ಬೆಂಗಳೂರಿನಲ್ಲಿ ಆಟೋ, ಬೈಕ್ ಟ್ಯಾಕ್ಸಿಗಳ ಘರ್ಷಣೆ ತಜ್ಞರು ಹೇಳೋದೇನು?
ಬೆಂಗಳೂರು, ಮಾರ್ಚ್ 30: ಆಟೋರಿಕ್ಷಾ ಚಾಲಕರು ಮತ್ತು ಬೈಕ್ ಟ್ಯಾಕ್ಸಿ ಸವಾರರ ನಡುವಿನ ಘರ್ಷಣೆ ಮಧ್ಯೆ ಇವೆರಡನ್ನು ಗಮನಿಸಿರುವ ತಜ್ಞರು ಭಾರತದಂತಹ ಅಭಿವೃದ್ಧಿಶೀಲ ಆರ್ಥಿಕತೆಗಳಲ್ಲಿ ಇವೆರಡೂ ವಿಶಿಷ್ಟವಾದ ಸಾರಿಗೆ ವಿಧಾನಗಳಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಟೋ ಹಾಗೂ ಬೈಕ್ ಟ್ಯಾಕ್ಸಿಗಳನ್ನು ನಿಯಂತ್ರಿಸಿದರೆ ಬೆಂಗಳೂರು ಸಾರಿಗೆ ವಿಧಾನಗಳಲ್ಲಿ ಈ ಎರಡೂ ಪೂರಕ ಪಾತ್ರವನ್ನು ಹೊಂದಬಹುದು ಎಂದು ತಿಳಿಸಿದ್ದಾರೆ. ಬೈಕ್ ಟ್ಯಾಕ್ಸಿ ಪರಿಕಲ್ಪನೆಯು ದಶಕಗಳಿಂದ ಇತರ ದೇಶಗಳಲ್ಲಿ ಬಳಕೆಯಲ್ಲಿದೆ. ಇದು ನಗರದಲ್ಲಿ ಸಣ್ಣ ಪ್ರಯಾಣಗಳಿಗೆ ಸಹಾಯ ಮಾಡುತ್ತದೆ ಮತ್ತು ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಒದಗಿಸುತ್ತದೆ ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ.

ನಗರ ಸಾರಿಗೆ ತಜ್ಞೆ ಶ್ರೇಯಾ ಗಡೇಪಲ್ಲಿ ಮಾತನಾಡಿ, ಬೈಕ್ ಟ್ಯಾಕ್ಸಿಗಳು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಪ್ರವೇಶ ಪಡೆದಿವೆ, ಆದರೆ ಅಭಿವೃದ್ಧಿಶೀಲ ಜಗತ್ತಿನಾದ್ಯಂತ, ವಿಶೇಷವಾಗಿ ಆಗ್ನೇಯ ಏಷ್ಯಾ ಮತ್ತು ಆಫ್ರಿಕಾದಾದ್ಯಂತ ಜನಪ್ರಿಯ ಅನೌಪಚಾರಿಕ ಸಾರಿಗೆ ಸೇವೆಯಾಗಿ ದಶಕಗಳಿಂದ ಇವೆ. ಬೈಕ್ ಟ್ಯಾಕ್ಸಿಗಳು ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತವೆ. ಪ್ರಯಾಣಿಕರನ್ನು ತಮ್ಮ ಸ್ಥಳಗಳಿಗೆ ತ್ವರಿತವಾಗಿ ಮತ್ತು ಕಡಿಮೆ ದರದಲ್ಲಿ ತಲುಪಿಸುತ್ತವೆ. ಅವರು ಭಾರತೀಯ ನಗರಗಳಲ್ಲಿ, ವಿಶೇಷವಾಗಿ ಯುವಕರಲ್ಲಿ ಬೇಗ ಪ್ರಚಲಿತವಾಗುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ಅವರು ಹೇಳಿದರು.
ಬೈಕ್ ಟ್ಯಾಕ್ಸಿಗಳು ಆಟೋ ರಿಕ್ಷಾಗಳಿಗೆ ಮಾತ್ರವಲ್ಲದೆ ಕೊನೆಯ ಮೈಲಿ ಸಂಪರ್ಕದ ಕೊರತೆಯಿಂದ ಬಳಲುತ್ತಿರುವ ಬಸ್ ಸೇವೆಗಳಿಗೆ ಸ್ಪರ್ಧೆಯೊಡ್ಡುತ್ತವೆ. ಸಣ್ಣ ಮತ್ತು ಮಧ್ಯಮ ದೂರ ಪ್ರಯಾಣಗಳಿಗೆ ಬೈಕುಗಳು ಸ್ಪರ್ಧಿಸಲು ಕಷ್ಟ. ಆದರೆ ಪ್ರಯಾಣಿಕರು ಮತ್ತು ಚಾಲಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಿಯಂತ್ರಣದ ಅಗತ್ಯ ತುಂಬಾ ಇದೆ ಎಂದು ತಿಳಿಸಿದರು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ತಜ್ಞ ಡಾ. ಆಶಿಶ್ ವರ್ಮಾ, ಆಟೋ ರಿಕ್ಷಾಗಳು ಮತ್ತು ಬೈಕ್ ಟ್ಯಾಕ್ಸಿಗಳೆರಡೂ ವಿಶಿಷ್ಟವಾದ ವಿಧಾನಗಳಾಗಿವೆ. ಇದು ಭಾರತ ಮತ್ತು ಇತರ ದೇಶಗಳಂತಹ ಅಭಿವೃದ್ಧಿಶೀಲ ಆರ್ಥಿಕತೆಗಳಲ್ಲಿ ಹೆಚ್ಚು ವಿಶಿಷ್ಟವಾಗಿದೆ. ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಲ್ಲಿ ಹೆಚ್ಚು ಅಲ್ಲ. ಆಟೋ, ಬೈಕ್ ಟ್ಯಾಕ್ಸಿಗಳೆರಡೂ ಅನಿಯಂತ್ರಿತವಾಗಿದ್ದು, ಇದರಿಂದ ಜೀವನೋಪಾಯಕ್ಕಾಗಿ ಹರಸಾಹಸ ಪಡುವಂತಾಗಿದೆ. ನಿಯಮಿತವಾಗಿ ನಿಯಂತ್ರಿಸಿದರೆ, ಎರಡೂ ಪೂರಕ ಪಾತ್ರಗಳನ್ನು ಹೊಂದಬಹುದು ಎಂದು ಅಭಿಪ್ರಾಯಪಟ್ಟರು.
ಅಗ್ರೇಗೇಟರ್ ಬೈಕ್ ಟ್ಯಾಕ್ಸಿ ಸೇವೆಗಳಿಂದ ತಮ್ಮ ಹೊಟ್ಟೆಪಾಡಿಗೆ ಹೊಡೆತ ಬೀಳುತ್ತಿದೆ ಎಂದು ಬೆಂಗಳೂರು ಆಟೋ ಚಾಲಕರ ಸಂಘ ಆರೋಪಿಸುತ್ತಾ ಬಂದಿದೆ. ಬೈಕ್ ಟ್ಯಾಕ್ಸಿ ಹೊಂದಿರುವವರು ಲೈಸನ್ಸ್ ಹೊಂದಿರುವುದಿಲ್ಲ, ಅಲ್ಲದೆ ಕಡಿಮೆ ಬೆಲೆಗೆ ಸೇವೆ ನೀಡುತ್ತಿರುವುದರಿಂದ ನಮ್ಮ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಬೀಳುವಂತಾಗಿದೆ ಎಂದು ಆಕ್ರೋಶ ವ್ಯಕ್ತಿಸಿದ್ದಾರೆ.
ಇದೇ ಮಾರ್ಚ್ ತಿಂಗಳಲ್ಲಿ ಇಂದಿರಾನಗರ ಮೆಟ್ರೋ ನಿಲ್ದಾಣದ ಬಳಿ ದ್ವಿಚಕ್ರ ವಾಹನ ಟ್ಯಾಕ್ಸಿ ಚಾಲಕನಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಆಟೋ ಚಾಲಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಆಟೋ ಚಾಲಕ ರಾಪಿಡೋ ಚಾಲಕನ ಹೆಲ್ಮೆಟ್ ಒಡೆದು ಹಾಕಿ ದ್ವಿಚಕ್ರ ವಾಹನ ಚಾಲಕನಿಗೆ ಎಚ್ಚರಿಕೆ ನೀಡುತ್ತಿರುವುದು ಕಂಡು ಬಂದಿತ್ತು.
ಇದರ ಮುಂದುವರೆದ ಬೆಳವಣಿಗೆಯಾಗಿ ಬೆಂಗಳೂರು ನಗರದಲ್ಲಿ ಆಟೋ ರಿಕ್ಷಾ ಚಾಲಕರಿಂದ ತಮಗೆ ಆಗುತ್ತಿರುವ ಕಿರುಕುಳದ ವಿರುದ್ಧ ಉಬರ್ ಮತ್ತು ರ‍್ಯಾಪಿಡೊದ 1000ಕ್ಕೂ ಹೆಚ್ಚು ಬೈಕ್ ಟ್ಯಾಕ್ಸಿ ಚಾಲಕರು ಸೋಮವಾರ ಫ್ರೀಡಂ ಪಾರ್ಕ್‌ನಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು. ಬೈಕ್ ಟ್ಯಾಕ್ಸಿ ಅಸೋಸಿಯೇಷನ್‌ನಿಂದ ಆಯೋಜಿಸಲಾಗಿದ್ದ ಮುಷ್ಕರವು ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಯಿತು. ಪ್ರತಿಭಟನೆಯಲ್ಲಿ ಉಬರ್ ಮತ್ತು ರ‍್ಯಾಪಿಡೊ ಬೈಕ್ ಟ್ಯಾಕ್ಸಿ ಚಾಲಕರು ಸುರಕ್ಷಿತ ಕೆಲಸದ ವಾತಾವರಣ ಮತ್ತು ತಮಗೆ ಆಗುತ್ತಿರುವ ಕಿರುಕುಳದಿಂದ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದರು.












Click it and Unblock the Notifications