ಬೆಂಗಳೂರು : ಮೆಜೆಸ್ಟಿಕ್ ಸುತ್ತ-ಮುತ್ತ ಸಂಚಾರ ದಟ್ಟಣೆ
ಬೆಂಗಳೂರು, ಮಾ.11 : ಬುಧವಾರ ಮತ್ತು ಗುರುವಾರ ಬೆಂಗಳೂರಿನ ಮೆಜೆಸ್ಟಿಕ್ ಸುತ್ತ-ಮುತ್ತ ಬೃಹತ್ ಪ್ರತಿಭಟನೆಗಳನ್ನು ಆಯೋಜಿಸಿರುವುದರಿಂದ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಬುಧವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಗುರುವಾರ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಎರಡೂ ಪ್ರತಿಭಟನೆಗಳ ಹಿನ್ನಲೆಯಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ಸಂಚಾರ ಮಾರ್ಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ. ಬುಧವಾರ ಮತ್ತು ಗುರುವಾರ ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದ ಬಳಿ ಆರಂಭವಾಗುವ ಪ್ರತಿಭಟನಾ ಮೆರವಣಿಗೆ ಫ್ರೀಡಂಪಾರ್ಕ್ ಅನ್ನು ತಲುಪಲಿದೆ.
ಉಪ್ಪಾರಪೇಟೆ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಮೆಜೆಸ್ಟಿಕ್, ಆನಂದರಾವ್ ವೃತ್ತ, ಫ್ರೀಡಂಪಾರ್ಕ್ ಮತ್ತು ಸುತ್ತಮುತ್ತಲಿನ ಸ್ಥಳದಲ್ಲಿ ಕೆಲವು ಗಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಬದಲಿ ಮಾರ್ಗದ ವ್ಯವಸ್ಥೆ ಮಾಡಿದ್ದು, ವಿವರ ಇಲ್ಲಿದೆ.

* ರಾಜಾಜಿನಗರ, ವಿಜಯನಗರ, ಮಲ್ಲೇಶ್ವರಂ ಕಡೆಗಳಿಂದ ಆನಂದರಾವ್ ಫ್ಲೈ ಓವರ್ ಮೂಲಕ ನಗರದ ವಿವಿಧ ಭಾಗಗಳಿಗೆ ಹೋಗುವ ವಾಹನ ಸವಾರರು ಮಲ್ಲೇಶ್ವರಂ ಲಿಂಕ್ ರಸ್ತೆ ಮೂಲಕ ಶೇಷಾದ್ರಿಪುರಂ-ಬಸವೇಶ್ವರ ವೃತ್ತ ತಲುಪಿ ಮುಂದೆ ಸಾಗಬಹುದು.
* ಮಾಗಡಿ ರಸ್ತೆ, ಓಕಳಿಪುರಂ ಜಂಕ್ಷನ್ ಕಡೆಯಿಂದ ಆನಂದರಾವ್ ಫ್ಲೈ ಓವರ್ ಮೂಲಕ ಸಾಗುವವರು ಮಾಗಡಿ ರಸ್ತೆಯ ಹುಣಸೇಮರ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಬಿನ್ನಿಮಿಲ್-ಶಿರಸಿ ಸರ್ಕಲ್-ಸಿಟಿ ಮಾರ್ಕೆಟ್-ಟೌನ್ ಹಾಲ್ ಮೂಲಕ ಮುಂದೆ ಸಾಗಬಹುದು.
* ಬಸವೇಶ್ವರ ಸರ್ಕ್‌ಲ್‌ನಿಂದ ರೇಸ್‌ಕೋರ್ಸ್ ರಸ್ತೆ ಮೂಲಕ ಆನಂದರಾವ್ ವೃತ್ತಕ್ಕೆ ಬರುವವರು ಬಸವೇಶ್ವರ ವೃತ್ತದ ಬಳಿ ಬಲತಿರುವು ಪಡೆದು ಪ್ಯಾಲೇಸ್ ರಸ್ತೆ-ಕೆ.ಆರ್.ವೃತ್ತದ ಮೂಲಕ ಮುಂದೆ ಸಾಗಬಹುದು.
ಬುಧವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಆಯೋಜಿಸಿರುವ ಪ್ರತಿಭಟನೆಯಲ್ಲಿ ಸುಮಾರು 10 ಸಾವಿರ ಜನರು ಮತ್ತು ಗುರುವಾರ ಆಶಾ ಕಾರ್ಯಕರ್ತೆಯರು ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಸುಮಾರು 5 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.












Click it and Unblock the Notifications