ಎಟಿಎಂಗೆ ಭದ್ರತೆ ಒದಗಿಸಿ, ಇಲ್ಲವೇ ಪ್ರಕರಣ ಎದುರಿಸಿ
ಬೆಂಗಳೂರು, ಡಿ. 30: ಎಟಿಎಂ ಕೇಂದ್ರಗಳಿಗೆ ಡಿ. 31ರೊಳಗೆ ರಕ್ಷಣೆ ಒದಗಿಸದಿದ್ದರೆ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕರನ್ನೇ ಮುಖ್ಯ ಆರೋಪಿಗಳನ್ನಾಗಿಸಿ ಪ್ರಕರಣ ದಾಖಲಿಸುತ್ತೇವೆ...
ಇದು ಪೊಲೀಸರು ಬ್ಯಾಂಕ್‌ಗಳಿಗೆ ನೀಡಿರುವ ಎಚ್ಚರಿಕೆ. ನಿಗದಿತ ಅವಧಿಯೊಳಗೆ ಎಟಿಎಂ ಕೇಂದ್ರಗಳಿಗೆ ಗಾರ್ಡ್‌ಗಳನ್ನು ನೇಮಿಸಬೇಕು. ಸಿಸಿಟಿವಿ ಕ್ಯಾಮರಾ ಹಾಗೂ ಅಲಾರ್ಮ್ ಸಿಸ್ಟಂ ಅಳವಡಿಸಬೇಕು ಎಂದು ಪೊಲೀಸರು ಸ್ಪಷ್ಟ ಸೂಚನೆ ನೀಡಿದ್ದಾರೆ. [ಎಟಿಎಂ ದಾಳಿಗೆ ಒಂದು ವರ್ಷ : ಆರೋಪಿ ಎಲ್ಲಿ?]

ಕಾರ್ಪೊರೇಶನ್ ಬ್ಯಾಂಕ್ ಎಟಿಎಂ ಕೇಂದ್ರವೊಂದರಲ್ಲಿ 2013ರಲ್ಲಿ ಜ್ಯೋತಿ ಉದಯ್ ಎಂಬುವರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣದ ನಂತರ ಸುರಕ್ಷತಾ ಕ್ರಮ ಅಳವಡಿಸಲು ಪೊಲೀಸರು ಸೂಚಿಸಿದ್ದರು. [ಎಟಿಎಂ ಭದ್ರತೆಗೆ ಮಾರ್ಗಸೂಚಿ]
ಆದರೆ, ಇದಕ್ಕಾಗಿ ಇನ್ನಷ್ಟು ಕಾಲಾವಕಾಶ ಬೇಕೆಂದು ವಿವಿಧ ಬ್ಯಾಂಕ್‌ಗಳು ಎರಡು ಬಾರಿ ಬೇಡಿಕೆ ಇಟ್ಟಿದ್ದವು. ಇದಕ್ಕೆ ಸ್ಪಂದಿಸಿದ್ದ ಪೊಲೀಸ್ ಇಲಾಖೆ 2014ರ ಡಿ. 31ರವರೆಗೆ ಸಮಯಾವಕಾಶ ವಿಸ್ತರಿಸಿತ್ತು. ಆದರೆ, ಈ ಅವಧಿಯೂ ಮುಗಿಯುತ್ತ ಬಂದಿದ್ದರೂ ಅನೇಕ ಎಟಿಎಂ ಕೇಂದ್ರಗಳಲ್ಲಿ ಗಾರ್ಡ್‌ಗಳನ್ನು ನೇಮಿಸಿಲ್ಲ. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಬ್ಯಾಂಕ್‌ಗಳಿಗೆ ಸ್ಪಷ್ಟ ಎಚ್ಚರಿಕೆ ನೀಡಿದೆ. [ಎಟಿಎಂ ಉಚಿತ ವಹಿವಾಟಿಗೆ ಕೊಕ್ಕೆ]
ಬ್ಯಾಂಕ್ ಪಟ್ಟಿ ತಯಾರಿಸಲು ಸೂಚನೆ : "ಆದೇಶ ಉಲ್ಲಂಘಿಸುವ ಬ್ಯಾಂಕ್‌ಗಳ ಪ್ರಧಾನ ವ್ಯವಸ್ಥಾಪಕರ ಮೇಲೆ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಪರಿಚ್ಛೇದ 188ರ ಅಡಿ ಪ್ರಕರಣ ದಾಖಲಿಸಲಾಗುವುದು" ಎಂದು ಪೊಲೀಸ್ ಹೆಚ್ಚುವರಿ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ. [100 ರು. ಕೇಳಿದರೆ 500 ರು. ಕೊಡುವ ಎಟಿಎಂ]
ಎಟಿಎಂ ಕೇಂದ್ರಗಳಲ್ಲಿ ಭದ್ರತಾ ಕ್ರಮ ಕೈಗೊಳ್ಳದ ಬ್ಯಾಂಕ್‌ಗಳ ಕುರಿತು ಜನವರಿ 15ರಿಂದ ಸಮೀಕ್ಷೆ ನಡೆಸಬೇಕು. ಅಂತಹ ಬ್ಯಾಂಕ್‌ಗಳ ಪಟ್ಟಿ ತಯಾರಿಸಬೇಕೆಂದು ಪೊಲೀಸರಿಗೆ ಅಲೋಕ್ ಕುಮಾರ್ ಸೂಚನೆ ನೀಡಿದ್ದಾರೆ.












Click it and Unblock the Notifications