ಅಸುರಕ್ಷಿತ ಎಟಿಎಂಗಳಿಗೆ ಮತ್ತೆ ಬೀಗ ಬೀಳಲಿದೆ
ಬೆಂಗಳೂರು, ಜ.13 : ನಗರದ ಎಟಿಎಂಗಳಲ್ಲಿ ಭದ್ರತಾ ವ್ಯವಸ್ಥೆ ಕೈಗೊಳ್ಳಲು ಪೊಲೀಸರು ಬ್ಯಾಂಕುಗಳಿಗೆ ನೀಡಿದ್ದ 45 ದಿನಗಳ ಗಡುವು ಅಂತಿಮಗೊಂಡಿದೆ. ಆದರೂ ಭದ್ರತಾ ವ್ಯವಸ್ಥೆ ಕೈಗೊಳ್ಳದ ಎಟಿಎಂಗಳಿಗೆ ಬೀಗ ಜಡಿಯಲು ಪೊಲೀಸರು ನಿರ್ಧರಿಸಿದ್ದು, ಸೋಮವಾರದಿಂದ ಈ ಕಾರ್ಯಾಚರಣೆ ಆರಂಭವಾಗಲಿದೆ.
ನ.19ರಂದು ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಜ್ಯೋತಿ ಉದಯ್ ಮೇಲೆ ಹಲ್ಲೆ ನಡೆದ ನಂತರ ಎಟಿಎಂಗಳಲ್ಲಿ ಭದ್ರತಾ ಸಿಬ್ಬಂದಿ ನೇಮಕ, ಸಿಸಿಟಿವಿ ಅಳವಡಿಕೆ ಮತ್ತು ಅಲರಾಂ ಅಳವಡಿಕೆಗೆ ಬ್ಯಾಂಕುಗಳಿಗೆ ಪೊಲೀಸರು 45 ದಿನಗಳ ಕಾಲಾವಕಾಶ ನೀಡಿದ್ದರು. ಸದ್ಯ ಸಮಯಾವಕಾಶ ಪೂರ್ಣಗೊಂಡಿದ್ದು, ಭದ್ರತೆ ಇಲ್ಲದ ಎಟಿಎಂಗಳನ್ನು ಮುಚ್ಚಲು ತಯಾರಿ ನಡೆಸಿದ್ದಾರೆ. [ಮತ್ತೆ ಎಟಿಎಂ ಮುಚ್ಚಲು ಪೊಲೀಸರ ನಿರ್ಧಾರ]

ಸೋಮವಾರದಿಂದ ಈ ಕಾರ್ಯಾಚರಣೆಯನ್ನು ಪೊಲೀಸರು ಆರಂಭಿಸಲಿದ್ದು, ಭದ್ರತಾ ಸಿಬ್ಬಂದಿ, ಸಿಸಿಟಿವಿ, ಅಲರಾಂ ವ್ಯವಸ್ಥೆ ಇಲ್ಲದ ಎಟಿಎಂಗಳನ್ನು ಮುಚ್ಚಲಿದ್ದಾರೆ. ಬ್ಯಾಂಕುಗಳು ಪೊಲೀಸರಿಗೆ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು. ಅದರಂತೆ ಸಮಯಾವಕಾಶವನ್ನು ನೀಡಿದ್ದರು. ಆದರೂ ಭದ್ರತಾ ಕ್ರಮ ಕೈಗೊಳ್ಳದಿದ್ದರೆ ಎಟಿಎಂ ಬಂದ್ ಆಗಲಿದೆ. [ಎಟಿಎಂಗಳಿಗೆ 45 ದಿನ ಡೆಡ್ ಲೈನ್]
ಎಟಿಎಂಗಳಲ್ಲಿ ಗ್ರಾಹಕರ ಭದ್ರತೆಗೆ ಬ್ಯಾಂಕುಗಳಿಗೆ ಗಡುವು ಕೊಡಲಾಗಿತ್ತು. ಸದ್ಯ ಗಡುವು ಮುಗಿದಿದ್ದು, ಈ ಕುರಿತು ಚರ್ಚಿಸಲು ಅಧಿಕಾರಿಗಳ ಸಭೆ ಕರೆಯಲಾಗಿದೆ. ಎಟಿಎಂ ಕೇಂದ್ರಗಳ ಭದ್ರತೆ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಎಟಿಎಂಗಳಲ್ಲಿ ಭದ್ರತಾ ಸಿಬ್ಬಂದಿಗಳಿದ್ದರೆ ಹಣ ಮತ್ತು ಅಲ್ಲಿಗೆ ಬರುವ ಗ್ರಾಹಕರು ಸುರಕ್ಷಿತವಾಗಿರುತ್ತಾರೆ. ಆದ್ದರಿಂದ ಈ ನಿಯಮ ಜಾರಿಗೆ ತರಲಾಗಿದೆ. ಬ್ಯಾಂಕುಗಳಿಗೆ ಸಿಸಿಟಿವಿ ಮತ್ತು ಅಲಾರಂ ವ್ಯವಸ್ಥೆ ಅಳವಡಿಸಲು 45ದಿನಗಳ ಕಾಲಾವಕಾಶ ನೀಡಲಾಗಿದೆ. ಈಗ ಗಡುವು ಮುಗಿದಿದ್ದು, ನಿಯಮ ಪಾಲಿಸದ ಎಟಿಎಂಗಳನ್ನು ಮತ್ತೆ ಮುಚ್ಚಲು ಪೊಲೀಸರು ನಿರ್ಧರಿಸಿದ್ದಾರೆ.












Click it and Unblock the Notifications