ಹೊಂಗಸಂದ್ರದಲ್ಲಿ ಮಧ್ಯರಾತ್ರಿ ನಡೆಯಿತು 'ಕ್ವಾರೆಂಟೈನ್ ಆಪರೇಷನ್'
ಬೆಂಗಳೂರು, ಏಪ್ರಿಲ್ 22: ಹೊಂಗಸಂದ್ರದಲ್ಲಿ ಬಿಹಾರ ಮೂಲದ ವ್ಯಕ್ತಿಯಿಂದ ಹೊಸದಾಗಿ 9 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇದೀಗ, ಹೊಂಗಸಂದ್ರ ರೆಡ್ ಝೋನ್ ಆಗಿ ಮಾರ್ಪಟ್ಟಿದೆ. ಸೋಂಕಿತ ವ್ಯಕ್ತಿ ಜೊತೆ ವಾಸವಾಗಿದ್ದ ಬಿಹಾರಿಯ 9 ಜನರಿಗೆ ಸೋಂಕು ತಗುಲಿದೆ.
Recommended Video
ಆ ಸೋಂಕಿತ ವ್ಯಕ್ತಿ ದಿನನಿತ್ಯ ಹಲವು ಕಡೆ ಸುತ್ತಾಡಿದ್ದಾನೆ ಎಂಬ ಮಾಹಿತಿ ಇದೆ. ಆತನ ಜೊತೆ ಪ್ರಾಥಮಿಕ ಮತ್ತು ಸೆಕೆಂಡರಿ ಸಂಪರ್ಕ ಹೊಂದಿದ್ದವರನ್ನು ಈಗ ಕ್ವಾರೆಂಟೈನ್ ಮಾಡಲಾಗಿದೆ. ಇದಕ್ಕಾಗಿ ಬಿಬಿಎಂಪಿ ಅಧಿಕಾರಿಗಳು ರಾತ್ರೋರಾತ್ರಿ ಹೊಂಗಸಂದ್ರದಲ್ಲಿ ಆಪರೇಷನ್ ಮಾಡಿದ್ದಾರೆ.
ಬಿಹಾರಿ ಕುಟುಂಬ ವಾಸಿಸುತ್ತಿದ್ದ ಪ್ರದೇಶದ ಸುತ್ತಮುತ್ತಾ ಇದ್ದ ಬಹುತೇಕರನ್ನು ಕ್ವಾರೆಂಟೈನ್‌ಗೆ ಕರೆದುಕೊಂಡು ಹೋಗಲಾಗಿದೆ. 24 ಟಿಟಿ ವಾಹನಗಳಲ್ಲಿ ಸುಮಾರು 188ಕ್ಕೂ ಅಧಿಕ ಜನರನ್ನು ಮಧ್ಯರಾತ್ರಿ ಅಲ್ಲಿಂದ ಸ್ಥಳಾಂತರಿಸಲಾಗಿದೆ. ಮುಂದೆ ಓದಿ...

ವಿದ್ಯಾ ಜ್ಯೋತಿ ಕಾಲೋನಿಯಲ್ಲಿ ಆಪರೇಷನ್
ಬಿಹಾರಿ ಕುಟುಂಬ ವಾಸವಿದ್ದ ಹೊಂಗಸಂದ್ರ ವಿದ್ಯಾ ಜ್ಯೋತಿ ಕಾಲೋನಿಯಲ್ಲಿ ಮಧ್ಯರಾತ್ರಿ ಬಿಬಿಎಂಪಿ ಆಪರೇಷನ್ ಮಾಡಿದೆ. ಸೋಂಕಿತನ ಜೊತೆ ಸಂಪರ್ಕ ಹೊಂದಿದ್ದ ಒಟ್ಟು 188 ಮಂದಿಯನ್ನ ಕ್ವಾರಂಟೈನ್ ನಲ್ಲಿ ಇಡಲಾಗಿದೆ. 15 ರಿಂದ 20 ಟಿಟಿಗಳನ್ನ ಬಳಸಿ ರಾತ್ರಿ 11 ಗಂಟೆ ಯಿಂದ ಬೆಳಗಿನ ಜಾವ 2:25 ರವರೆಗೂ ಬಿಬಿಎಂಪಿ ಕಾರ್ಯಾಚರಣೆ ಮಾಡಿದೆ.

ಈಗ ಬಂದಿರುವುದು ಒಂದು ವರದಿ ಮಾತ್ರ
ನಿನ್ನೆ ಬೆಳಗ್ಗೆ ಕ್ವಾರಂಟೈನ್ ನಲ್ಲಿ ಇದ್ದವರ ಪರೀಕ್ಷಾ ವರದಿಯಲ್ಲಿ 9 ಮಂದಿಗೆ ಪಾಸಿಟಿವ್ ಫಲಿತಾಂಶ ಬಂದಿದೆ. ಇಂದು ಸಂಜೆಯ ಹೊತ್ತಿಗೆ ಮತ್ತಷ್ಟು ಕೊರೊನಾ ಪಾಸಿಟಿವ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹೊಂಗಸಂದ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿರುವ ಹಿನ್ನೆಲೆ, ಸೀಲ್‌ಡೌನ್ ಆದೇಶ ಮಾಡಲಾಗಿದೆ.

ಏರಿಯಾ ಪೂರ್ತಿ ಖಾಲಿ ಖಾಲಿ
ಬಿಹಾರಿ ಕುಟುಂಬದವರು ಚಿಕ್ಕ ಕೋಣೆಯಲ್ಲಿ ವಾಸವಾಗಿದ್ದರು. ಸುಮಾರು 10 ಜನರು ಒಟ್ಟಿಗೆ ಇದ್ದರು. ಖಾಲಿ ಜಾಗದಲ್ಲಿ ಟೆಂಟ್ ಹಾಕಿ ನೆಲೆಸಿದ್ದರು. ಸೋಂಕಿತ ವ್ಯಕ್ತಿ ಅಂಗಡಿ, ರಸ್ತೆಗಳು, ಸುತ್ತಮುತ್ತಾ ಸುತ್ತಾಡಿದ್ದಾನೆ. ಈ ಎಲ್ಲ ಕಾರಣಗಳಿಂದ ಆ ಪ್ರದೇಶದಲ್ಲಿದ್ದ ಎಲ್ಲರನ್ನು ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ. ಈಗ ವಿದ್ಯಾ ಜ್ಯೋತಿ ಕಾಲೋನಿ ಸಂಪೂರ್ಣ ಖಾಲಿಯಾಗಿದೆ. ಈತ ಬೇರೆ ಎಲ್ಲೆಲ್ಲಿ ಹೋಗಿದ್ದ ಎಂಬುದರ ಬಗ್ಗೆ ಇನ್ನು ಮಾಹಿತಿ ಸಿಗಬೇಕಿದೆ.

ಲಾಕ್‌ಡೌನ್ ಸಡಿಲಿಕೆ ಮಾಡಿದ್ದು ಸರಿನಾ?
'ರಾಜ್ಯದಲ್ಲಿ ಸೊಂಕೀತರ ಪ್ರಮಾಣ ಕಡಿಮೆ ಆಗ್ತಿದೆ. ಎಲ್ಲಿ ಕ್ವಾರಟೈಂನ್ ಮಾಡಿದ್ದೀವೋ ಅಲ್ಲಿ ಪ್ರಕರಣ ಬರ್ತಿವೆ ಅಷ್ಟೇ. ಪ್ರೈಮರಿ, ಸೆಕೆಂಡರಿ ಕ್ಯಾಂಟಕ್ಟ್‌ಗಳಿಂದ ಕೊರೋನಾ ಪಾಸಿಟಿವ್ ಬರ್ತಿದೆ. ಹಾಗಾಗಿ ರಾಜ್ಯ ಸರ್ಕಾರ ಕೆಲವೊಂದು ಸಡಿಲಿಕೆ ಕೊಟ್ಟಿದೆ. ಆದ್ರೂ ನೀವು ಕೆಲಸ ಮಾಡುವ ಜಾಗದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದೇವೆ. ಯಾರಿಗೂ ಒತ್ತಾಯ ಮಾಡುವಂತಿಲ್ಲ. ಸಾಕಷ್ಟು ಯೋಚನೆ ಮಾಡಿ ಕೆಲವೊಂದು ಸಡಿಲಿಕೆ ಮಾಡಲಾಗಿದೆ. ಯಾವ್ಯಾವ ನಿಯಮಗಳನ್ನ ಪಾಲಿಸಬೇಕು ಅನ್ನೋದು ಆಯಾ ಇಲಾಖೆಯ ಮುಖ್ಯಸ್ಥರ ಮಾರ್ಗಸೂಚಿ ಹೊರಡಿಸಿದ್ದಾರೆ' ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ತಿಳಿಸಿದ್ದಾರೆ.












Click it and Unblock the Notifications