Bengaluru: ಬಿಜೆಪಿ ಆಡಳಿತ ಹೇಗಿದೆ: ಎಲ್ಲ ವರ್ಗದವರಿಂದ ಪ್ರತಿಭಟನೆ ನಡೆಯುತ್ತಿದೆ
ರಾಜ್ಯ ವಿಧಾನಸಭಾ ಚುಣಾವಣೆ ಭಾಗವಾಗಿ ಬೆಂಗಳೂರಲ್ಲಿ ಆಮ್ ಆದ್ಮಿ ಪಾರ್ಟಿಯ ನೂರಾರು ಕಾರ್ಯಕರ್ತರು 'ಪೊರಕೆಯೇ ಪರಿಹಾರ' ಎಂಬ ಸ್ವಚ್ಛತಾ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿತು. ಈ ವೇಳೆ ಬಿಜೆಪಿ ಆಡಳಿತದ ಮೇಲೆ ಬೆಳಕು ಚೆಲ್ಲಲಾಯಿತು.
ಬೆಂಗಳೂರು, ಫೆಬ್ರವರಿ 15: ಸಮೀಪಿಸುತ್ತಿರುವ ರಾಜ್ಯ ವಿಧಾನಸಭಾ ಚುಣಾವಣೆ ಭಾಗವಾಗಿ ಬೆಂಗಳೂರಲ್ಲಿ ಆಮ್ ಆದ್ಮಿ ಪಾರ್ಟಿ (AAP) ಮುಖಂಡರು ಸೇರಿದಂತೆ ನೂರಾರು ಕಾರ್ಯಕರ್ತರು 'ಪೊರಕೆಯೇ ಪರಿಹಾರ' ಹೆಸರಿನ ಸ್ವಚ್ಛತಾ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿತು. ಈ ವೇಳೆ ಮೆರವಣಿಗೆ ನಡೆಸಿ ನಗರದಲ್ಲಿ ಬಿಜೆಪಿ ಮಾಡಿದ ಕಾರ್ಯಕ್ರಗಳು, ಆಡಳಿತ ಬಗ್ಗೆ ಬೆಳಕು ಚೆಲ್ಲಿದರು.
ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ನೇತೃತ್ವದಲ್ಲಿ ಆರಂಭವಾದ ಅಭಿಯಾನವು ನಗರದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ'ದಿಂದ ಆರಂಭವಾಗಿ ಮೆರವಣಿಗೆ ಮೂಲಕ ಸ್ವಾತಂತ್ರ್ಯ ಉದ್ಯಾನಕ್ಕೆ ಬಂದು ತಲುಪಿತು. ಇದೇ ವೇಳೆ ಬಹಿರಂಗ ಸಭೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಪೃಥ್ವಿ ರೆಡ್ಡಿ ಅವರು, ನಾವಿರುವ ಸ್ಥಳ (ಸ್ವಾತಂತ್ರ್ಯ ಉದ್ಯಾನ) ಗಮನಿಸಿದರೆ ಸಾಕು ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಹೇಗೆ ಆಡಳಿತ ನಡೆಸಿದೆ ಎಂದು ತಿಳಿಯುತ್ತದೆ. ವಿವಿಧ ಸರ್ಕಾರಿ ನೌಕರರು, ಕಾರ್ಮಿಕರು, ಶಿಕ್ಷಕರು, ಉಪನ್ಯಾಸಕರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಸೇರಿದಂತೆ ಅನೇಕ ವರ್ಗಗಳ ಜನರು ಇಲ್ಲಿ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದೆ. ಇಲ್ಲಿ ಪ್ರತಿಭಟನೆ ಸಾಮಾನ್ಯ ಎಂಬಂತಾಗಿದೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ ಎಂದು ಕಿಡಿ ಕಾರಿದರು.

ಇಂತಹ ಆಡಳಿತಕ್ಕೆ ಜನರು ಅಂತ್ಯ ಹಾಡಲು ಜನರು ನಿರ್ಧರಿಸಿದ್ದಾರೆ. ಭ್ರಷ್ಟಾಚಾರ, ಅನ್ಯಾಯ, ಅಕ್ರಮದಂತಹ ಸಾಕಷ್ಟು ಕಸಗಳಿಗೆ ಪೊರಕೆಯೇ ಪರಿಹಾರವಾಗಿದೆ. ಈ ಬಾರಿ ಚುನಾವಣೆಯಲ್ಲಿ ರಾಜ್ಯದ ಜನರು ನಮ್ಮ ಎಎಪಿ ಪಕ್ಷವನ್ನೇ ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಸವಾಲು ಸ್ವೀಕರಿಸಿದ ಎಎಪಿ
ದಶಕದ ಹಿಂದೆ ಇಲ್ಲಿ ನಾವು ಭ್ರಷ್ಟಾಚಾರ ವಿರೋಧಿ ಭಾರತ ಹೆಸರಿನಲ್ಲಿ ಪ್ರತಿಭಟನೆ ಮಾಡಿದ್ದೇವು. ಆಗ, ರಾಜಕೀಯ ಪ್ರವೇಶಿಸಿ ನಂತರ ಮಾತಾಡಿ ಎಂದು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ನಮಗೆ ಸವಾಲು ಹಾಕಿತ್ತು. ರಾಜಕೀಯ ಪ್ರವೇಶಿಸುವ ಇಚ್ಛೆ ಇಲ್ಲದ ನಾವು ಕಾಂಗ್ರೆಸ್ ಸವಾಲು ಎಎಪಿ ಪಾರ್ಟಿ ರಚಿಸಿದೆವು. ನಂತರ ಜನ ವಿರೋಧಿ ಆಡಳಿತ ಕೊನೆಗಾಣಿಸುತ್ತಾ ಸಾಗಿದೆವು. ಎಎಪಿ ಎರಡು ರಾಜ್ಯಗಳಲ್ಲಿ ಅಧಿಕಾರಕ್ಕೆ ಹಿಡಿದು ಪಾರದರ್ಶಕ ಆಡಳಿತ ನೀಡುತ್ತಿದೆ. ರಾಷ್ಟ್ರೀಯ ಪಕ್ಷವಾಗಿ ಹೊರ ಹೊಮ್ಮಿದೆ. ಅದೇ ರೀತಿ ಕರ್ನಾಟಕದ ಭ್ರಷ್ಟ, ಜನವಿರೋಧಿ ಸರ್ಕಾರ ಕಿತ್ತೊಗೆದು ಎಎಪಿ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಎಎಪಿ ರಾಜ್ಯ ಕಾರ್ಯಾಧ್ಯಕ್ಷ ಮೋಹನ್ ದಾಸರಿ ಅವರು, ಆಪರೇಷನ್ ಕಮಲದ ಮೂಲಕ ಅನೈತಿಕವಾಗಿ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದೆ. ಅವರು ನಿರಂತರ ಅಕ್ರಮ ಮಾಡುತ್ತಲೇ ಬಂದಿದ್ದಾರೆ. ಹಲವು ಹಗರಣಗಳ ಆರೋಪಗಳು ದಾಖಲೆ ಸಹಿತ ಹೊರಬಂದಿವೆ. ಆದರೂ ಸೂಕ್ತ ತನಿಖೆ ನಡೆಸಲು ಮುಂದಾಗಿಲ್ಲ. ಭ್ರಷ್ಟರನ್ನು ರಕ್ಷಿಸುತ್ತಾ, ರಾಜ್ಯವನ್ನು ಲೂಟಿ ಮಾಡುತ್ತಿರುವ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಕರೆ ಕೊಟ್ಟರು.
ಅಭಿಯಾನದಲ್ಲಿ ಎಎಪಿ ಮುಖಂಡರಾದ ಮುಖ್ಯಮಂತ್ರಿ ಚಂದ್ರು, ಬ್ರಿಜೇಶ್ ಕಾಳಪ್ಪ, ಸುರೇಶ್ ರಾಥೋಡ್, ಬಿ.ಕೆ.ಶಿವಪ್ಪ, ಸೌಂದರ್ಯ ಕೀರ್ತನ್, ರವಿಚಂದ್ರ, ಲಕ್ಷ್ಮೀಕಾಂತ ರಾವ್, ಡಾ. ಸತೀಶ್ ಕುಮಾರ್, ಅಶೋಕ್ ಮೃತ್ಯುಂಜಯ, ಗಿರೀಶ್ ನಾಯ್ಡು, ಉಷಾ ಮೋಹನ್ ಮತ್ತಿತರ ಭಾಗವಹಿಸಿದ್ದರು.












Click it and Unblock the Notifications