ದೆಹಲಿ ನಂತರ ಆಮ್ ಆದ್ಮಿ ಕಣ್ಣು ಕರ್ನಾಟಕದ ಮೇಲೆ
ಬೆಂಗಳೂರು, ಡಿ. 19 : ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಜನರು ಬೆಂಬಲ ನೀಡಲಿದ್ದು, ಪಕ್ಷ ರಾಜ್ಯದ ಕೆಲವು ಲೋಕಸಭಾ ಕ್ಷೇತ್ರಗಳ ಬಗ್ಗೆ ಸಮೀಕ್ಷೆ ನಡೆಸುತ್ತಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಪಕ್ಷದ ನಾಯಕ ಯೋಗೇಂದ್ರ ಯಾದವ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಯೋಗೇಂದ್ರ ಯಾದವ್, ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಆಮ್ ಆದ್ಮಿ ಪಕ್ಷ ತಯಾರಿ ನಡೆಸುತ್ತಿದೆ ಎಂದು ಹೇಳಿದರು. ಕರ್ನಾಟಕದಲ್ಲಿ ಜನರು ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ. ಕೆಲವು ಲೋಕಸಭೆ ಕ್ಷೇತ್ರಗಳ ಸಮೀಕ್ಷೆಯನ್ನು ನಡೆಸುತ್ತಿದ್ದು, ಅಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದರು.

ಲೋಕಸಭೆ ಚುನಾವಣೆ ಬಗ್ಗೆ ಸಮೀಕ್ಷೆ ನಡೆಸಲು ಯೋಗೇಂದ್ರ ಯಾದವ್ ಅವರು ಸದ್ಯ ದೇಶದ ವಿವಿಧ ರಾಜ್ಯಗಳ ಪ್ರವಾಸ ಕೈಗೊಂಡಿದ್ದಾರೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪಕ್ಷದ ಜಿಲ್ಲಾ ಸದಸ್ಯರೊಂದಿಗೆ ಆಮ್ ಆದ್ಮಿ ಪಕ್ಷ ಸಮೀಕ್ಷೆ ನಡೆಸುತ್ತಿದ್ದು, ಅಲ್ಲಿನ ಸ್ಥಿತಿ-ಗತಿಗಳ ಬಗ್ಗೆ ಅಧ್ಯಯನ ಮಾಡಿದ ನಂತರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಹೇಳಿದರು. [ರಾಹುಲ್ ಗಾಂಧಿ ವಿರುದ್ಧ ಆಮ್ ಆದ್ಮಿ ಅಭ್ಯರ್ಥಿ ಕಣಕ್ಕೆ]
ಈಗಾಗಲೇ ಹರ್ಯಾಣ ಮತ್ತು ತಮಿಳುನಾಡು ರಾಜ್ಯಗಳ ಪ್ರವಾಸ ಮುಗಿಸಿದ್ದೇನೆ. ಮುಂಬರುವ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರನ್ನು ಆಮ್ ಆದ್ಮಿ ಪಕ್ಷದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಪಕ್ಷ ಚಿಂತನೆ ನಡೆಸಿದೆ ಎಂದು ಯೋಗೇಂದ್ರ ಯಾದವ್ ತಿಳಿಸಿದರು.
ದೆಹಲಿ ನಂತರ ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷವನ್ನು ಕಟ್ಟಿಬೆಳೆಸಲು ತೀರ್ಮಾನಿಸಿದ್ದೇವೆ. ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಕರ್ನಾಟಕದಲ್ಲಿ ಹೊಸದಾಗಿ 30,000 ಸಾವಿರ ಸದಸ್ಯರು ಸೇರ್ಪಡೆಗೊಂಡಿದ್ದಾರೆ ಎಂದು ಯಾದವ್ ಮಾಹಿತಿ ನೀಡಿದರು.
ಆಮ್ ಆದ್ಮಿ ಪಕ್ಷ ಕರ್ನಾಟಕದ ಕುರಿತು ಅಗತ್ಯವಿರುವ ಮಾಹಿತಿ ಸಂಗ್ರಹಿಸುತ್ತಿದೆ. ಸದ್ಯ ಅಭ್ಯರ್ಥಿಗಳು ಸ್ಪರ್ಧೆ ಕುರಿತು ಮಾತನಾಡಲು ಸಾಧ್ಯವಿಲ್ಲ. ಮಾಹಿತಿ ಸಂಗ್ರಹರಣೆ ನಂತರ ಸ್ಥಳೀಯ ವಿಷಯಗಳ ಕುರಿತು ಚರ್ಚೆ ನಡೆಸಿ, ನಂತರ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.











Click it and Unblock the Notifications