ಆಸ್ಕರ್ ವಿಜೇತರಿಗೂ ತಪ್ಪಿಲ್ಲ ಬೆಂಗಳೂರು ಟ್ರಾಫಿಕ್ ಬಿಸಿ: ವಾಹನ ದಟ್ಟಣೆಯಲ್ಲಿ ಸಿಕ್ಕಿಕೊಂಡ ರೆಹಮಾನ್, ವಿಡಿಯೋ ವೈರಲ್
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಕೇವಲ ಐಟಿ-ಬಿಟಿ ಕಂಪನಿಗಳಿಗೆ, ಚೆಂದದ ಹವಾಮಾನಕ್ಕೆ ಮಾತ್ರವಲ್ಲ, ಇಲ್ಲಿನ ಟ್ರಾಫಿಕ್ ಜಾಮ್‌ಗೂ ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ ಎನ್ನುವುದ ಎಲ್ಲರಗೂ ಗೊತ್ತಿರೋ ವಿಷಯ. ಹೌದು, ಬೆಂಗಳೂರಿನ ರಸ್ತೆಗಳಲ್ಲಿ ಒಮ್ಮೆ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡರೆ, ಎಷ್ಟೇ ತುರ್ತು ಕೆಲಸವಿದ್ದರೂ ತಾಳ್ಮೆಯಿಂದ ಕಾಯಲೇಬೇಕು.
ಈ ಟ್ರಾಫಿಕ್ ಕಿರಿಕಿರಿ ಕೇವಲ ಸಾಮಾನ್ಯ ಜನರಿಗೆ ಮಾತ್ರವಲ್ಲ, ವಿಐಪಿ ವ್ಯಕ್ತಿಗಳು, ಸೆಲೆಬ್ರಿಟಿಗಳು, ಯಾರಿಗೂ ತಪ್ಪಿದ್ದಲ್ಲ. ಇದೀಗ ಸಂಗೀತ ಮಾಂತ್ರಿಕ, ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ಅವರಿಗೂ ಬೆಂಗಳೂರು ಟ್ರಾಫಿಕ್ ಬಿಸಿ ತಟ್ಟಿದ್ದು, ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಎ.ಆರ್. ರೆಹಮಾನ್ ಕಾರು ಟ್ರಾಫಿಕ್‌ನಲ್ಲಿ ಲಾಕ್
ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಅದ್ಧೂರಿ ಸಂಗೀತ ಕಾರ್ಯಕ್ರಮ ನಡೆದಿತ್ತು. ಎ.ಆರ್. ರೆಹಮಾನ್ ಅವರ ಸಂಗೀತ ಕಾರ್ಯಕ್ರಮವೆಂದರೆ ಅಲ್ಲಿ ಲಕ್ಷಾಂತರ ಅಭಿಮಾನಿಗಳು ಸೇರಿರುತ್ತಾರೆ. ಅಂತಹ ಹೈ-ವೋಲ್ಟೇಜ್ ಕಾರ್ಯಕ್ರಮವನ್ನ ಮುಗಿಸಿಕೊಂಡು ವಾಪಸ್ ತೆರಳುತ್ತಿದ್ದಾಗ ಅವರ ಕಾರು ನಗರದ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದೆ. ಅವರ ಕಾರಿನ ಜೊತೆಗೆ ಭದ್ರತಾ ಸಿಬ್ಬಂದಿಯ ವಾಹನ ಕೂಡ ಟ್ರಾಫಿಕ್‌ನಲ್ಲಿ ಮುಂದೆ ಹೋಗಲಾಗದೆ ನಿಂತಿರುವ ದೃಶ್ಯವನ್ನ ಅಭಿಮಾನಿಯೊಬ್ಬರು ಸೆರೆಹಿಡಿದಿದ್ದಾರೆ.
ಎಷ್ಟೇ ದೊಡ್ಡ ಸೆಲೆಬ್ರಿಟಿಯಾಗಿದ್ದರೂ, ಭದ್ರತಾ ಸಿಬ್ಬಂದಿ ಜೊತೆಗಿದ್ದರೂ ರಸ್ತೆಯಲ್ಲಿ ಇತರ ವಾಹನ ಸವಾರರಂತೆಯೇ ಕಾಯುವುದು ಅನಿವಾರ್ಯವಾಗಿತ್ತು. ಈ ಘಟನೆ ಬೆಂಗಳೂರಿನ ಟ್ರಾಫಿಕ್ ರಿಯಾಲಿಟಿಯನ್ನ ಮತ್ತೊಮ್ಮೆ ಎಲ್ಲರ ಎದುರು ತೆರೆದಿಟ್ಟಿದೆ.
ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋ
ಮನೋಜ್ ಕುಮಾರ್ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನ ಹಂಚಿಕೊಂಡಿದ್ದು, "ಆಸ್ಕರ್ ಪ್ರಶಸ್ತಿ ವಿಜೇತರಿಗೂ ಬೆಂಗಳೂರು ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ" ಎಂಬ ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ರೆಹಮಾನ್ ಅವರು ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಮತ್ತೊಂದು ವಿಡಿಯೋದಲ್ಲಿ, ಟ್ರಾಫಿಕ್ ಮಧ್ಯೆ ಕಾರು ನಿಂತಿರುವಾಗ ಅಭಿಮಾನಿಗಳು ರೆಹಮಾನ್ ಅವರನ್ನ ಗುರುತಿಸಿದ್ದಾರೆ.
ಈ ವೇಳೆ ಯಾವುದೇ ಬೇಸರ ಮಾಡಿಕೊಳ್ಳದ ಎ.ಆರ್. ರೆಹಮಾನ್, ಕಾರಿನ ಗ್ಲಾಸ್ ಮೂಲಕವೇ ಮುಗುಳ್ನಗುತ್ತಾ ಅಭಿಮಾನಿಗಳಿಗೆ ಕೈಬೀಸಿ ಖುಷಿಪಡಿಸಿದ್ದಾರೆ. ಈ ಸರಳತೆಯೂ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ವಾಹನಗಳು ಇಂಚಿಂಚೂ ಚಲಿಸದ ಕಾರಣ ಅವರು ಕಾರಿನಲ್ಲೇ ಸುದೀರ್ಘ ಸಮಯ ಕಳೆಯಬೇಕಾಯಿತು. ಇದು ಕೇವಲ ರೆಹಮಾನ್ ಅವರೊಬ್ಬರ ಕಥೆಯಲ್ಲ, ನಗರಕ್ಕೆ ಬರುವ ಬಹುತೇಕ ಬಾಲಿವುಡ್, ಹಾಲಿವುಡ್ ಸೆಲೆಬ್ರಿಟಿಗಳು ಹಾಗೂ ಕ್ರೀಡಾಪಟುಗಳು ಇದೇ ರೀತಿಯ ಅನುಭವವನ್ನ ಎದುರಿಸಿದ್ದಾರೆ.
ಯಾರಿಗೂ ಭೇದಭಾವ ಮಾಡದ ಬೆಂಗಳೂರು ಟ್ರಾಫಿಕ್
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಎಂದರೆ ಅವರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಅಥವಾ ವಿಶೇಷ ದಾರಿ ಇರುತ್ತದೆ ಎಂದು ಜನ ಭಾವಿಸುತ್ತಾರೆ. ಆದರೆ ಬೆಂಗಳೂರಿನ ಟ್ರಾಫಿಕ್ ಜಾಮ್ ಮುಂದೆ ಆ ಯಾವ ಲೆಕ್ಕಾಚಾರವೂ ನಡೆಯುವುದಿಲ್ಲ. ಈ ಘಟನೆಯ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಕಮೆಂಟ್‌ಗಳನ್ನ ಮಾಡುತ್ತಿದ್ದಾರೆ. "ಬೆಂಗಳೂರು ಟ್ರಾಫಿಕ್ ಯಾರನ್ನೂ ಬಿಡುವುದಿಲ್ಲ, ಅದು ಎಲ್ಲರನ್ನೂ ಸಮಾನವಾಗಿ ನೋಡುತ್ತದೆ" ಎಂದು ಒಬ್ಬರು ತಮಾಷೆ ಮಾಡಿದ್ದಾರೆ.
ಮತ್ತೊಬ್ಬ ಬಳಕೆದಾರರು "ಅದೃಷ್ಟ ನಿಮ್ಮನ್ನ ಎಲ್ಲೆಡೆ ಹಿಂಬಾಲಿಸುತ್ತದೆ ಬ್ರೋ, ನೀವೂ ಟ್ರಾಫಿಕ್‌ಗೆ ಬಲಿಯಾದಿರಿ" ಎಂದು ಕಾಲೆಳೆದಿದ್ದಾರೆ. "ನೀವು ಎಷ್ಟೇ ದೊಡ್ಡ ವಿಐಪಿಯಾಗಿದ್ದರೂ, ಆಸ್ಕರ್ ಪ್ರಶಸ್ತಿಯನ್ನೇ ಗೆದ್ದಿದ್ದರೂ ಸಿಲ್ಕ್ ಬೋರ್ಡ್ ಅಥವಾ ಔಟರ್ ರಿಂಗ್ ರೋಡ್ ಟ್ರಾಫಿಕ್‌ನಲ್ಲಿ ಸಾಮಾನ್ಯರಂತೆ ಕಾಯಲೇಬೇಕು. ಟ್ರಾಫಿಕ್ ಎಲ್ಲರಿಗೂ ಒಂದೇ" ಎಂದು ಹಲವರು ತಮ್ಮ ದೈನಂದಿನ ಟ್ರಾಫಿಕ್ ಸಮಸ್ಯೆಯನ್ನಾ ಈ ವಿಡಿಯೋ ಮೂಲಕ ಹೊರಹಾಕಿದ್ದಾರೆ.


Click it and Unblock the Notifications
