ವಿವೇಕಾನಂದ ಜನ್ಮದಿನ ಯುವಕರಿಗೆ ಅನಂತ್ ಕಿವಿಮಾತು
ಬೆಂಗಳೂರು, ಜ. 23 : ಯುವಜನರು ಸಮಾಜದ ಎಲ್ಲ ಹಂತಗಳಲ್ಲೂ ಕೊಡುಗೆ ಸಲ್ಲಿಸಲು ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿ ಪಡೆಯಬೇಕು ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಮತ್ತು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಹೇಳಿದ್ದಾರೆ.
ಅವರು ಎಚ್‌ಎಸ್‌ಆರ್ ಬಡಾವಣೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ 'ಯುವ ಸಪ್ತಾಹ'ದ ಅಂಗವಾಗಿ ವಿದ್ಯಾರ್ಥಿಗಳನ್ನು ಕುರಿತು ಬುಧವಾರ ಮಾತನಾಡುತ್ತಿದ್ದರು. ಪ್ರತಿಯೊಬ್ಬ ವ್ಯಕ್ತಿಯೂ ಪ್ರತಿದಿನವೂ ಒಂದಾದರೂ ಒಳ್ಳೆಯ ಕೆಲಸವನ್ನು ಮಾಡಬೇಕು ಎಂದು ಅವರು ನುಡಿದರು.

"ನಮ್ಮ ನಾಯಕರಾದ ಎಲ್.ಕೆ.ಆಡ್ವಾಣಿ ಪ್ರತಿನಿತ್ಯ ಒಂದು ಒಳ್ಳೆಯ ಕೆಲಸವನ್ನು ಮಾಡಿ ಎಂದು ಸಲಹೆ ಮಾಡಿದ್ದಾರೆ. ಏಕ್ ಕಾಮ್ ಭಾರತ್ ಕಾ ನಾಮ್. ಉದಾಹರಣೆಗೆ ನೀವು ಒಂದು ಲೋಟ ನೀರು ಕುಡಿಯುವಾಗ ನಿಮ್ಮ ಹತ್ತಿರದಲ್ಲಿರುವ ಗಿಡಕ್ಕೂ ನೀರು ಹಾಕಿರಿ. ಅಂದರೆ ಎಷ್ಟು ಸಾಧ್ಯವೋ ಅಷ್ಟೂ ನಾವು ಒಳ್ಳೆಯ ಕೆಲಸ ಮಾಡಬೇಕು" ಎಂದು ಅವರು ಯುವಕರಿಗೆ ಕಿವಿಮಾತು ಹೇಳಿದರು.
ಯುವಜನರು ಸ್ವಾಮಿ ವಿವೇಕಾನಂದರ ಪುಸ್ತಕಗಳನ್ನು ಓದುವ ಮೂಲಕ ಅವರ ಆದರ್ಶ ಮತ್ತು ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅನಂತ್ ಕುಮಾರ್ ಕರೆ ನೀಡಿದರು. "ಜೀವನದಲ್ಲಿ ಯಶಸ್ವಿಯಾಗಲು ಸ್ವಾಮಿ ವಿವೇಕಾನಂದರ ಪುಸ್ತಕಗಳು ಮತ್ತು ಚಿತ್ರಗಳು ನಿಮ್ಮಲ್ಲಿರಬೇಕು. ನಾವು ಶಾಲೆಗಳಿಗೆ ಪುಸ್ತಕಗಳು ಮತ್ತು ಪೋಸ್ಟರ್‌ಗಳನ್ನು ಇನ್ನು ಒಂದು ವಾರದಲ್ಲಿ ಪೂರೈಸುತ್ತೇವೆ" ಎಂದು ಅವರು ಆಶ್ವಾಸನೆ ನೀಡಿದರು.
ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಮುಖ್ಯಸ್ಥರಾದ ವೀರೇಶಾನಂದ ಸರಸ್ವತಿ ಸ್ವಾಮೀಜಿ, ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ರೆಡ್ಡಿ ಮತ್ತು ಎಚ್‌ಎಸ್‌ಆರ್ ಬಡಾವಣೆಯ ಕಾರ್ಪೊರೇಟರ್ ಲತಾ ನರಸಿಂಹಮೂರ್ತಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.












Click it and Unblock the Notifications