ಟೆಕ್ಕಿ ಮೇಲೆ ಲೈಂಗಿಕ ದೌರ್ಜನ್ಯ, ಜ್ಯೋತಿಷಿ ಬಂಧನ
ಬೆಂಗಳೂರು, ನ. 22 : ಮದುವೆ ಬಗ್ಗೆ ಭವಿಷ್ಯ ಕೇಳಲು ಹೋದ ಸಾಫ್ಟ್‌ವೇರ್ ಇಂಜಿನಿಯರ್ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಜ್ಯೋತಿಷಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಹೊಯ್ಸಳ ನಗರದಲ್ಲಿ ಘಟನೆ ನಡೆದಿದ್ದು, ಜ್ಯೋತಿಷಿಯ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ.
ನಗರದ ಎಲೆಕ್ಟ್ರಾನಿಕ್ ಸಿಟಿಯ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಪಶ್ಚಿಮ ಬಂಗಾಳದ ಯುವತಿ ಮೇಲೆ ಜ್ಯೋತಿಷಿ ದಾಮೋಧರನ್ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಬುಧವಾರ ಯುವತಿ ಮತ್ತು ಆಕೆಯ ಸ್ನೇಹಿತೆ ದಾಮೋಧರನ್ ಮನೆಗೆ ತೆರಳಿದ್ದಾಗ ಈ ಘಟನೆ ನಡೆದಿದ್ದು, ಈ ಕುರಿತು ಯುವತಿ ದೂರು ನೀಡಿದ್ದಾಳೆ. [ಕೊಪ್ಪಳದಲ್ಲಿ ಸಿಕ್ಕಿಬಿದ್ದ ನಕಲಿ ಕಾಮಿ ಸ್ವಾಮಿ]

ಯುವತಿಗೆ ಕುಡಿಯಲು ತೀರ್ಥದಂತಹ ಪದಾರ್ಥ ನೀಡಿದ ಜ್ಯೋತಿಷಿ ನಂತರ ಆಕೆಯನ್ನು ಕೊಠಡಿಯೊಂದಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಯುವತಿ ಜೊತೆ ಬಂದಿದ್ದ ಸ್ನೇಹಿತೆಯನ್ನು ಹೊರಗೆ ಕಳಿಸಿದ್ದ ಆತ ಈ ಕೃತ್ಯ ನಡೆಸಿದ್ದಾನೆ ಎಂದು ಯುವತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ. [ಯೂಟ್ಯೂಬಲ್ಲಿ ಹೊಸ ಅಲೆ ಎಬ್ಬಿಸಿದ ಇನ್ಫಿ ಹುಡುಗ್ರು]
ದೌರ್ಜನ್ಯ ನಡೆಯುವ ಸಂದರ್ಭದಲ್ಲಿ ಜ್ಯೋತಿಷಿ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ. ದೌರ್ಜನ್ಯ ನಡೆಸಿದ ನಂತರ ಯುವತಿಗೆ ಮರುದಿನ ಪುನಃ ಬರುವಂತೆ ಆತ ಒತ್ತಾಯ ಮಾಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸುಮಾರು ಮೂರು ಗಂಟೆಗಳ ಕಾಲ ಕೊಠಡಿಯಲ್ಲಿ ಯುವತಿಯನ್ನು ಕೂಡಿ ಹಾಕಿದ್ದ ಜ್ಯೋತಿಷಿ, ಒಂದು ಗಂಟೆ ಆಕೆಯ ಭವಿಷ್ಯದ ಬಗ್ಗೆ ಮಾತನಾಡಿ, ಆಕೆಯಲ್ಲಿ ನಂಬಿಕೆ ಬರುವಂತೆ ಮಾಡಿ ನಂತರ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಜ್ಯೋತಿಷಿ ಮನೆಯಿಂದ ಹೊರಗೆ ಬಂದ ಯುವತಿ ಸ್ನೇಹಿತೆಗೆ ಈ ಬಗ್ಗೆ ಮಾಹಿತಿ ನೀಡಿದ್ದು, ನಂತರ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಯುವತಿ ದೂರಿನ ಅನ್ವಯ ಪೊಲೀಸರು ದಾಮೋಧರ್‌ನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications