ಬೆಂಗಳೂರಿಗರೇ ಎಚ್ಚರ! ಇಂದಿನಿಂದ 3 ದಿನ ಹೆಚ್ಚಲಿದೆ ಬಿಸಿ ಗಾಳಿ- 41 ವರ್ಷದ ದಾಖಲೆ ಮುರಿದ ತಾಪಮಾನ
ಬೆಂಗಳೂರು ಮೇ 1: ಪ್ರತೀ ವರ್ಷ ಏಪ್ರಿಲ್ ತಿಂಗಳಿನಲ್ಲಿ ಮಳೆ ಆಗಿದೆ. ಆದರೆ ಈ ಬಾರಿ ಏಪ್ರಿಲ್ ತಿಂಗಳಲ್ಲಿ ಮಳೆಯೇ ಆಗಿಲ್ಲ. ವಿಶೇಷವಾಗಿ ಬೆಂಗಳೂರಿನಲ್ಲಿ ಪ್ರತೀ ವರ್ಷ ಏಪ್ರಿಲ್ ತಿಂಗಳಲ್ಲಿ ಮಳೆಯಾದಂತೆ ಮಳೆಯಾಗಿಲ್ಲ. ಹೀಗಾಗಿ ಕಳೆದ 41 ವರ್ಷಗಳಲ್ಲಿ ಏಪ್ರಿಲ್ ಅತ್ಯಂತ ಒಣ ತಿಂಗಳಾಗಿದೆ.
ಹೌದು... ನಗರದಲ್ಲಿ ಈವರೆಗೆ ಏಪ್ರಿಲ್ ತಿಂಗಳಿನಲ್ಲಿ 180 ಮಿಮೀ ಸರಾಸರಿ ಮಳೆ ದಾಖಲಾಗಿದೆ. ಆದರೆ ಈ ಬಾರಿ ಏಪ್ರಿಲ್ ತಿಂಗಳಲ್ಲಿ ಬೆಂಗಳೂರು ಮಳೆಯನ್ನೇ ಕಂಡಿಲ್ಲ. IMD ವರದಿ ಪ್ರಕಾರ ಏಪ್ರಿಲ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ 0 ಮಿಮೀ ಮಳೆಯಾಗಿದೆ. ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಬೆಂಗಳೂರು ಹವಾಮಾನದ ಅಪ್‌ಡೇಟ್‌ನ ಪ್ರಕಾರ 1983 ರಲ್ಲಿ ಕೊನೆಯ ಬಾರಿಗೆ ಬೆಂಗಳೂರು ಇಂತಹ ಕಡಿಮೆ ಮಳೆಯನ್ನು ವರದಿ ಮಾಡಿದೆ. ಅಲ್ಲದೆ ಈ ಋತುವಿನಲ್ಲಿ ಮೊದಲ ಬಾರಿಗೆ ಐಎಂಡಿ ಬೆಂಗಳೂರಿಗೆ ಬಿಸಿಗಾಳಿಯ ಮುನ್ಸೂಚನೆ ನೀಡಿದೆ.

ಏಪ್ರಿಲ್‌ನಲ್ಲಿ ಶೂನ್ಯ ಮಳೆ
X ಪ್ಲಾಟ್‌ಫಾರ್ಮ್‌ನಲ್ಲಿನ ನಮ್ಮ ಕರ್ನಾಟಕದ ಹವಾಮಾನದ ಅಪ್‌ಡೇಟ್‌ನಲ್ಲಿ ಐಎಂಡಿ, ಏಪ್ರಿಲ್ 30ರಂದು ಬೆಂಗಳೂರಿನಲ್ಲಿ 38.2 ° C ತಾಪಮಾನವನ್ನು ದಾಖಲಿಸಿದೆ. ಈ ಏಪ್ರಿಲ್‌ನಲ್ಲಿ ಮೂರು ಬಾರಿ ತಾಪಮಾನವು 38 ° C ತಲುಪಿದೆ.
ಹಾಗಾದರೆ ಯಾವ ವರ್ಷ ಏಪ್ರಿಲ್ ತಿಂಗಳಿನಲ್ಲಿ ತಾಪಮಾನ ಹೆಚ್ಚಾಗಿದೆ ಎಂದು ನೋಡುವುದಾದರೆ- 1931ರ ಏಪ್ರಿಲ್ 30ರಂದು 38.3 ° C ತಾಪಮಾನ ದಾಖಲಾಗಿತ್ತು. 2016ರ ಏಪ್ರಿಲ್ 24 ರಂದು 39.2 ° C ಗರಿಷ್ಠ ತಾಪಮಾನ ದಾಖಲಾಗಿದ್ದರೆ ನಂತರ 2024ರ ಏಪ್ರಿಲ್ 28ರಂದು 38.5 ° C ತಾಪಮಾನ ದಾಖಲಾಗಿದೆ. ನಾಲ್ಕನೇ ಬಾರಿಗೆ 2024ರ ಏಪ್ರಿಲ್ 30ರಂದು 38.2 ° C ತಾಪಮಾನ ದಾಖಲಾಗಿದೆ.
ಇನ್ನೂ 2024 ಏಪ್ರಿಲ್ 27 ಮತ್ತು 2016 ಏಪ್ರಿಲ್ 23 ಎರಡರಲ್ಲೂ 38.0 ° C ತಾಪಮಾನ ದಾಖಲಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಬೆಂಗಳೂರು 38.0 ° C, 38.5 ° C ತಾಪಮಾನವನ್ನು ಅನುಭವಿಸಿದೆ, ಒಂದು ತಿಂಗಳು ಪೂರ್ತಿ 37.8°C ರಿಂದ 38.2°C ತಾಪಮಾನವನ್ನು ಬೆಂಗಳೂರು ಅನುಭವಿಸಿದೆ.

ಎಲ್ಲರ ಚಿತ್ತ ಮಳೆಯತ್ತ
ಆದ್ದರಿಂದ ಕನಿಷ್ಠ ಮೇ ತಿಂಗಳಿನಲ್ಲಾದರೂ ಜನ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಕರ್ನಾಟಕ ಹವಾಮಾನ ಅಪ್‌ಡೇಟ್‌ನಲ್ಲಿ ಮುಂದಿನ 48 ಗಂಟೆಗಳಲ್ಲಿ ಕೊಡಗು, ಚಾಮರಾಜನಗರದಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಮೇ 5 ರ ನಂತರ ಬೆಂಗಳೂರಿನಲ್ಲಿ ಮಳೆಯಾಗುವ ನಿರೀಕ್ಷೆಯಿದೆ.
ಮೇ ತಿಂಗಳಲ್ಲಿ ಚಿಕ್ಕಮಗಳೂರು, ಹಾಸನ, ಕೊಡಗು, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ವಿಜಯನಗರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಮಂಡ್ಯ ಮತ್ತು ಚಾಮರಾಜನಗರದ ಕೆಲವು ಭಾಗಗಳಲ್ಲಿ ಲಘು ಮಳೆಯಾಗುವ ನಿರೀಕ್ಷೆಯಿದೆ.
ರಾಜ್ಯದಲ್ಲಿ ಎಲ್ಲೆಲ್ಲಿ ಬಿಸಿ ಗಾಳಿ..
ಬೀದರ್, ಕಲಬುರ್ಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟ, ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಮಂಡ್ಯ, ಬಳ್ಳಾರಿ, ಹಾಸನ, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು, ಚಿಕ್ಕಮಗಳೂರು ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ಪ್ರತ್ಯೇಕ ಸ್ಥಳಗಳಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆಯಿದೆ.

ಇಂದಿನಿಂದ ಮುಂದಿನ 3 ದಿನ ಬೆಂಗಳೂರಿನಲ್ಲಿ ಬಿಸಿ ಗಾಳಿ
ಹೆಚ್ಚುವರಿಯಾಗಿ ಬಿಸಿಗಾಳಿಯು ಮೇ 1, 2, 3, ಮತ್ತು 4 ರಂದು ಬೆಂಗಳೂರು ನಗರದ ಮೇಲೆ ಪರಿಣಾಮ ಬೀರುವ ಮುನ್ಸೂಚನೆ ಇದೆ. ಮುಂದಿನ ಐದು ದಿನಗಳ ಕಾಲ ಬಾಗಲಕೋಟೆ, ಕಲಬುರ್ಗಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಬೆಚ್ಚನೆ ಗಾಳಿ ಬೀಸಲಿದೆ. ಏಪ್ರಿಲ್ 30 ರಿಂದ ಮೇ 4 ರವರೆಗೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಚಿತ್ರದುರ್ಗದಲ್ಲಿ ಜೋಟ್ ಮತ್ತು ಆರ್ದ್ರ ವಾತಾವರಣ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.
ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ನಿರೀಕ್ಷಿತ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಇಲ್ಲ. ಮುಂದಿನ 48 ಗಂಟೆಗಳಲ್ಲಿ ಸ್ಪಷ್ಟವಾದ ಆಕಾಶವಿರಲಿದ್ದು ಮೋಡ ಕವಿದ ವಾತಾವರಣ ಇರುವುದಿಲ್ಲ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಬೆಂಗಳೂರಿನಲ್ಲಿ ಕ್ರಮವಾಗಿ 38 ° C ಮತ್ತು 24 ° C ಆಗಿರುತ್ತದೆ.












Click it and Unblock the Notifications