ಇತಿಹಾಸದಲ್ಲೇ ಆಗಸ್ಟ್ ಬೆಂಗಳೂರಿಗೆ ಅತ್ಯಂತ ಶುಷ್ಕ ಮಾಸ! ಅಂಕಿಅಂಶ ತಿಳಿಯಿರಿ
ಬೆಂಗಳೂರು, ಆಗಸ್ಟ್ 31: ಬೆಂಗಳೂರಿನ ಇತಿಹಾಸದಲ್ಲಿ ಆಗಸ್ಟ್ ತಿಂಗಳು ಶುಷ್ಕ ತಿಂಗಳಾಗಿ ಕಂಡು ಬಂದಿದೆ. ಮಳೆಗಾಲದಲ್ಲಿ ವಿಪರೀತ ಮಳೆ ಅಭಾವವು ಆಗಸ್ಟ್ ತಿಂಗಳಲ್ಲಿ ಕಂಡು ಬಂದಿದೆ.
ಜುಲೈ ನಂತರ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಮಳೆಯ ಪ್ರಮಾಣ ತೀರ ಕುಸಿತವಾಗಿದ್ದು, ತಾಪಮಾನವು ಬೇಸಿಗೆ ಮಾದರಿಯಂತೆ ಕಂಡು ಬಂದಿದೆ. ಇದು ಇತಿಹಾಸದಲ್ಲಿ ಸಾರ್ವಕಾಲಿಕ ಒಣ ತಿಂಗಳಾಗಿದೆ. ಸ್ವತಂತ್ರ ಹವಾಮಾನ ಬ್ಲಾಗರ್‌ಗಳು ಉಲ್ಲೇಖಿಸಿರುವ ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿಯ ಪ್ರಕಾರ, ನಗರದಲ್ಲಿ ಕೇವಲ 12.6 ಮಿಮೀ ಮಳೆಯಾಗಿದೆ ಎಂದು ತಿಳಿದು ಬಂದಿದೆ.

ಹಿಂದಿನ ದಾಖಲೆಯ ಪ್ರಕಾರ ಬೆಂಗಳೂರಿನಲ್ಲಿ 1885 ರಲ್ಲಿ 20.6 ಮಿಮೀ ಆಗಿತ್ತು ಎಂದು ನೆಟಿಜನ್ ರಂಜಿತ್ ಗೌಡ ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ 364.2ಮಿಮೀ ಮಳೆಯಾಗಿದ್ದು, ಇದು ಎರಡನೇ ಅತಿ ಹೆಚ್ಚು ಮಳೆಯಾಗುವ ತಿಂಗಳಾಗಿದೆ.
ನಗರದಲ್ಲಿಯೂ ತಾಪಮಾನದಲ್ಲಿ ಕೊಂಚ ಏರಿಕೆಯಾಗುತ್ತಿದೆ. IMD ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಸಾಮಾನ್ಯಕ್ಕಿಂತ 4 ಡಿಗ್ರಿ ಕಡಿಮೆಯಾಗಿದೆ. ಮುಂದಿನ ಐದು ದಿನಗಳವರೆಗೆ ಬೆಂಗಳೂರು ನಗರದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 31 ಮತ್ತು 20 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ ಎಂದು ಹವಾಮಾನ ಸಂಸ್ಥೆ ಮುನ್ಸೂಚನೆ ನೀಡಿದೆ.
ಮಳೆ ಕೊರತೆ ತಂದ ಆತಂಕ:
2022 ಕ್ಕೆ ಹೋಲಿಸಿದರೆ ಈ ವರ್ಷ ಮುಂಗಾರು ತಡವಾಗಿ ಮುಂದುವರೆದಿದ್ದರಿಂದ ಜೂನ್ ಆರಂಭದಲ್ಲಿ ರಾಜ್ಯವು ತೀವ್ರ ಮಳೆ ಕೊರತೆಯನ್ನು ಎದುರಿಸಿತು. ಕಳೆದ ವರ್ಷ ಕೇರಳದಲ್ಲಿ ಪ್ರಾರಂಭವಾದ ಮಾನ್ಸೂನ್ ನಂತರ ಮೇ ಅಂತ್ಯದ ವೇಳೆಗೆ ಕರ್ನಾಟಕದ ಕೆಲವು ಭಾಗಗಳಿಗೆ ಮುಂದುವರೆದಿದೆ ಎಂದು IMD ವಿಜ್ಞಾನಿ ಹೇಳಿದ್ದಾರೆ.
ಆದಾಗ್ಯೂ, ಈ ವರ್ಷ ಅದರ ನೆರೆಯ ಕೇರಳದಲ್ಲಿ ತಡವಾಗಿ ಆರಂಭವಾದ ನಂತರ ಕರ್ನಾಟಕದಲ್ಲಿ ನೈಋತ್ಯ ಮಾನ್ಸೂನ್‌ನ ಪ್ರಗತಿಯು ಜೂನ್ 10 ರಂದು ಪ್ರಾರಂಭವಾಯಿತು. ರಾಜ್ಯವು ಮುಂಬರುವ ಕಠಿಣ ದಿನಗಳನ್ನು ನೋಡುತ್ತದೆ ಎಂಬುದು ಒಂದು ಬೇಸರದ ಮಾತಾಗಿದೆ. ಸೆಪ್ಟೆಂಬರ್‌ನಲ್ಲಿ ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಗಮನಾರ್ಹ ಪ್ರಮಾಣದ ಮಳೆಯಾಗದಿದ್ದರೆ, ರಾಜ್ಯದ ಹಲವು ಭಾಗಗಳಲ್ಲಿ ತೀವ್ರ ನೀರಿನ ಕೊರತೆ ಕಂಡುಬರುತ್ತದೆ. ಈ ವರ್ಷ ಮಳೆ ಕಡಿಮೆಯಾಗಿ ಇಳುವರಿ ಕಡಿಮೆಯಾಗುವ ಕುರಿತು ರೈತರು ಈಗಾಗಲೇ ಆತಂಕ ವ್ಯಕ್ತಪಡಿಸಿದ್ದಾರೆ.
IMD ದತ್ತಾಂಶದ ಪ್ರಕಾರ, ಜೂನ್ 1 ಮತ್ತು ಆಗಸ್ಟ್ 30 ರ ನಡುವೆ ರಾಜ್ಯದಲ್ಲಿ ನಿಜವಾದ ಸಂಚಿತ ಮಳೆ 522.2 ಮಿಮೀ. ಸಾಮಾನ್ಯ 664.8 ಮಿಮೀಗಿಂತ 21 ಮಿಮೀ ಕಡಿಮೆಯಾಗಿದೆ. ಇದೇ ಅವಧಿಯಲ್ಲಿ ಬೆಂಗಳೂರಿನಲ್ಲಿ 202.2 ಮಿಮೀ ಮಳೆಯಾಗಿದ್ದು, ಇದು ಸಾಮಾನ್ಯ 275.8 ಮಿಮೀಗಿಂತ 27 ಮಿಮೀ ಕಡಿಮೆ ಮಳೆಯಾಗಿದೆ.
ಕರಾವಳಿ ಕರ್ನಾಟಕ, ಉತ್ತರ ಒಳ ಕರ್ನಾಟಕ ಮತ್ತು ದಕ್ಷಿಣ ಒಳ ಕರ್ನಾಟಕದಲ್ಲಿ ಅನುಕ್ರಮವಾಗಿ 18 ಮಿಮೀ, 11 ಮಿಮೀ ಮತ್ತು 31 ಮಿಮೀ ಮಳೆ ಕೊರತೆಯಾಗಿದೆ ಎಂದು ಐಎಂಡಿ ಅಂಕಿಅಂಶಗಳು ತಿಳಿಸಿವೆ.












Click it and Unblock the Notifications