ಆಯುಧ ಪೂಜೆಗೆ ಕುಂಬಳಕಾಯಿ, ನಿಂಬೆಹಣ್ಣು ಕೇಳೋರೇ ಇಲ್ಲ
ಬೆಂಗಳೂರು, ಸೆಪ್ಟೆಂಬರ್ 28: ಎನ್.ಆರ್.ಕಾಲೋನಿ ರಸ್ತೆಯಲ್ಲಿ ಹೂವು-ಹಣ್ಣು-ಕುಂಬಳಕಾಯಿ-ನಿಂಬೆಹಣ್ಣು ಮಾರುತ್ತಿದ್ದವರ ಮುಖದಲ್ಲಿ ಹಬ್ಬದ ಉತ್ಸಾಹವಿರಲಿಲ್ಲ. ಮೋಡ ಕವಿದ ವಾತಾವರಣದಲ್ಲಿ ಮಾರಾಟ ಮಾಡುವವರ ಮುಖದ ಮೇಲೂ ಚಿಂತೆಯ ಗೆರೆಗಳು ಇಣುಕುತ್ತಿದ್ದವು. "ಹೋದ ವರ್ಷದಷ್ಟು ಜೋರಿಲ್ಲ ಬಿಡಿ ಈ ವರ್ಷದ ಹಬ್ಬ" ಅಂತಲೇ ಮಾತು ಶುರು ಮಾಡುತ್ತಿದ್ದರು.
ಶುಕ್ರವಾರ ಆಯುಧ ಪೂಜೆ ಇದೆ. ಕುಂಬಳಕಾಯಿ, ಬಾಳೆ ಕಂದು, ನಿಂಬೆ ಹಣ್ಣು ವಿಪರೀತ ಬೇಡಿಕೆಯಲ್ಲಿರಬೇಕು. ಇದರ ಜತೆಗೆ ಹೂವು, ಹಣ್ಣು, ತೆಂಗಿನಕಾಯಿ ಸಹ ಗ್ರಾಹಕರಾಗಿ ಕಾದು ಕಳೆಗುಂದಿದಂತೆ ಕಂಡವು. ಇಪ್ಪತ್ತು ರುಪಾಯಿಯಿಂದ ತೀರಾ ಹೆಚ್ಚೆಂದರೆ ನೂರು ರುಪಾಯಿ ಕುಂಬಳ ಕಾಯಿಗೆ.

ಹತ್ತು ರುಪಾಯಿಗೆ ನಾಲ್ಕು ನಿಂಬೆಹಣ್ಣು. ಸೈಜಿನಲ್ಲಿ ಸ್ವಲ್ಪ್ ದಪ್ಪವಿರುವ ನಿಂಬೆಹಣ್ಣು ಇಪ್ಪತ್ತು ರುಪಾಯಿಗೆ ಆರು ಮಾರುತ್ತಿದ್ದರು. ಇಪ್ಪತ್ತು ರುಪಾಯಿಗೆ ಸಣ್ಣ ಸೈಜಿನ ಬಾಳೆ ಕಂದು ದೊರೆಯುತ್ತಿತ್ತು. ಮಲ್ಲಿಗೆ ಹೂವು ಮಾರಿಗೆ ನೂರೈವತ್ತು ರುಪಾಯಿಯಾದರೆ, ಶ್ಯಾಮಂತಿಗೆ ಹೂವು ಮಾರಿಗೆ ನೂರು ರುಪಾಯಿ, ಬಾಳೆಹಣ್ಣು ಕೇಜಿಗೆ ನೂರು ರುಪಾಯಿ ಇತ್ತು. ಉಳಿದ ಹಣ್ಣುಗಳ ಬೆಲೆ ಅದರ ಅಣ್ಣ-ತಮ್ಮಂದಿರಂತೆ ಇದ್ದವು. ನೂರು ರುಪಾಯಿಗೆ ನೂರು ವೀಳ್ಯದೆಲೆ ಮಾರಾಟ ಆಗುತ್ತಿತ್ತು.

ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕು ಮಾಯಸಂದ್ರದಿಂದ ಬಂದು, ಕುಂಬಳಕಾಯಿ ಮಾರುತ್ತಿದ್ದ ಜೀವನ್ ಕುಮಾರ್ ಒನ್ಇಂಡಿಯಾ ಕನ್ನಡಕ್ಕೆ ಮಾತಿಗೆ ಸಿಕ್ಕರು. "ಅದೇನು ಜನರು ಹಬ್ಬ ಮಾಡುವ ಉತ್ಸಾಹವೇ ಕಳೆದುಕೊಂಡು ಬಿಟ್ಟರಾ ಎಂಬ ಅನುಮಾನ ಬರುತ್ತಿದೆ. ಈ ಸಲ ಹಬ್ಬ ಬಹಳ ಡಲ್. ಮಾರ್ಕೆಟ್ ನಲ್ಲಿ ತಮಿಳುನಾಡಿನ ಕುಂಬಳಕಾಯಿ ಬಂದು ಹೀಗೆ ಬೆಲೆ ಬಿದ್ದು ಹೋಗಿದೆಯಾ ಎಂಬ ಅನುಮಾನ ನನ್ನದು" ಎಂದು ದುಗುಡ ತೋಡಿಕೊಂಡರು.

ಇನ್ನು ಕನಕಪುರದಿಂದ ಬಂದಿದ್ದ ಮಹಿಳೆಯೊಬ್ಬರು, ಕುಂಬಳಕಾಯಿ- ಬಾಳೆ ದಿಂಡು ಕಿತ್ತಿಸಿ, ಗಾಡಿಗೆ ಹಾಕಿಕೊಂಡು ಬಂದ ಹಣ ವಾಪಸ್ ಬರೋದು ಕೂಡ ಅನುಮಾನವಾಗಿದೆ. ಹೋದ ವರ್ಷದಂತೆ ಈ ಬಾರಿ ಹಬ್ಬ ಇಲ್ಲ. ವ್ಯಾಪಾರ ಮಾಡೋರು ಸಿಕ್ಕಾಪಟ್ಟೆ ಜಾಸ್ತಿ ಆಗಿದ್ದಾರೆ. ಸರಕು ಕೂಡ ವಿಪರೀತ ಹೆಚ್ಚಾಗಿದೆ. ಮಾರ್ಕೆಟ್ ನಲ್ಲಿ ಬೆಲೆ ಇಲ್ಲದಂತಾಗಿದೆ. ಏನು ಮಾಡಬೇಕು ಅಂತಲೇ ಗೊತ್ತಾಗ್ತಿಲ್ಲ ಎಂದು ಸಂಕಟ ಹೇಳಿಕೊಂಡರು.
ಒಟ್ಟಿನಲ್ಲಿ ತಾವು ತಂದ ಸರಕಿಗೆ ಬೆಲೆ ಸಿಗ್ತಿಲ್ಲ ಅನ್ನೋದು ಮಾರಾಟಗಾರರ ದುಃಖ. ಆದರೆ ಅದೇಕೋ ಗ್ರಾಹಕರೇ ಅತ್ತ ಸುಳಿಯುತ್ತಿಲ್ಲ. ಕಾರಣ ಅಂತೂ ಗೊತ್ತಾಗ್ತಾ ಇಲ್ಲ.












Click it and Unblock the Notifications