Bengaluru Auto Strike; ಸೋಮವಾರ ಬೆಂಗಳೂರಲ್ಲಿ ಆಟೋ ಸೇವೆ ಇಲ್ಲ
ಬೆಂಗಳೂರು ನಗರದಲ್ಲಿ 21 ಆಟೋ ಚಾಲಕರ ಸಂಘಟನೆಗಳಿವೆ. ಸುಮಾರು 2.10 ಲಕ್ಷ ಆಟೋಗಳಿವೆ. ಮಾರ್ಚ್ 20ರ ಸೋಮವಾರ ಆಟೋ ಸೇವೆ ಸ್ಥಗಿತಗೊಳಿಸಿ ಅವರು ಮುಷ್ಕರ ನಡೆಸಲಿದ್ದಾರೆ.
ಬೆಂಗಳೂರು, ಮಾರ್ಚ್ 19; ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ, ನೌಕರರ ಜಂಟಿ ಕ್ರಿಯಾ ಸಮಿತಿ ಮಾರ್ಚ್ 21ರಿಂದ ಕರೆ ನೀಡಿದ್ದ ಮುಷ್ಕರ ವಾಪಸ್ ಪಡೆದಿದ್ದಾರೆ. ಆದರೆ ಬೆಂಗಳೂರು ನಗರದಲ್ಲಿ ಸೋಮವಾರ ಆಟೋ ಚಾಲಕರು ಮುಷ್ಕರ ನಡೆಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ನಗರದಲ್ಲಿ ಬೈಕ್ ಟ್ಯಾಕ್ಸಿ ವಿಚಾರ ಮುಂದಿಟ್ಟುಕೊಂಡು ಹಲವು ಬಾರಿ ಆಟೋ ಚಾಲಕರು ಸರ್ಕಾರದ ಗಮನ ಸೆಳೆದಿದ್ದಾರೆ. ಆದರೆ ಈ ಬಾರಿ ನಿರ್ಣಾಯಕ ಹೋರಾಟಕ್ಕೆ ಅವರು ಮುಂದಾಗಿದ್ದಾರೆ. ಬೆಂಗಳೂರು ಆಟೋ ರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟ ಮಾರ್ಚ್ 20ರ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಆಟೋ ಸೇವೆ ಸ್ಥಗಿತಗೊಳಿಸಲಿದ್ದಾರೆ.

ನಗರದಲ್ಲಿ 21 ಆಟೋ ಚಾಲಕರ ಸಂಘಟನೆಗಳಿವೆ. ಸುಮಾರು 2.10 ಲಕ್ಷ ಆಟೋಗಳಿವೆ. ದೆಹಲಿ, ಮಹಾರಾಷ್ಟ್ರ, ತೆಲಂಗಾಣ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನಿಷೇಧಿಸಲಾಗಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ನಿಷೇಧಿಸಬೇಕು, ಚುನಾವಣೆಗೂ ಮುನ್ನವೇ ಈ ಕುರಿತು ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬೆಂಗಳೂರು ಆಟೋ ರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟ ಸೋಮವಾರ ಬೃಹತ್ ಹೋರಾಟ ನಡೆಸಲಿದೆ.
ಸೋಮವಾರ ಬೆಳಗ್ಗೆ ಬೆಂಗಳೂರು ಆಟೋ ರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಫ್ರೀಡಂಪಾರ್ಕ್ ತನಕ ಬೃಹತ್ ಮೆರವಣಿಗೆ ನಡೆಸಲಾಗುತ್ತದೆ. ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಿ ನಿವಾಸಕ್ಕೆ ಮುತ್ತಿಗೆ ಹಾಕಲಾಗುತ್ತದೆ ಎಂದು ಒಕ್ಕೂಟ ಹೇಳಿದೆ. ಆಟೋ ಚಾಲಕರು ಬೃಹತ್ ಪ್ರತಿಭಟನೆ ನಡೆಸುವ ಕಾರಣ ಸೋಮವಾರ ನಗರದಲ್ಲಿ ಆಟೋ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಆದೇಶ ಹೊರಡಿಸಿ; ಬೆಂಗಳೂರು ಆಟೋ ರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟ ಭಾನುವಾರ ಸಂಜೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೈಕ್ ಟ್ಯಾಕ್ಸಿ ನಿಷೇಧಿಸಿ ಆದೇಶವನ್ನು ಹೊರಡಿಸಬೇಕು. ಇಲ್ಲವಾದಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಬೆಂಗಳೂರು ನಗರದಲ್ಲಿ ಆಟೋ ರಿಕ್ಷಾ ಸೇವೆ ಸ್ಥಗಿತಗೊಳಿಸಿ, ಬೃಹತ್ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದೆ. ಆದರೆ ಸರ್ಕಾರದ ಕಡೆಯಿಂದ ಇದುವರೆಗೂ ಯಾವುದೇ ಸ್ಪಂದನೆ ಸಿಕ್ಕಿಲ್ಲ.
ಸರ್ಕಾರ ಮತ್ತು ಸಾರಿಗೆ ಇಲಾಖೆ ಬೆಂಬಲದಿಂದ ಬೆಂಗಳೂರು ನಗರದಲ್ಲಿ ಎರಡು ವರ್ಷಗಳಿಂದ ಅಪ್ಲಿಕೇಶನ್ ಆಧಾರಿತ ಅನಧಿಕೃತ ವೈಟ್ ಬೋಲ್ಡ್ ಟ್ಯಾಕ್ಸಿಗಳ ಸೇವೆ ಹೆಚ್ಚಾಗಿದೆ. ಇದರಿಂದಾಗಿ ಆಟೋ ಚಾಲಕರಿಗೆ ನಷ್ಟವಾಗುತ್ತಿದೆ. ಆಟೋ ಚಾಲಕರ ಭವಿಷ್ಯಕ್ಕೆ ಮಾರಕವಾಗಿರುವ ಈ ಬೈಕ್ ಟ್ಯಾಕ್ಸಿ ಸೇವೆ ತಕ್ಷಣ ರದ್ದಾಗಬೇಕು ಎಂದು ಬೆಂಗಳೂರು ಆಟೋ ರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟ ಸರ್ಕಾರವನ್ನು ಆಗ್ರಹಿಸಿದೆ.
ಬೆಂಗಳೂರು ಆಟೋ ರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಮಾರ್ಚ್ 17 ರಿಂದ ಮಾರ್ಚ್ 20ರ ತನಕ ಮೂರು ದಿನಗಳ ಕಾಲ ಸರ್ಕಾರಕ್ಕೆ ಗಡುವು ನೀಡಿತ್ತು. ಆದರೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಆದ್ದರಿಂದ ಸೋಮವಾರದಿಂದ ಆಟೋಗಳ ಮೇಲೆ ಕಪ್ಪು ಬಾವುಟ ಪ್ರದರ್ಶನವನ್ನು ಮಾಡಿ ಹೋರಾಟ ನಡೆಸಲು ಆಟೋ ಚಾಲಕರು ನಿರ್ಧರಿಸಿದ್ದಾರೆ. ಈ ಬೇಡಿಕೆಗೆ ಆಟೋ ಚಾಲಕರ ಸಂಘಟನೆಗಳ ವಿವಿಧ ಒಕ್ಕೂಟಗಳು ಸಹ ಬೆಂಬಲವನ್ನು ನೀಡಿವೆ.
ಎಎಪಿ ಒತ್ತಾಯ; ಆಟೋ ಚಾಲಕರ ಆದಾಯಕ್ಕೆ ಹೊಡೆತ ಕೊಡುವ ಅನಧಿಕೃತ ಅಪ್ಲಿಕೇಶನ್ ಆಧಾರಿತ ಬೈಕ್ ಟ್ಯಾಕ್ಸಿಗೆ ಕಡಿವಾಣ ಹಾಕಬೇಕು ಎಂದು ಆಮ್ ಆದ್ಮಿ ಪಕಷ ಸಹ ಸರ್ಕಾರವನ್ನು ಆಗ್ರಹಿಸಿತ್ತು. ಬೈಕ್ ಟ್ಯಾಕ್ಸಿ ಕಾನೂನು ಬಾಹಿರವಾಗಿ ಕಾರ್ಯ ನಿರ್ವಹಣೆ ಮಾಡುತ್ತಿವೆ. ಸರ್ಕಾರದಿಂದ ಯಾವುದೇ ಪರವಾನಗಿ ಪಡೆಯದೇ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿದೆ. ಇದರಿಂದಾಗಿ ಆಟೋ ಚಾಲಕರಿಗೆ ನಷ್ಟ ಉಂಟಾಗುತ್ತಿದೆ ಎಂದು ಎಎಪಿ ಹೇಳಿತ್ತು.











Click it and Unblock the Notifications