ಮೂಢನಂಬಿಕೆ ಮಸೂದೆ: ಮಠಾಧೀಶರ ಮಹತ್ವದ ನಿರ್ಣಯಗಳು
ಬೆಂಗಳೂರು, ನ 13: ಮೂಢನಂಬಿಕೆ ನಿಷೇಧ ಮಸೂದೆ ಪರ ವಿರೋಧ ಚರ್ಚೆಯ ನಡುವೆ ಬೆಂಗಳೂರಿನಲ್ಲಿ ಮಂಗಳವಾರ (ನ 12) ಸಭೆ ಸೇರಿದ ಕೆಲವು ಮಠಾಧೀಶರು ಕೆಲವೊಂದು ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ.
ನಿಡುಮಾಮಿಡಿ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಸೂದೆ ಮಂಡನೆಗೆ ಮುನ್ನ ಇದರ ಸಮಗ್ರ ಚರ್ಚೆಯಾಗಬೇಕಿದೆ. ಹೀಗಾಗಿ ಇದರ ಕರಡು ಪ್ರತಿಯು ಎಲ್ಲರಿಗೂ ಸಿಗುವಂತಾಗಬೇಕು. ನಂತರ ಎಲ್ಲಾ ವರ್ಗದ ಮುಖಂಡರ ಜೊತೆ ಚರ್ಚಿಸಿ ಮಸೂದೆಗೆ ಅಂತಿಮ ರೂಪು ನೀಡಬೇಕೆಂದು ನಿಡುಮಾಮಿಡಿ ಶ್ರೀಗಳು ಸರಕಾರವನ್ನು ಆಗ್ರಹಿಸಿದ್ದಾರೆ.
ಮಸೂದೆಯ ಕರಡಿನಲ್ಲಿ ಎಲ್ಲವೂ ತಿರಸ್ಕರಿಸುವಂತದಲ್ಲ. ಕೆಲವೊಂದು ಆಕ್ಷೇಪಾರ್ಹ ವಿಷಯಗಳು ಖಂಡಿತ ಮಸೂದೆಯಲ್ಲಿವೆ. ಜನರು ಶೋಷಣೆಗೆ ಒಳಗಾಗುವ ಅಂಧ ಆಚರಣೆಗಳ ನಿಷೇಧದ ಅಗತ್ಯವಿದೆ. ಕಳ್ಳ ಜ್ಯೋತಿಷಿಗಳನ್ನು ಗ್ರಾಹಕ ಕಾಯ್ದೆಯ ಅಡಿಯಲ್ಲಿ ತರಬೇಕೆಂದು ನಿಡುಮಾಮಿಡಿ ಶ್ರೀಗಳು ಅಭಿಪ್ರಾಯ ಪಟ್ಟರು.
25ಕ್ಕೂ ಹೆಚ್ಚು ಮಠಾಧೀಶರು ಭಾಗಿಯಾಗಿದ್ದ ಈ ಸಭೆಯಲ್ಲಿ ಕೆಲವರು ಈ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆ, ಮಸೂದೆಯಲ್ಲಿರುವ ಕೆಲವೊಂದು ಪದ್ದತಿ ನಿಷೇಧಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಒಕ್ಕೂರಿಲಿನ ನಿರ್ಣಯಕ್ಕೆ ಸಭೆಯಲ್ಲಿ ಬರಲಾಯಿತು.
ಎರಡುವರೆ ತಾಸು ನಡೆದ ಸಭೆಯಲ್ಲಿ ಮಸೂದೆಯ ಸಾಧಕ ಬಾಧಕ ಚರ್ಚೆಯ ಬದಲು ಸುಮಾರು ಒಂದು ಗಂಟೆಗಳ ಕಾಲ ರಂಭಾಪುರಿ ಶ್ರೀಗಳನ್ನು ತರಾಟೆಗೆ ತೆಗೆದುಕೊಳ್ಳಲು ಸ್ವಾಮೀಜಿಗಳು ವೇದಿಕೆಯಾಗಿ ಬಳಸಿಕೊಂಡರು.
ಮಠಾಧೀಶರು ತೆಗೆದುಕೊಂಡ ನಿರ್ಣಯಗಳೇನು? ಸ್ಲೈಡಿನಲ್ಲಿ...

ಕಳ್ಳ ಜ್ಯೋತಿಷಿಗಳು
ಎಲ್ಲಾ ಜ್ಯೋತಿಷಿಗಳು ಕಳ್ಳರಲ್ಲ. ಕೆಲವೊಂದು ಠಕ್ಕ ಜ್ಯೋತಿಷಿಗಳಿಂದ ಒಳ್ಳೆ ಜ್ಯೋತಿಷಿಗಳಿಗೂ ಕೆಟ್ಟ ಹೆಸರು ಬರುತ್ತಿದೆ. ಮಾಧ್ಯಮಗಳಲ್ಲಿ ಜ್ಯೋತಿಷಿಗಳಿಗೆ ಹೆಚ್ಚಿನ ಪ್ರಚಾರ ಸಿಗುತ್ತಿದೆ. ಜನರಿಗೆ ಜ್ಯೋತಿಷಿಗಳು ನೀಡುವ ಸೂಚನೆಯ ನಂತರವೂ ಕಾರ್ಯ ನೆರವೇರದಿದ್ದಲ್ಲಿ ಜ್ಯೋತಿಷಿಗಳು ಅದಕ್ಕೆ ಹೊಣೆಯಾಗುವ ರೀತಿಯಲ್ಲಿ ಕಾಯ್ದೆ ರೂಪಿಸ ಬೇಕು.

ಪಂಕ್ತಿಭೇಧ, ಮಡೆಸ್ನಾನ
ಕರಾವಳಿ ಭಾಗದಲ್ಲಿ ಪ್ರಮುಖವಾಗಿರುವ ಈ ಅನಿಷ್ಠ ಪದ್ದತಿಗಳು ಯಾವ ಮುಲಾಜೂ ಇಲ್ಲದೆ ಈ ಕಾಯ್ದೆಯಡಿಯಲ್ಲಿ ಬರಬೇಕು. ಈ ಹಿಂದೆಯೂ ನಾವು ಈ ಪದ್ದತಿಗೆ ವಿರೋಧಿಸಿಕೊಂಡು ಬಂದಿದ್ದೇವೆ.

ನರಬಲಿ, ಮಾಟಮಂತ್ರ
ದೆವ್ವಭೂತ ಬಿಡಿಸುವುದು, ಮಾಟಮಂತ್ರ, ವಾಮಾಚಾರ, ನರಬಲಿ, ಪ್ರಾಣಿಬಲಿ, ಮಕ್ಕಳನ್ನು ಮೇಲಿಂದ ಎಸೆಯುವುದು, ಸಿಡಿ ಆಡಿಸುವುದು ಈ ಎಲ್ಲಾ ಮೂಢನಂಬಿಕೆಗಳು ಮಸೂದೆಯಡಿಯಲ್ಲಿ ಬರಬೇಕು.

ಪಾದಪೂಜೆ
ಪಾದಪೂಜೆ ಪದ್ದತಿ ಈ ಸಮಾಜದ ಮತ್ತೊಂದು ಅನಿಷ್ಠ. ಪಾದಪೂಜಾ ಪದ್ದತಿಯನ್ನು ಸಮರ್ಥಿಸಿಕೊಳ್ಳುವ ಸ್ವಾಮೀಜಿಗಳಿಗೇನೂ ಈ ನಾಡಿನಲ್ಲಿ ಕಮ್ಮಿಯಿಲ್ಲ. ಈ ಪದ್ದತಿ ಕೂಡಾ ರದ್ದಾಗಬೇಕು.

ಮದುವೆ, ನಾಮಕರಣ ಏಕೆ?
ಹುಡುಗ ಮತ್ತು ಹುಡುಗಿ ಒಪ್ಪಿದ ಮೇಲೆ ಸರಳವಾಗಿ ಮದುವೆಯಾಗಲಿ. ಅಲ್ಲಿ ಪುರೋಹಿತರಿಗೆ ಏನು ಕೆಲಸ? ಅವರಿಗೆ ಹುಟ್ಟುವ ಮಕ್ಕಳಿಗೆ ನಾಮಕರಣ ಶಾಸ್ತ್ರ ಯಾಕೆ ಮಾಡಬೇಕು - ಶ್ರೀಬಸವ ಮುರುಘೇಂದ್ರ ಸ್ವಾಮೀಜಿ.

ರಂಭಾಪುರಿ ಶ್ರೀ ಮತ್ತು ಅಡ್ಡಪಲ್ಲಕ್ಕಿ
ಮೂಢನಂಬಿಕೆ ನಿಷೇಧ ಕರಡು ಪ್ರತಿಯಲ್ಲಿ ಅಡ್ಡಪಲ್ಲಕ್ಕಿ ಉತ್ಸವದ ಬಗ್ಗೆ ಕೂಡಾ ಪ್ರಸ್ತಾಪಿಸಲಾಗಿದೆ. ರಂಭಾಪುರಿ ಶ್ರೀಗಳು ನಮಗೆಲ್ಲಾ ಕಾವಿ ಬಿಸಾಕಿ ಎಂದಿದ್ದಾರೆ. ನಮಗೆ ಕಾವಿ ತ್ಯಾಗದ ಸಂಕೇತ, ಸದಾ ಭೋಗಜೀವನದಲ್ಲಿರುವ ಅವರಿಗೆ ಇದರ ಅರ್ಥವಾಗುವುದಿಲ್ಲ - ಶಾಂತಮುನಿ ಸ್ವಾಮೀಜಿ












Click it and Unblock the Notifications