ಯೆಮನ್ ಪ್ರವಾಸ ನಿಷೇಧ ಕ್ರಮ ಸರಿ ಇದೆ ಎಂದ ಹೈಕೋರ್ಟ್: ಪ್ರಕರಣದ ವಿವರ ತಿಳಿಯಿರಿ
ಬೆಂಗಳೂರು, ಏಪ್ರಿಲ್ 16: ಕೇಂದ್ರ ಸರ್ಕಾರ ರಾಷ್ಟ್ರೀಯ ಭದ್ರತೆ ಹಾಗೂ ಭಾರತೀಯ ನಾಗರಿಕರ ಸುರಕ್ಷತೆ ದೃಷ್ಟಿಯಿಂದ ಮಧ್ಯಪ್ರಾಚ್ಯ ದೇಶಗಳಲ್ಲಿ ಒಂದಾದ ಯೆಮೆನ್ ದೇಶಕ್ಕೆ ಪ್ರವಾಸ ನಿಷೇಧಿಸಿರುವುದು ಸರಿ ಇದೆ ಎಂದು ಹೈಕೋರ್ಟ್ ಹೇಳಿದೆ. ಬೆಳ್ತಂಗಡಿ ತಾಲೂಕಿನ ಗಂಡಿಬಾಗಿಲು ನೆರಿಯಾ ನಿವಾಸಿ ಶೇನಿ ಜಾಯ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ವಿಚಾರಣೆ ನಡೆಸಿತು.
ಆಗ ನ್ಯಾಯಪೀಠ, 'ಯೆಮನ್‌ನಲ್ಲಿನ ಸದ್ಯದ ಪರಿಸ್ಥಿತಿ ಮತ್ತು ನಾಗರಿಕರ ಸುರಕ್ಷತೆಯನ್ನು ಗಮನದಲ್ಲಿ ಇರಿಸಿಕೊಂಡೇ ಕೇಂದ್ರ ಸರ್ಕಾರ ಯಮನ್ ಪ್ರವಾಸ ನಿಷೇಧದ ಅಧಿಸೂಚನೆ ಹೊರಡಿಸಿದೆ. ನೀವು ಅಧಿಸೂಚನೆ ಉಲ್ಲಂಘಿಸಿದ್ದೀರಿ ಎಂಬ ಕಾರಣಕ್ಕೆ ನಿಮ್ಮ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಂಡಿದೆ. ಪ್ರವಾಸ ನಿಷೇಧಿಸಿರುವ ಕೇಂದ್ರದ ಕ್ರಮವನ್ನು ಈಗಾಗಲೇ ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿದೆ ಎಂದು ಹೇಳಿತು.

ಅರ್ಜಿದಾರರ ಪರ ವಕೀಲರು, 'ಯೆಮನ್ ಪ್ರವಾಸ ನಿಷೇಧಿಸಿ ಕೇಂದ್ರ ವಿದೇಶಾಂಗ ಸಚಿವಾಲಯ 2017ರ ಸೆಪ್ಟೆಂಬರ್ 26ರಂದು ಹೊರಡಿಸಿರುವ ಅಧಿಸೂಚನೆ ಬಗ್ಗೆ ಅರ್ಜಿದಾರರಿಗೆ ತಿಳಿದಿರಲಿಲ್ಲ. ಅಂತೆಯೇ, ಈ ಅಧಿಸೂಚನೆ ಉಲ್ಲಂಘಿಸುವ ಯಾವುದೇ ಉದ್ದೇಶವನ್ನು ಅವರು ಹೊಂದಿಲ್ಲ. ಹಾಗಾಗಿ, ಅವರ ಪಾಸ್‌ಪೋರ್ಟ್ ಹಿಂದಿರುಗಿಸಲು ಪ್ರತಿವಾದಿಗಳಿಗೆ ನಿರ್ದೇಶಿಸಬೇಕು' ಎಂದು ಕೋರಿದರು.
ಅಸ್ಥಿರತೆ ಹಿನ್ನೆಲೆಯಲ್ಲಿ ಕ್ರಮ
ಪ್ರತಿವಾದಿ ಕೇಂದ್ರ ವಿದೇಶಾಂಗ ಸಚಿವಾಲಯ ಮತ್ತು ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಪರ ಹಾಜರಿದ್ದ ಡೆಪ್ಯುಟಿ ಸಾಲಿಸಿಟರ್ ಜನರಲ್ ಎಚ್.ಶಾಂತಿಭೂಷಣ್, 'ಯೆಮನ್‌ನಲ್ಲಿ ನಾಗರಿಕ ಜನಜೀವನ ಅಸ್ಥಿರತೆಯಲ್ಲಿದೆ. ಸುರಕ್ಷತೆ ದುರ್ಬಲಗೊಂಡಿದೆ. ಹೀಗಾಗಿ, ಯಾವುದೇ ಭಾರತೀಯ ನಾಗರಿಕರು ರಸ್ತೆ, ರೈಲು, ಜಲಮಾರ್ಗ ಅಥವಾ ವಿಮಾನದ ಮೂಲಕ ಅಲ್ಲಿಗೆ ಪ್ರಯಾಣ ಬೆಳೆಸುವುದನ್ನು ನಿರ್ಬಂಧಿಸಿ ಅಧಿಸೂಚನೆ ಹೊರಡಿಸಲಾಗಿದೆ. ಇದನ್ನು ಉಲ್ಲಂಘಿಸಿರುವ ಕಾರಣದಿಂದಲೇ ಅರ್ಜಿದಾರರ ಪಾಸ್‌ಪೋರ್ಟ್ ಅನ್ನು ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ' ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.
ಅರ್ಜಿದಾರರ ಪರ ವಕೀಲರು 'ಅರ್ಜಿದಾರರು 2010-11ರಿಂದಲೇ ಯೆಮೆನ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಧಿಸೂಚನೆಯನ್ನು ಉಲ್ಲಂಘಿಸುವಂತಹ ಯಾವುದೇ ಉದ್ದೇಶವನ್ನು ಅವರು ಹೊಂದಿರಲಿಲ್ಲ. ಅಧಿಸೂಚನೆ ಹೊರಡಿಸುವ ಮುನ್ನಾ ಅವಧಿಯಿಂದಲೇ ಅವರು ಅಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಒಂದು ವೇಳೆ ಅವರ ಪಾಸ್‌ಪೋರ್ಟ್ ಹಿಂದಿರುಗಿಸದೇ ಹೋದರೆ ಕೆಲಸ ಕಳೆದುಕೊಳ್ಳುತ್ತಾರೆ' ಎಂದು ಕಳವಳ ವ್ಯಕ್ತಪಡಿಸಿದರು.
ಇದಕ್ಕೆ ನ್ಯಾಯಪೀಠ, 'ಈ ಸಂಬಂಧ ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಪರಿಶೀಲಿಸಿ ನಿಮ್ಮ ನಿಲುವೇನು ಎಂಬುದನ್ನು ತಿಳಿಸಿ' ಎಂದು ಶಾಂತಿಭೂಷಣ್ ಅವರಿಗೆ ಸೂಚಿಸಿ ವಿಚಾರಣೆಯನ್ನು ಇದೇ 18ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ ಏನು..?
ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ 2023ರ ಆಗಸ್ಟ್ 20ರಂದು ಶೇನಿ ಜಾಯ್ ಅವರ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅಂತೆಯೇ, 2017ರ ಅಧಿಸೂಚನೆಯ ಅನುಸಾರ ಮತ್ತು ಪಾಸ್‌ಪೋರ್ಟ್ ಕಾಯ್ದೆ-1967ರ ಕಲಂ19ರ ಅನ್ವಯ ಅವರ ಪಾಸ್‌ಪೋರ್ಟ್ ಅನ್ನು ಅಮಾನ್ಯಗೊಳಿಸಲಾಗಿದೆ.












Click it and Unblock the Notifications