ಬೆಂಗಳೂರು ವಿವಿ ಬಿ.ಕಾಂ ಪರೀಕ್ಷೆ ಮುಂದೂಡಿಕೆ
ಬೆಂಗಳೂರು, ಮೇ 5 : ಮಂಗಳವಾರ ಮಧ್ಯಾಹ್ನ ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಬಿ.ಕಾಂ 6ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. 24 ಅಂಕದ ಪ್ರಶ್ನೆಗಳು ಬಹಿರಂಗವಾದ ಕಾರಣ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ವಿವಿ ಕುಲಪತಿ ಪ್ರೊ.ತಿಮ್ಮೇಗೌಡ ಹೇಳಿದ್ದಾರೆ.
ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಮತ್ತು ಮೇ 7 ಮತ್ತು 9ರಂದು ನಡೆಯಬೇಕಿದ್ದ ಬಿ.ಕಾಂ 6ನೇ ಸೆಮಿಸ್ಟರ್‌ನ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇಂದು ಸಂಜೆ ಪರೀಕ್ಷೆ ದಿನಾಂಕದ ವೇಳಾಪಟ್ಟಿ ಪ್ರಕಟವಾಗಲಿದೆ. ರಿಪೀಟರ್ಸ್ ವಿದ್ಯಾರ್ಥಿಗಳಿಗೆ ವೇಳಾಪಟ್ಟಿಯಂತೆ ಇಂದು ಪರೀಕ್ಷೆ ನಡೆಯಲಿದೆ. [ಬೆಂಗಳೂರು ವಿವಿ ವಿಭಜನೆಗೆ ಸಿದ್ದು ಸಂಪುಟ ಅಸ್ತು!]

ಬಿ.ಕಾಂ 6ನೇ ಸೆಮಿಸ್ಟರ್‌ನ ಅಕೌಂಟೆನ್ಸಿ ಮತ್ತು ಟ್ಯಾಕ್ಸ್ ಪತ್ರಿಕೆಯ 16 ಮತ್ತು 8 ಅಂಕಗಳ ಪ್ರಶ್ನೆಗಳು ಸೋಮವಾರ ರಾತ್ರಿಯಿಂದ ವಾಟ್ಸಪ್‌ನಲ್ಲಿ ಹರಿದಾಡುತ್ತಿದ್ದವು. ಮಂಗಳವಾರ ಬೆಳಗ್ಗೆ ಇದನ್ನು ಗಮನಿಸಿದ ವಿವಿ ಆಡಳಿತ ಮಂಡಳಿ ಪ್ರಶ್ನೆಗಳನ್ನು ಪರಿಶೀಲಿಸಿದ್ದು, ಪತ್ರಿಕೆಯಲ್ಲಿರುವ ಪ್ರಶ್ನೆಗಳೇ ಬಹಿರಂಗಗೊಂಡಿವೆ ಎಂದು ಖಚಿತಪಡಿಸಿದೆ. [ಬೆಂಗಳೂರು ವಿಶ್ವವಿದ್ಯಾಲಯ ಒಡೆದು ಮೂರು ಭಾಗ]
ಪ್ರಶ್ನೆಗಳು ಬಹಿರಂಗವಾದ ಹಿನ್ನಲೆಯಲ್ಲಿ ಇಂದು ಮತ್ತು ಮೇ 7, 9ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇಂದು ಸಂಜೆ ಮುಂದಿನ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಪ್ರೊ.ತಿಮ್ಮೇಗೌಡ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.












Click it and Unblock the Notifications