು ಬಿಬಿಎಂಪಿ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿ, ದಾಖಲೆಗಳು ನಾಶವಾಗಿರುವ ಘಟನೆ ಅನುಮಾನಕ್ಕೆ ಕಾರಣವಾಗಿತ್ತು. ಆಗ ಈ ಎಲ್ಲ ಸವಾಲುಗಳನ್ನು ಮಂಜುನಾಥ್ ಪ್ರಸಾದ್ ಎದುರಿಸಿ ಆಡಳಿತ ನಡೆಸಿದ್ದರು.

ಬಾಡಿಗೆ ಬೆಡ್ ಹಗರಣ
ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿನ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ಕೊಡಲು 20 ಸಾವಿರ ಹಾಸಿಗೆಗಳ ಸಾಮರ್ಥ್ಯದ ಕೋವಿಡ್ ಆರೈಕೆ ಕೇಂದ್ರಗಳ ಸ್ಥಾಪನೆ ಮಾಡಲಾಗಿತ್ತು.
BIEC ಸೇರಿದಂತೆ ಬೆಂಗಳೂರಿನಲ್ಲಿ ಸರ್ಕಾರ 20 ಸಾವಿರ ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಿದೆ. ಅಲ್ಲಿಗೆ ಬೇಕಾದ ಹಾಸಿಗೆಗಳನ್ನು ಖರೀದಿ ಮಾಡುವ ಬದಲು ಬಾಡಿಗೆ ಆಧಾರದಲ್ಲಿ ತೆಗೆದುಕೊಳ್ಳಲಾಗಿತ್ತು. ಅದು ನಂತರ ವಿರೋಧ ಪಕ್ಷಗಳ ಆಕ್ಷೇಪಕ್ಕೆ ಕಾರಣವಾಗಿತ್ತು. ಇದು ಸರ್ಕಾರಕ್ಕೆ ಮುಜುಗರ ತಂದಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅನಿಲ್ ಕುಮಾರ್ ತಲೆದಂಡವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ನಿಜವಾದ ಕಾರಣ ಅದಲ್ಲ. ಮತ್ತೇನು?

ಆಯುಕ್ತರ ನಿರ್ಧಾರವಲ್ಲ
ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ 10 ಸಾವಿರ ಹಾಸಿಗೆಗಳ ಸಾಮರ್ಥ್ಯದ ಕೋವಿಡ್ ಆರೈಕೆ ಕೇಂದ್ರಕ್ಕೆ ಬಾಡಿಗೆ ಹಾಸಿಗೆಗಳನ್ನು ತರಲಾಗಿತ್ತು. ಅದು ಕೇವಲ ಬಿಬಿಎಂಪಿ ಆಯುಕ್ತರಾಗಿದ್ದ ಬಿ.ಎಚ್. ಅನಿಲ್ ಕುಮಾರ್ ಅವರ ನಿರ್ಧಾರ ಮಾತ್ರವಾಗಿರಲಿಲ್ಲ.
ಅದೊಂದು ಒಮ್ಮತದ ನಿರ್ಧಾರವಾಗಿತ್ತು. ಹೀಗಾಗಿ ಬಾಡಿಗೆ ಬೆಡ್ ಹಗರಣ ಬಿ.ಎಚ್. ಅನಿಲ್ ಕುಮಾರ್ ವರ್ಗಾವಣೆಗೆ ಕಾರಣವಲ್ಲ ಎನ್ನುತ್ತಾರೆ ಬಿಬಿಎಂಪಿಯ ಕೋವಿಡ್ ಟಾಸ್ಕ್‌ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಅಧಿಕಾರಿಯೊಬ್ಬರು. ಹಾಗಾದರೆ ಅನಿಲ್ ಕುಮಾರ್ ಅವರ ಎತ್ತಂಗಡಿ ಹಿಂದಿನ ಕಾರಣವಾದರೂ ಏನು?

ಬೃಹತ್ ಬೇಡಿಕೆ
ಸರ್ಕಾರದ ಮಾತನ್ನು ಕೇಳದೇ ಇದ್ದಿದ್ದಕ್ಕೆ ಬಿ.ಎಚ್. ಅನಿಲ್ ಕುಮಾರ್ ಅವರನ್ನು ಆಯುಕ್ತರ ಹುದ್ದೆಯಿಂದ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ಕೊರೊನಾ ವೈರಸ್ ನಿಯಂತ್ರಣ ಮಾಡಲು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಅವರು ಸರ್ಕಾರದ ಎದುರು ಬೇಡಿಕೆಯೊಂದನ್ನು ಇಟ್ಟಿದ್ದರು. ಆ ಬೇಡಿಕೆಯೇ ಅವರಿಗೆ ಮುಳುವಾಗಿದೆ ಎಂಬ ಮಾತುಗಳು ಬಿಬಿಎಂಪಿಯಿಂದ ಕೇಳಿ ಬರುತ್ತಿವೆ.
ಬೆಂಗಳೂರಿನಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ಅನ್ನು ಇನ್ನೂ ಒಂದು ವಾರ ಮುಂದುವರೆಸುವಂತೆ ಅನಿಲ್ ಕುಮಾರ್ ಹಾಗೂ ಮೇಯರ್ ಸರ್ಕಾರದ ಎದುರು ಬೇಡಿಕೆ ಇಟ್ಟಿದ್ದರು. ಕೋವಿಡ್ ನಿಯಂತ್ರಣಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಿದೆ. ಈಗಿರುವ ಸ್ಥಿತಿಯಲ್ಲಿ ಹತೋಟಿಗೆ ತರಲು ಸಾಧ್ಯವಿಲ್ಲ ಎಂದು ತಮ್ಮ ಸ್ಪಷ್ಟ ನಿರ್ಧಾರವನ್ನು ಸರ್ಕಾರಕ್ಕೆ ತಿಳಿಸಿದ್ದರು. ಇದೇ ವರ್ಗಾವಣೆಗೆ ಮೂಲ ಕಾರಣ ಎನ್ನಲಾಗಿದೆ.
ಆದರೆ ಯಾವುದೇ ಕಾರಣಕ್ಕೂ ಲಾಕ್‌ಡೌನ್ ವಿಸ್ತರಣೆ ಇಲ್ಲ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಮೇಲಿಂದ ಮೇಲೆ ಸ್ಪಷ್ಟನೆ ಕೊಟ್ಟಿದ್ದಾರೆ. ಹೀಗಾಗಿ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಅವರ ಲಾಕ್‌ಡೌನ್ ಮುಂದುವರೆಸುವ ಬೇಡಿಕೆ ಸರ್ಕಾರಕ್ಕೆ ನುಂಗಲಾರದ ತುತ್ತಾಗಿತ್ತು. ಇದೇ ಕಾರಣದಿಂದ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಹೆಸರು ಹೇಳಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರ್ಥಿಕ ಸಂಕಷ್ಟ
ಲಾಕ್‌ಡೌನ್ ಬೇಡಿಕೆ ಒಪ್ಪದಿರುವುದರ ಹಿಂದೆಯೂ ಕಾರಣವಿದೆ. ಸರ್ಕಾರಕ್ಕೆ ಕೊರೊನಾ ವೈರಸ್‌ಗಿಂತ ಹೆಚ್ಚಿನ ನಷ್ಟ ಲಾಕ್‌ಡೌನ್ ನಿಂದ ಆಗುತ್ತಿದೆ. ಲಾಕ್‌ಡೌನ್‌ನಿಂದಾಗಿ ಬಹುತೇಕ ತೆರಿಗೆ ಸಂಗ್ರಹ ಸ್ಥಗಿತವಾಗಿದೆ. ಜೊತೆಗೆ ಇತರ ಮೂಲಗಳಿಂದ ಸರ್ಕಾರಕ್ಕೆ ಬರಬೇಕಾಗಿರುವ ಆದಾಯ ಕೂಡ ನಿಂತಿದೆ. ಸರ್ಕಾರಿ ನೌಕರರಿಗೆ ತಿಂಗಳ ವೇತನ ಕೊಡುವುದು ಕಷ್ಟವಾಗಿದೆ. ಹೀಗಾಗಿಯೇ KSRTC ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳ ಚಾಲಕರು, ನಿರ್ವಾಹಕರಿಗೆ ವೇತನ, ಭತ್ಯೆ ರಹಿತ ರಜೆ ಕೊಡಲು ಸರ್ಕಾರ ಯೋಜನೆ ರೂಪಿಸಲು ಮುಂದಾಗಿತ್ತು.
ಒಂದು ತಿಂಗಳು ಸರ್ಕಾರ ನಡೆಯಲು ಕನಿಷ್ಠ 6.5 ಸಾವಿರ ಕೋಟಿ ರೂಪಾಯಿಗಳ ಆದಾಯದ ಅಗತ್ಯವಿದೆ. ಇಂತಹ ಸಂದರ್ಭದಲ್ಲಿ ಆರ್ಥಿಕತೆಯ ಮೂಲ ಬೆಂಗಳೂರನ್ನು ಲಾಕ್‌ಡೌನ್ ಮಾಡುವ ಧೈರ್ಯ ಹಣಕಾಸು ಇಲಾಖೆಯನ್ನು ಹೊಂದಿರುವ ಸಿಎಂ ಯಡಿಯೂರಪ್ಪ ಅವರಿಗೆ ಇಲ್ಲ ಎನ್ನಲಾಗುತ್ತಿದೆ. ಇದೇ ಕಾರಣದಿಂದಲೇ ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದರು.
ಹೀಗಾಗಿ ಬೆಂಗಳೂರು ಲಾಕ್‌ಡೌನ್ ಬೇಡಿಕೆಯೇ ಆಯುಕ್ತರಾಗಿದ್ದ ಬಿ.ಎಚ್. ಅನಿಲ್ ಕುಮಾರ್ ಅವರ ವರ್ಗಾವಣೆ ಹಿಂದೆ ಕೆಲಸ ಮಾಡಿದೆ ಎನ್ನಲಾಗುತ್ತಿದೆ.












Click it and Unblock the Notifications