ಬೆಂಗಳೂರು; ಬೀದಿ ಬದಿ ತೆರೆದಿಟ್ಟ ಆಹಾರ ಮಾರಾಟ ನಿಷೇಧ
ಬೆಂಗಳೂರು, ಮಾರ್ಚ್ 09 : ಬೆಂಗಳೂರು ನಗರದಲ್ಲಿ ಕಾಲರಾ ಪ್ರಕರಣಗಳು ವರದಿಯಾಗಿವೆ. ಆದ್ದರಿಂದ, ಬಿಬಿಎಂಪಿ ಬೀದಿ ಬದಿ ತೆರೆದಿಟ್ಟ ಆಹಾರ ಮಾರಾಟವನ್ನು ಎಲ್ಲಾ ವಾರ್ಡ್‌ಗಳಲ್ಲಿ ನಿಷೇಧಿಸಿ ಆದೇಶವನ್ನು ಹೊರಡಿಸಿದೆ.
ಸೋಮವಾರ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಆರೋಗ್ಯ ಸಭೆ ನಡೆಯಿತು. ಸಭೆಯಲ್ಲಿ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಭೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಪಾಲಿಕೆ ವ್ಯಾಪ್ತಿಯ ಬೀದಿ ಬದಿಗಳಲ್ಲಿ ತೆರೆದಿಟ್ಟ ಆಹಾರ ಪದಾರ್ಥಗಳ ಮಾರಾಟವನ್ನು ನಿಷೇಧಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಕುರಿತು ಬಿಬಿಎಂಪಿ ಆಯುಕ್ತರು ಟ್ವೀಟ್ ಮಾಡಿದ್ದಾರೆ.
ಪಾಲಿಕೆಯ ಪಶ್ಚಿಮ ವಲಯದ ಉಪ ಆರೋಗ್ಯಾಧಿಕಾರಿ ಮತ್ತು ಆರೋಗ್ಯ ವೈದ್ಯಾಧಿಕಾರಿ ತಮ್ಮ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳು ತೆರೆದಿಟ್ಟ ಆಹಾರ ಪದಾರ್ಥಗಳ ಮಾರಾಟವನ್ನು ನಿಷೇಧಿಸುವಂತೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಪಾಲಿಕೆ ನೀಡಿರುವ ಸೂಚನೆ ತಪ್ಪಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ನೇರ ಜವಾಬ್ದಾರಿ ಮಾಡಲಾಗುತ್ತದೆ ಎಂದು ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.
ಕೊರೊನಾ ಆತಂಕದ ನಡುವೆಯೇ ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಕಾಲರಾ ರೋಗದ ಪ್ರಕರಣಗಳು ಪತ್ತೆಯಾಗಿವೆ. ನಗರದಲ್ಲಿ ಇದುವರೆಗೂ ಒಟ್ಟು 17 ಜನರಿಗೆ ಕಾಲರಾ ಇರುವುದನ್ನು ಬಿಬಿಎಂಪಿ ಆರೋಗ್ಯಾಧಿಕಾರಿ ಖಚಿತಪಡಿಸಿದ್ದಾರೆ.
ದಕ್ಷಿಣ ವಲಯದಲ್ಲಿ 8, ಪೂರ್ವ ವಲಯದಲ್ಲಿ 7, ಪಶ್ಚಿಮ ವಲಯದಲ್ಲಿ 2 ಪ್ರಕರಣಗಳು ದಾಖಲಾಗಿವೆ. ಕಾಲರಾ ಪತ್ತೆಯಾಗಲು ನಿಖರವಾದ ಕಾರಣ ತಿಳಿದುಬಂದಿಲ್ಲ. ಅನುಮಾನ ಬಂದ ಬಡಾವಣೆಗಳಲ್ಲಿ ನೀರಿನ ಮಾದರಿಯನ್ನು ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ.












Click it and Unblock the Notifications