ಬಿಬಿಎಂಪಿ ಬಳಿ "ಕಸ ಪಾಠ"ಕ್ಕೆ ಬಂದ ಆಂಧ್ರಪ್ರದೇಶ ತಂಡ!
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕಸ ನಿರ್ವಹಣೆಯಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಕಸ ಸಂಗ್ರಹ ಹಾಗೂ ವಿಲೇವಾರಿಯಲ್ಲಿ ಬಿಬಿಎಂಪಿ ಫಸ್ಟ್ ರ್ಯಾಂಕ್‌ನಲ್ಲೇನೂ ಇಲ್ಲ ಅಂತಲೇ ಹೇಳಬಹುದು. ಇಂದಿಗೂ ಕಸ ಭೂಭರ್ತಿಗೆ ಹೋಗುವುದು ನಿಂತಿಲ್ಲ. ಇದೀಗ ಕಸ ನಿರ್ವಹಣೆಯಲ್ಲಿ ಲಾಸ್ಟ್ ಬೆಂಚ್ ವಿದ್ಯಾರ್ಥಿಯಂತಿರುವ ಬಿಬಿಎಂಪಿಯ ಬಳಿಯೇ ಕಸದ ಪಾಠ ಹೇಳಿಸಿಕೊಳ್ಳುವುದಕ್ಕೆ ಆಂಧ್ರಪ್ರದೇಶದಿಂದ ತಂಡ ಬಂದಿದೆ. ಹೌದು ಆಂಧ್ರ ಪ್ರದೇಶದ ಸರ್ಕಾರದ ಪೌರಾಡಳಿತ ಸಚಿವ ಡಾ. ಪೊಂಗುರು ನಾರಾಯಣ ಅವರೊಂದಿಗೆ ಉನ್ನತ ಅಧಿಕಾರಿಗಳ ನಿಯೋಗವು ಮಾರ್ಚ್ 4ಕ್ಕೆ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (BSWML)ಕ್ಕೆ ಭೇಟಿ ನೀಡಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಯ ಕುರಿತಂತೆ ಸುದೀರ್ಘ ಚರ್ಚೆ ನಡೆಸಿ ಮಾಹಿತಿ ಪಡೆದುಕೊಂಡರು.
ಬಿಬಿಎಂಪಿ ಮುಖ್ಯ ಆಯುಕ್ತ ಹಾಗೂ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ತುಷಾರ್ ಗಿರಿನಾಥ್ ಅವರು ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಕುರಿತಂತೆ ವಿವರಣೆ ನೀಡಿದ್ದಾರೆ. ನಗರದಲ್ಲಿ ಘನತ್ಯಾಜ್ಯ ವಿಲೇವಾರಿಗಾಗಿ ಪ್ರತ್ಯೇಕವಾಗಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತವನ್ನು ಸ್ಥಾಪಿಸಲಾಗಿದೆ. ಈ ಸಂಸ್ಥೆಯ ಮೂಲಕ ಘನತ್ಯಾಜ್ಯ ನಿರ್ವಹಣೆ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ನಗರದಲ್ಲಿ ಪ್ರಸ್ತುತ ಪ್ರತಿನಿತ್ಯ 6,500 ಮೆ.ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಪ್ರತಿ ಮನೆ-ಮನೆಗೆ ತೆರಳಿ ಆಟೋ ಟಿಪ್ಪರ್‌ಗಳ ಮೂಲಕ ಹಸಿ, ಒಣ ಹಾಗೂ ನೈರ್ಮಲ್ಯ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದೆ. ಘನತ್ಯಾಜ್ಯ ನಿಯಮ ಮತ್ತು ಪಾಲಿಕೆಯ ಉಪ ನಿಯಮದಂತೆ ಇದೇ ಮೊದಲ ಬಾರಿಗೆ ತ್ಯಾಜ್ಯ ಉತ್ಪಾದಕರಿಂದ ಬಳಕೆದಾರರ ಶುಲ್ಕ (ಸೇವಾಶುಲ್ಕ)ವನ್ನು ಆಸ್ತಿ ತೆರಿಗೆಯೊಂದಿಗೆ ಸಂಗ್ರಹಿಸಲು ಕ್ರಮವಹಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ನಗರದಲ್ಲಿ ಬೃಹತ್ ಪ್ರಮಾಣದ ತ್ಯಾಜ್ಯ ಉತ್ಪಾದಕರು (ಬಲ್ಕ್ ಜನರೇಟರ್ಸ್)ಗಳಿಂದ ಪ್ರತ್ಯೇಕವಾಗಿ ತ್ಯಾಜ್ಯವನ್ನು ಸಂಗ್ರಹಿಸಿ ಸಂಸ್ಕರಿಸಲು ಕ್ರಮ ವಹಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಟ್ಟಡ ವೇಸ್ಟ್(ಸಿ & ಡಿ ವೇಸ್ಟ್) ಸಂಸ್ಕರಣೆಗಾಗಿ 2 ಘಟಕಗಳಿವೆ. ಈ ಘಟಕಗಳಿಗೆ ಸಿ & ಡಿ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ಸಾಗಾಣಿಕೆ ಮಾಡಲು ಕ್ರಮ ವಹಿಸಲಾಗುತ್ತಿದೆ. ಇದರೊಂದಿಗೆ ಇನ್ನೂ 4 ಸಿ & ಡಿ ತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಕ್ರಮ ವಹಿಸಲಾಗುತ್ತಿದೆ ಎಂದಿದ್ದಾರೆ.
ಇನ್ನು ನಗರದಲ್ಲಿ ವಾರ್ಡ್ ರಸ್ತೆಗಳಲ್ಲಿ ಕಸ ಗುಡಿಸುವ ಸಲುವಾಗಿ ಪೌರಕಾರ್ಮಿಕರನ್ನು ನಿಯೋಜಿಸಲಾಗಿದೆ ಅದರ ಜೊತೆಗೆ ಪ್ರಮುಖ ರಸ್ತೆ, ಮೇಲ್ಸೇತುವೆಗಳಲ್ಲಿ ಸ್ವಚ್ಛತೆ ಮಾಡುವ ಸಲುವಾಗಿ ಯಾಂತ್ರಿಕ ಕಸ ಗುಡಿಸುವ ಯಂತ್ರಗಳನ್ನು ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ತ್ಯಾಜ್ಯ ವಿಲೇವಾರಿ ಸಮಸ್ಯೆ ನಿವಾರಿಸುವ ಸಲುವಾಗಿ ಈಗಾಗಲೇ 2 ದ್ವಿತೀಯ ಹಂತದ ಘನತ್ಯಾಜ್ಯ ಘಟಕ ಹಾಗೂ ಸ್ವಯಂ ಚಾಲಿತ ತ್ಯಾಜ್ಯ ವಿಂಗಡಣೆ ಘಟಕವನ್ನು ಸ್ಥಾಪಿಸಲಾಗಿದೆ. ಇಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿ, ಒಣ, ಗೃಹ ಮತ್ತು ಹಾನಿಕಾರಕ ನೈರ್ಮಲ್ಯ ತ್ಯಾಜ್ಯವನ್ನಾಗಿ ಬೇರ್ಪಡಿಸಿ ಸಂಗ್ರಹಿಸಲಾಗುವುದು.
ಒಂದೇ ಸ್ಥಳದಲ್ಲಿ ಪ್ರತಿನಿತ್ಯ ಸುಮಾರು 150 ರಿಂದ 200 ಮೆ. ಟನ್ ತ್ಯಾಜ್ಯವನ್ನು ಪ್ರಾಥಮಿಕ ಸಂಗ್ರಹಣೆಯ ವಾಹನಗಳಿಂದ ದ್ವಿತೀಯ ಹಂತದ ಸಾಗಾಣಿಕೆ ವಾಹನಗಳಿಗೆ ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದರಿಂದ ರಸ್ತೆ ಬದಿಗಳಲ್ಲಿ ಆಗುತ್ತಿದ್ದ ವಾಹನಗಳ ದಟ್ಟಣೆ, ಬ್ಲಾಕ್ ಸ್ಪಾಟ್‌ಗಳ ನಿರ್ಮಾಣ ಹಾಗೂ ಲೀಚೆಟ್ (ಕೊಳಚೆ ನೀರು) ದ್ರವದ ಸೋರುವಿಕೆಯನ್ನು ತಡೆಗಟ್ಟಿ ನಗರ ಸೌಂದರ್ಯವನ್ನು ಹೆಚ್ಚಿಸಬಹುದಾಗಿರುತ್ತದೆ. ಇಲ್ಲಿ 20 ಘನ ಮೀಟರ್ ಸಾಮರ್ಥ್ಯದ ಕ್ಯಾಪ್ಸೂಲ್ ಮಾದರಿಯ ಕಂಟೈನರ್‌ಗಳನ್ನು ಬಳಸಲಾಗುತ್ತಿದೆ. ಈ ಮಾದರಿಯ ಘಟಕಗಳನ್ನು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಮಾಡುವ ಯೋಜನೆಯಿದೆ ಎಂದು ಮಾಹಿತಿ ಕೊಟ್ಟಿದ್ದಾರೆ.
ಈ ವೇಳೆ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ಮುಖ್ಯ ಕಾರ್ಯಾಚರಣೆ ಅಧಿಕಾರಿಯಾದ ರಮಾಮಣಿ, ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಲೋಕೇಶ್, ಆಂಧ್ರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಕೆ. ಕಣ್ಣ ಬಾಬು, ಆಂಧ್ರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಆಯುಕ್ತರು ಮತ್ತು ನಿರ್ದೇಶಕ ಡಾ. ಪಿ. ಸಂಪತ್ ಕುಮಾರ್ ಇದ್ದರು.












Click it and Unblock the Notifications