ಬೆಳಿಗ್ಗೆ ಎದ್ದು ಕಾಲೇಜಿಗೆ ಹೋದರೆ ಕೂರಲು ಜಾಗವಿಲ್ಲ!
ಬೆಂಗಳೂರು, ಸೆ. 4: ಮುಂಜಾನೆ ಸಿದ್ಧರಾಗಿ ಕಾಲೇಜಿಗೆ ತೆರಳಿದರೆ ಅಲ್ಲಿ ಕೂರಲು ಜಾಗವಿಲ್ಲ. ಇನ್ನು ಪಾಠ ಕೇಳುವುದು ಎಲ್ಲಿಂದ ಬಂತು? ಇಂಥದ್ದೊಂದು ಕೆಟ್ಟ ಅನುಭವವನ್ನು ಬೆಂಗಳೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ನೀಡಿದೆ.
ಹೌದು... ಬೆಂಗಳೂರು ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಇಂಥದ್ದೊಂದು ಶಾಕ್ ಟ್ರೀಟ್‌ಮೆಂಟ್‌ಗೆ ಒಳಗಾಗಿದ್ದಾರೆ. ಕಾಲೇಜಿಗೆ ತೆರಳಿದರೆ ನಿಮಗೆ ಕೂರಲು ಜಾಗವಿಲ್ಲ ಬೇರೆಡೆ ತೆರಳಿ ಎಂದು ವಿಶ್ವವಿದ್ಯಾಲಯ ಹೇಳಿದೆ. (ಹೊಳಪು ಕಳೆದುಕೊಳ್ಳುತ್ತಿರುವ ಐಐಎಸ್‌ಸಿ ಬೆಂಗಳೂರು)

ಸುಮಾರು 19 ಜನ ವಿದ್ಯಾರ್ಥಿಗಳು ಸಮಾಜ ಕಾರ್ಯ ವಿಭಾಗಕ್ಕೆ ಪ್ರವೇಶ ಪಡೆದು ರಾಜಾಜಿನಗರದ ಗಂಗಾ ಕಾವೇರಿ ಕಾಲೇಜಿನಲ್ಲಿ ವ್ಯಾಸಂಗ ಆರಂಭಿಸಿದ್ದರು. ಆದರೆ ಕೆಲ ದಿನಗಳ ಹಿಂದೆ ಗಂಗಾ ಕಾವೇರಿ ಕಾಲೇಜಿಗೆ ಬೀಗ ಬಿತ್ತು. ನಂತರ ವಿದ್ಯಾರ್ಥಿಗಳಿಗೆ ಬೆಂಗಳೂರು ವಿಶ್ವವಿದ್ಯಾಲಯ ಅಧೀನದ ಬೇರೆ ಕಾಲೇಜಿನಲ್ಲಿ ವ್ಯಾಸಂಗಕ್ಕೆ ಅವಕಾಶ ಮಾಡಿಕೊಡಲಾಯಿತು.
ಎಲ್ಲ ಸರಿ ಇದ್ದಿದ್ದರೆ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗುತ್ತಿರಲಿಲ್ಲ. ಬದಲಾದ ಕಾಲೇಜಿಗೆ ತೆರಳಿದ ವಿದ್ಯಾರ್ಥಿಗಳಿಗೆ ಪ್ರತಿದಿನ ಒಂದಿಲ್ಲೊಂದು ಕೊರತೆಗಳು ಕಾಡಲಾರಂಭಿಸಿದವು.
ನಮ್ಮ ತಪ್ಪಿಲ್ಲ
ಬಾಗಿಲು ಹಾಕಿದ ಕಾಲೇಜಿನ ಆಡಳಿತ ಮಂಡಳಿ, ಬೆಂಗಳೂರು ವಿಶ್ವವಿದ್ಯಾಲಯದಡಿಯ ಕಾಲೇಜಿನಲ್ಲಿ ವ್ಯಾಸಂಗಕ್ಕೆ ಅವಕಾಶ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿತ್ತು. ಇಲ್ಲವೇ ಮತ್ತೊಂದು ಖಾಸಗಿ ಕಾಲೇಜಿನಲ್ಲಿ ಓದಲು ತಿಳಿಸಿದ್ದರು. ಆದರೆ ನಾವು ಬೆಂಗಳೂರು ವಿಶ್ವವಿದ್ಯಾಲಯವನ್ನೇ ಆಯ್ಕೆ ಮಾಡಿಕೊಂಡೆವು. ಇದರಲ್ಲಿ ನಮ್ಮ ಯಾವುದೇ ತಪ್ಪಿಲ್ಲ ಎಂದು ನೊಂದ ವಿದ್ಯಾರ್ಥಿಯೊಬ್ಬಳು ಹೇಳುತ್ತಾಳೆ.
ವಿಭಾಗಕ್ಕೆ ದಾಖಲಾಗಿದ್ದ ಅಷ್ಟೂ ವಿದ್ಯಾರ್ಥಿಗಳನ್ನು ಬೇರೆ ಬೇರೆ ಕಾಲೇಜಿಗೆ ತೆರಳುವಂತೆ ಸೂಚಿಸಿದ್ದರಿಂದ ಅನಿವಾರ್ಯವಾಗಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ದಾಖಲಾದೆವು. ಮೂರು ಬೇರೆ ಬೇರೆ ಕಾಲೇಜುಗಳಲ್ಲಿ ಅವಕಾಶ ಕಲ್ಪಿಸಲಾಯಿತು.
ಬಾಕಿ ಕಾಲೇಜಿಗೆ ಹೋಲಿಸಿದರೆ ಇಲ್ಲಿ ಶುಲ್ಕ ಕಡಿಮೆಯಿದ್ದದ್ದು ನಮಗೆ ಅನುಕೂಲಕಾರಿಯಾಗಿತ್ತು. ಮೊದಲನೇ ವರ್ಷದ ಅವಧಿಕಗೆ ಗಂಗಾ ಕಾವೇರಿ ಕಾಲೇಜಿಗೆ 19 ಸಾವಿರ ರೂಪಾಯಿ ಶುಲಕ್ ತುಂಬಿದ್ದೇವು. ಇಲ್ಲಿ ಅದು ಕೇವಲ 9ಸಾವಿರ ರೂ. ಆಗಿತ್ತು. ಆದರೆ ಈಗ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಈ ಬಗೆಯ ಸಮಸ್ಯೆ ತಂದಿಡಲಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಖಾಲಿ ಜಾಗ ತುಂಬಿದೆವು
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ವಿಭಾಗದ ರಿಜಿಸ್ಟ್ರಾರ್ ಕೆ.ಕೆ.ಸೀತಮ್ಮ, 60 ಜನ ವಿದ್ಯಾರ್ಥಿಗಳಿಗೆ ಕೊಠಡಿ ಕಲ್ಪಿಸಲು ಸಿದ್ಧವಿದ್ದೇವು. ಆದರೆ ಬೇರೆ ಬೇರೆ ಕಾಲೇಜುಗಳಲ್ಲಿ ಸೀಟುಗಳು ಖಾಲಿ ಇದ್ದುದರಿಂದ ಅಲ್ಲಿಗೆ ದಾಖಲಿಸಲು ತೀರ್ಮಾನ ತೆಗೆದುಕೊಂಡೆವು ಎನ್ನುತ್ತಾರೆ.
ಒಟ್ಟಿನಲ್ಲಿ ಬಾಗಿಲು ಹಾಕಿದ ಕಾಲೇಜು. ಬೆಂಗಳೂರು ವಿಶ್ವವಿದ್ಯಾಲಯದ ಅವೈಜ್ಞಾನಿಕ ನೀತಿ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಅಂಧಕಾರ ಕವಿಯುವಂತೆ ಮಾಡಿರುವುದು ಮೇಲ್ನೋಟಕ್ಕೆ ಸ್ಪಷ್ಟ.












Click it and Unblock the Notifications