ಬೆಂಗಳೂರಿನ ರಸ್ತೆ ಬದಿ ಸ್ಮೋಕಿಂಗ್ ಝೋನ್ ಬರಲಿದೆ
ಆರೋಗ್ಯ ಸಚಿವ ಯು.ಟಿ.ಖಾದರ್ ಬೆಂಗಳೂರಿನ ಆಯ್ದ ಸ್ಥಳಗಳಲ್ಲಿ ಸ್ಮೋಕಿಂಗ್ ಝೋನ್ ತೆರೆಯುವ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ದಮ್ ಹೊಡೆಯುವ ಜನರಿಗೆ ಕಡಿವಾಣ ಹಾಕಲು ನಿರ್ಧರಿಸಿದ್ದಾರೆ. ಈ ಮೂಲಕ ತಂಬಾಕು ಉತ್ಪನ್ನ ಸೇವನೆ ನಿಷೇಧ ಕಾಯ್ದೆದೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸಿದ್ದಾರೆ.
ಈ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿರುವ ಸಚಿವರು, ಬೆಂಗಳೂರಿನ ಯಾವ ಸ್ಥಳಗಳಲ್ಲಿ ಸ್ಮೋಕಿಂಗ್ ಝೋನ್ ತೆರೆಯಬಹುದು ಎಂದು ಪ್ರಸ್ತಾವನೆ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ. ಈ ಮೂಲಕ ತಂಬಾಕು ಉತ್ಪನ್ನಗಳ ಕಾಯ್ದೆ ಸೆಕ್ಷನ್-4ರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ಕಡಿವಾಣ ನಿರ್ಧರಿಸಲಾಗಿದೆ.
ಆದರೆ, ತಜ್ಞರು ಸರ್ಕಾರದ ಪ್ರಸ್ತಾವನೆಯನ್ನು ಒಪ್ಪುತ್ತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ದಮ್ ಹೊಡೆಯುವ ಜನರಿಗೆ ಕಡಿವಾಣ ಹಾಕಬೇಕು ಎಂಬ ಮಾತನ್ನು ಒಪ್ಪುತ್ತೇವೆ. ಆದರೆ, ಅದಕ್ಕಾಗಿ ಸ್ಮೋಕಿಂಗ್ ಝೋನ್ ತೆರೆಯುವ ಅಗತ್ಯವಿಲ್ಲ. ಈ ಝೋನ್ ಗಳು ಹೋಟೆಲ್, ರೆಸ್ಟೋರೆಂಟ್ ಗಳಿಗೆ ಮಾತ್ರ ಸೀಮಿತವಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಸ್ಮೋಕಿಂಗ್ ಝೋನ್ ತೆರಯುವ ಮೂಲಕ ಧೂಮಪಾನಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲ. ಸರ್ಕಾರ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು, ಜನರಲ್ಲಿ ಜಾಗೃತಿ ಮೂಡಿಸಲು ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
30ಕ್ಕಿಂತ ಹೆಚ್ಚು ಕೋಣೆಗಳಿರುವ ಹೋಟೆಲ್, ಮೂವತ್ತಕ್ಕಿಂತ ಅಧಿಕ ಜನರಿರುವ ರೆಸ್ಟೋರೆಂಟ್, ಪಬ್ ಗಳಲ್ಲಿ ಸ್ಮೋಕಿಂಗ್ ಝೋನ್ ತೆರೆಯಬೇಕಾಗುತ್ತದೆ. ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಝೋನ್ ತೆರೆದರೆ ದಮ್ ಹೊಡೆಯುವದಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲ ಎಂಬ ವಾದವೂ ಇದೆ.
ಕಾಯ್ದೆ ಏನು ಹೇಳುತ್ತದೆ : ತಂಬಾಕು ಉತ್ಪನ್ನಗಳ ಕಾಯ್ದೆ ಸೆಕ್ಷನ್-4ರ ಪ್ರಕಾರ ಸಾರ್ವಜನಿಕ ಸ್ಥಳಗಳ ಧೂಮಪಾನ ಮಾಡಿದರೆ 200ರೂ. ದಂಡ, ಸೆಕ್ಷನ್-5 ಪ್ರಕಾರ ಸಿಗರೇಟ್ ಅಥವಾ ಹೊಗೆಸೊಪ್ಪು ಕುರಿತು ಜಾಹಿರಾತುಗಳನ್ನು ನಿಷೇಧಿಸಲಾಗಿದೆ.
ಸೆಕ್ಷನ್-6 ಪ್ರಕಾರ ಸಿಗರೇಟ್ ಅಥವಾ ಹೊಗೆಸೊಪ್ಪು ಉತ್ಪನ್ನಗಳನ್ನು 18 ವರ್ಷದೊಳಗಿನ ವಯಸ್ಸಿನವರಿಗೆ ಮಾರುವುದು, ಶಾಲಾ ಕಾಲೇಜುಗಳ 100 ಮೀಟರ್ ಸುತ್ತಮುತ್ತ ಸಿಗರೇಟ್, ಹೊಗೆಸೊಪ್ಪು ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ 200ರೂ.ದಂಡ ವಿಧಿಸಲಾಗುತ್ತದೆ.
ಅಂದಹಾಗೆ ಮೈಸೂರು ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ದಮ್ ಹೊಡೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ. ಕಾಯ್ದೆ ಅನುಷ್ಠಾನದ ಮೂಲಕ ಇದುವರೆಗೂ 65,000 ರೂ.ಗಳ ದಂಡವನ್ನು ಧೂಮಪಾನಿಗಳಿಂದ ಸಂಗ್ರಹಿಸಿದ್ದಾರೆ. (ಮೈಸೂರಿನಲ್ಲಿ 'ದಮ್' ಹೊಡೆದ್ರೆ ದಂಡ ಖಚಿತ!)