BBMP e-Khata: ಗ್ರಾಮ ಪಂಚಾಯಿತಿಯ 2500 ಸತ್ತುಗಳಿಗೆ ಬಿಬಿಎಂಪಿ ಇ-ಖಾತಾ ರಚನೆ
ಬೆಂಗಳೂರು, ಸೆಪ್ಟಂಬರ್ 13: ಬೆಂಗಳೂರು ವ್ಯಾಪ್ತಿಯಲ್ಲಿನ ಗ್ರಾಮ ಪಂಚಾಯಿತಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯೊಂದಿಗೆ ವಿಲೀನಗೊಳಿಸುವ ಮೊದಲು ಪಂಚಾಯಿತಿಯಿಂದ ಇ-ಖಾತಾ ಹೊಂದಿದ್ದ ಆಸ್ತಿಗಳಿಗೆ ಇದೀಗ ಬಿಬಿಎಂಪಿಯು ಸ್ವಯಂಚಾಲಿತ ಇ-ಖಾತಾ ರಚನೆ ಮಾಡಿದೆ. ಇದನ್ನು ಪಡೆಯುವಂತೆ ಆಸ್ತಿ ಮಾಲೀಕರಿಗೆ ಕೋರಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಾಜರಾಜೇಶ್ವರಿ ನಗರ ವಲಯ ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್ ವ್ಯಾಪ್ತಿಯ ಇ-ಸ್ವತ್ತು ತಂತ್ರಾಂಶದಿಂದ ಹಳೆಯ ಗ್ರಾಮ ಪಂಚಾಯಿತಿಯ ಇ-ಖಾತಾ ಹೊಂದಿರುವ ಆಸ್ತಿಗಳಿಗೆ ಸ್ವಯಂಚಾಲಿತವಾಗಿ ಬಿಬಿಎಂಪಿ ಇ-ಖಾತಾ ಪಡೆಯಬಹುದು. ಈ ಕುರಿತು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅಧಿಕೃತ ಮಾಹಿತಿ ನೀಡಿದ್ದಾರೆ.

2500 ಸ್ವತ್ತುಗಳಿಗೆ ಪಾಲಿಕೆಯಿಂದ ಇ-ಖಾತಾ
ಬಿಬಿಎಂಪಿಯೊಂದಿಗೆ ವಿಲೀನಗೊಳಿಸುವ ಮೊದಲು ಗ್ರಾಮ ಪಂಚಾಯಿತಿಯಿಂದ ಇ-ಖಾತಾ ಹೊಂದಿದ್ದ ಮಲ್ಲಸಂದ್ರ ಮತ್ತು ಕಾವಲ್ ಗ್ರಾಮಗಳಲ್ಲಿನ ಸುಮಾರು 2500 ಸ್ವತ್ತುಗಳಿದ್ದವು. ಅವುಗಲಿಗೆ ಬಿಬಿಎಂಪಿಯು ಸ್ವಯಂಚಾಲಿತವಾಗಿ ಎಸ್.ಎ.ಎಸ್. ಆಸ್ತಿತೆರಿಗೆ ಅರ್ಜಿ ಸಂಖ್ಯೆಗಳು ಮತ್ತು ಬಿಬಿಎಂಪಿ ಇ-ಖಾತಾಗಳನ್ನು ರಚನೆ ಮಾಡಿದೆ. ಈ ಮಲ್ಲಸಂದ್ರ ಮತ್ತು ಕಾವಲ್ ಗ್ರಾಮಗಳ ಆಸ್ತಿ ಮಾಲೀಕರು ಪಾಲಿಕೆ ಇ-ಖಾತಾ ಪಡೆಯಬಹುದಾಗಿದೆ.
ಸದರಿ ಗ್ರಾಮಗಳ ಸ್ವತ್ತುಗಳಿಗೆ ಪಂಚಾಯಿತಿ ವತಿಯಿಂದ ಈಗಾಗಲೇ ನೀಡಿರುವ ಇ-ಸ್ವತ್ತು (ಇ-ಖಾತಾ) ಸಂಖ್ಯೆಯನ್ನು ಬಳಸಿಕೊಂಡು ತಮ್ಮ ಸ್ವತ್ತಿನ ಆಸ್ತಿತೆರಿಗೆಯ ಎಸ್.ಎ.ಎಸ್. ಅರ್ಜಿ ಸಂಖ್ಯೆಯನ್ನು ಹುಡುಕಿಕೊಂಡು ಪಾಲಿಕೆಯ ಆಸ್ತಿತೆರಿಗೆಯನ್ನು ಪಾವತಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಒಮ್ಮೆ ನೀವು ಪ್ರಸ್ತುತ ಸಾಲಿನವರೆಗಿನ ಆಸ್ತಿ ತೆರಿಗೆಯನ್ನು ಪಾವತಿಸಿದ ನಂತರ ತಾವು ಬಿಬಿಎಂಪಿಯಿಂದ ಇ-ಖಾತಾವನ್ನು ಪಡೆಯಬಹುದಾಗಿರುತ್ತದೆ. ಒಂದು ಬಾರಿ ಪರಿಹಾರ ಯೋಜನೆ ಅಡಿಯಲ್ಲಿ ನೀವು ಸಂಪೂರ್ಣ ಬಡ್ಡಿ ಮನ್ನಾವನ್ನು ಪಡೆಯುತ್ತೀರಿ ಎಂದು ಅವರು ವಿವರಿಸಿದರು.
ಹೊಸಬರು ಇ-ಖಾತಾ ಹೇಗೆ ಪಡೆಯಬೇಕು
ಇ-ಖಾತಾ ರಚನೆಯ ಮಾಹಿತಿಯನ್ನು ನೀವು ಅಕ್ಕಪಕ್ಕದವರಿಗೂ ತಿಳಿಸಬೇಕು. ಪ್ರತಿಯೊಬ್ಬರಿಗೂ ಈ ಮಾಹಿತಿ ಆಧರಿಸಿಪ್ರಸ್ತುತ ಸಾಲಿನವರೆಗೆ ಆಸ್ತಿ ತೆರಿಗೆಯನ್ನು (bbmptax.karnataka.gov.in) ಪಾವತಿಸುವ ಮೂಲಕ ತಮ್ಮ ಬಿಬಿಎಂಪಿ ಇ-ಖಾತಾವನ್ನು ಸ್ವಯಂಚಾಲಿತವಾಗಿ ಪಡೆದುಕೊಳ್ಳಬಹುದಾಗಿದೆ.
ಒಂದು ವೇಳೆ ಸದರಿ ಪಟ್ಟಿಯಲ್ಲಿ ಸ್ವತ್ತುಗಳು ಇಲ್ಲದಿರುವವರು ಹೊಸ ಇ-ಖಾತಾಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಸದರಿ ಅರ್ಜಿಯನ್ನು ತ್ವರಿತಗತಿಯಲ್ಲಿ ವಿಲೇಮಾಡಿ ಇ-ಖಾತಾವನ್ನು ನೀಡಲಾಗುತ್ತದೆ. ಇದರೊಂದಿಗೆ ಆಸ್ತಿ ತೆರಿಗೆ ಪಾವತಿಸಬೇಕಾದವರು, ಶೀಘ್ರವೇ ಪಾವತಿಸಿ, ಇ-ಖಾತಾ ಕುರಿತು ಖಚಿತತೆ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.












Click it and Unblock the Notifications