ATM Van Robbery: ಅಪರಾಧದಲ್ಲಿ ಪೊಲೀಸರು ಭಾಗಿಯಾದ್ರೆ ನಿರ್ದಾಕ್ಷಿಣ್ಯ ಕ್ರಮ: ಜಿ.ಪರಮೇಶ್ವರ ಖಡಕ್ ಎಚ್ಚರಿಕೆ
ಬೆಂಗಳೂರು, ನವೆಂಬರ್ 23: ಬೆಂಗಳೂರಲ್ಲಿನ 7.11 ಕೋಟಿ ರೂಪಾಯಿ ದರೋಡೆ ಪ್ರಕರಣದಲ್ಲಿ ಏಳು ಆರೋಪಿಗಳನ್ನು ಬೆಂಗಳೂರು ನಗರ ಪೊಲೀಸರು ಹಿಡಿದಿದ್ದಾರೆ. ಇನ್ನು ಕೆಲವರು ಸಿಗಬೇಕಿದೆ. ಪ್ರಕರಣದಲ್ಲಿ ಇಲಾಖೆಯ ಒಬ್ಬ ವ್ಯಕ್ತಿ ಭಾಗಿಯಾಗಿದ್ದ. ಮೂರು ವಿಶೇಷ ತಂಡಗಳು ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಗೃಹ ಸಚಿವರ ಜಿ.ಪರಮೇಶ್ವರ ಹೇಳುದರು. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಎಚ್ಚರಿಕೆ ವಹಿಸುವಂತೆ ಹಿರಿಯ ಅಧಿಕಾರಿಗಳಿಗೆ ಕೆಲ ಸೂಚನೆಗಳನ್ನು ಕೊಟ್ಟಿದ್ದೇನೆ ಎಂದು ಮಾಹಿತಿ ನೀಡಿದರು.
ಭಾನುವಾರ ಸದಾಶಿವನಗರದ ನಿವಾಸದಲ್ಲಿ ನಗರ ಪೊಲೀಸ್ ಆಯುಕ್ತರಾದ ಸೀಮಾಂತ್ ಕುಮಾರ್ ಸಿಂಗ್, ಜಂಟಿ ಪೊಲೀಸ್ ಆಯುಕ್ತರಾದ ಅಜಯ್ ಹಿಲೋರಿ, ವಂಶಿಕೃಷ್ಣ ಅವರೊಂದಿಗೆ ಪ್ರಕರಣದ ತನಿಖೆಯ ಕುರಿತು ಚರ್ಚಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರು.

ನಗರ ಪೊಲೀಸ್ ಆಯುಕ್ತರು ಸೇರಿದಂತೆ ಪ್ರಕರಣದ ಜವಾಬ್ದಾರಿ ವಹಿಸಿಕೊಂಡ ಇಬ್ಬರು ಜಂಟಿ ಪೊಲೀಸ್ ಆಯುಕ್ತರಿಗೆ, ಇಬ್ಬರು ಡಿಸಿಪಿಗಳು ಮತ್ತು 200ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಬೆಂಗಳೂರಿನಲ್ಲಿ ಇಂಥ ಘಟನೆಯಾದಾಗ ಯಾರು ಕೂಡ ನಂಬಲು ಸಾಧ್ಯವಾಗಿರಲಿಲ್ಲ. ಬೆಂಗಳೂರಿಗೆ ಕೆಟ್ಟ ಹೆಸರು ಬರುವ ರೀತಿ ಕೃತ್ಯ ಅಗಿತ್ತು. ಈ ಘಟನೆ ಪೊಲೀಸ್ ಇಲಾಖೆಗೂ ಸವಾಲಾಗಿತ್ತು. 6.29 ಕೋಟಿ ರೂ. ಹಣ ಸಿಕ್ಕಿದೆ. ಬಾಕಿ ಹಣ ಪತ್ತೆ ಮಾಡಲಿದ್ದಾರೆ ಎಂದರು.
ಪೊಲೀಸ್ ಇಲಾಖೆಗೆ ಈ ಎಟಿಎಂ ವ್ಯಾನ್ ನಿಂದ ಹಣ ದರೋಡೆ ಸವಾಲಾಗಿತ್ತು. ತಾಂತ್ರಿಕವಾಗಿ, ಬಹಳ ಎಚ್ಚರಿಕೆಯಿಂದ ಬುದ್ಧಿ ಉಪಯೋಗಿಸಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಕೆಲಸ ಮಾಡಿ ಪ್ರಕರಣವನ್ನು ಭೇದಿಸಿದ್ದಾರೆ. ದರೋಡೆ ಮಾಡಿದವರು ಬಹಳ ಎಚ್ಚರಿಕೆಯಿಂದ ಕೃತ್ಯ ಎಸಗಿದ್ದರು. ಅದೆಲ್ಲವೂ ಕೂಡ ಈಗ ತನಿಖೆಯಿಂದ ಗೊತ್ತಾಗುತ್ತಿದೆ ಎಂದು ತಿಳಿಸಿದರು.
ಕೃತ್ಯದಲ್ಲಿ ಭಾಗಿಯಾದ್ರೆ ಸೇವೆಯಿಂದ ವಜಾ: ಖಡಕ್ ಎಚ್ಚರಿಕೆ
ಮಾಧ್ಯಮದವರು ಸಹ ಪೊಲೀಸ್ ಇಲಾಖೆಯನ್ನು ಎಚ್ಚರಿಸುವ ರೀತಿಯಲ್ಲಿ ಸುದ್ದಿಗಳನ್ನು ಮಾಡಿದ್ದೀರಿ. ಘಟನೆಗೆ ಸಂಬಂಧಿಸಿದಂತೆ ಇನ್ನುಮುಂದೆ ಇಲಾಖೆಯಲ್ಲಿ ಎಚ್ಚರಿಕೆಯಿಂದ ಇರಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ರೀತಿಯ ಕೃತ್ಯದಲ್ಲಿ ಯಾರಾದರು ಭಾಗಿಯಾಗುವುದು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು. ಇಲಾಖೆಯ ಸೇವೆಯಿಂದ ವಜಾಗೊಳಿಸುವುದು ಸೇರಿದಂತೆ ಮುಲಾಜಿಲ್ಲದೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ನಿನ್ನೆ ಕೋರಮಂಗಲದಲ್ಲಿಯೂ ಘಟನೆ ನಡೆದಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಏಜೆನ್ಸಿಯವರು ಆರ್‌ಬಿಐ ಮಾರ್ಗಸೂಚಿಗಳನ್ನು ಪಾಲಿಸಿದ್ದಾರೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಇದಕ್ಕೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಬಗ್ಗೆ ಮಾತನಾಡಿದ ಅವರು, ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ಸಮಸ್ಯೆಯೇ ಇಲ್ಲ. ಯಾರ ಮನೆಗೆ ಹೋದರೆ ಸುದ್ದಿ ಮಾಡುತ್ತೀರ. ಕೆಲಸ ಇರುತ್ತೆ ಹೋಗಿರುತ್ತಾರೆ. ಸತೀಶ್ ಜಾರಕಿಹೊಳಿ ಮನೇಲಿ ನಾವು ಐದು ಜನ ಸೇರಿ ಊಟ ಮಾಡಿದ್ದೆವು. ಅದು ತಪ್ಪಾ? ಭೇಟಿ ವೇಳೆ ರಾಜಕೀಯನೂ ಮಾತಾಡಿರುತ್ತೇವೆ. ಸರ್ಕಾರದಲ್ಲಿ ಮಂತ್ರಿಗಳಿರುವುದರಿಂದ ಇಲಾಖೆಯಲ್ಲಿ ಏನೆಲ್ಲ ಕೆಲಸಗಳಾಗಬೇಕು ಅದರ ಬಗ್ಗೆನು ಚರ್ಚೆ ಮಾಡಿರುತ್ತೇವೆ. ಭೇಟಿಯಾದಾಗ ಏನು ಮಾತಾಡಬಾರದೆ? ಯಾಕೆ ನಿಮಗೆ ಇಷ್ಟೊಂದು ಆಸಕ್ತಿ ಎಂದು ಕೇಳಿದರು. ಸಿಎಂ ಬದಲಾವಣೆ, ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಹೈಕಮಾಂಡ್ ನಿರ್ಧಾರ ಅಂತಿಮ ಎಂದರು.












Click it and Unblock the Notifications