ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಮೂವರಲ್ಲಿ ಇಬ್ಬರಿಗೆ ಸೋಲು!

ಬೆಂಗಳೂರು: 'ಕೂಸು ಹುಟ್ಟುವ ಮೊದಲೇ ಕುಲಾವಿ' ಈ ಗಾದೆ ಮಾತು ಕೇಳಿರ್ತೀರಿ ಅಲ್ವಾ? ಚುನಾವಣೆಗೂ ಮೊದಲು ಈ ಗಾದೆಗೆ ಸರಿದೂಗುವ ಮಾತನ್ನ ರಾಜಕಾರಣಿಗಳ ಬಾಯಲ್ಲಿ ಕೇಳೇ ಇರ್ತೀರಿ. ಇದೀಗ ಬಿಜೆಪಿ ಹೀನಾಯ ಸೋಲು ಕಂಡು 66 ಸ್ಥಾನಗಳಿಗೆ ತೃಪ್ತಿಪಟ್ಟಿದೆ. ಆದರೆ ಚುನಾವಣೆಗೂ ಮೊದಲು BJP ನಾಯಕರು ಸಿಎಂ ಆಗುವ ಕನಸು ಕಂಡಿದ್ದರು, ಅವರೆಲ್ಲರ ಲಿಸ್ಟ್ ಮತ್ತು ಅವರು ಹೇಳಿದ್ದ ಡೈಲಾಗ್ ಇಲ್ಲಿದೆ ಓದಿ.

ಆಡಳಿತ ವಿರೋಧಿ ಅಲೆ ಮತ್ತು ತಾವೇ ಮಾಡಿದ ತಪ್ಪುಗಳ ಕಾರಣ ಬಿಜೆಪಿ ಈ ಬಾರಿ ಕರ್ನಾಟಕದಲ್ಲಿ ಭಾರಿ ಅಂತರದ ಸೋಲು ಕಂಡಿದೆ. ಅದ್ರಲ್ಲೂ ಭದ್ರಕೋಟೆಗಳೇ ಪುಡಿ ಪುಡಿ ಆಗಿರುವುದು ಕೇಸರಿ ಪಡೆಗೆ ಆತಂಕ ಮೂಡಿಸಿದೆ. ಹೀಗೆ ಚುನಾವಣೆಗೂ ಮೊದಲೇ ಬಿಜೆಪಿ ನಾಯಕರಿಗೆ ಸೋಲಿನ ವಾಸನೆ ಮೂಗಿಗೆ ಬಡಿದಿತ್ತು, ಹೀಗಾಗಿ ಘಟಾನುಘಟಿ ನಾಯಕರು ಥಂಡಾ ಹೊಡೆದಿದ್ದರು. ಆದ್ರೂ ಕೆಲ ಯುವ ನಾಯಕರು ಮಾತ್ರ, ತಾವೇ ಸಿಎಂ ಆಗೋದು ಅನ್ನೋ ಕನಸನ್ನು ಕಟ್ಟಿಕೊಂಡಿದ್ದರು. ಅವರಲ್ಲಿ ಕೆಲವರ ಪಟ್ಟಿ ಇಲ್ಲಿ ನೀಡಲಾಗಿದೆ.

karnataka assembly election result 2023

ಸಿಟಿ ರವಿ ಸಿಎಂ ಆಗಬೇಕಿತ್ತಂತೆ!

ಹೌದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಕೂಡ ಈ ಬಾರಿಯ ಚನಾವಣೆಯಲ್ಲಿ ಭೀಕರ ಸೋಲು ಕಂಡಿದ್ದಾರೆ. ಆದರೆ ಚುನಾವಣೆಗೆ ಮೊದಲು ತಾವು ಸಿಎಂ ಆಗಬೇಕು ಎಂಬ ಬಯಕೆ ಹೊಂದಿದ್ದರು. ಇದೇ ಕಾರಣಕ್ಕೆ ಸಿಟಿ ರವಿ ನಾನೂ ಕೂಡ ಸಿಎಂ ಆಕಾಂಕ್ಷಿ ಎಂದು ಚುನಾವಣೆ ಸಂದರ್ಭದಲ್ಲಿ ಹೇಳಿದ್ದರು. ಹೀಗೆ ಮುಂದೆ ನಾನೂ ಸಿಎಂ ಆಗ್ತೀನಿ ಎಂಬ ಆಸೆಯನ್ನ ರವಿ ಹೊಂದಿದ್ದರು, ಆದರೆ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಈ ಮೂಲಕ ಸಿಟಿ ರವಿ ಸಿಎಂ ಆಸೆ ಭಗ್ನವಾಗಿದೆ.

ಸಿಟಿ ರವಿ ಆಸೆಗೆ ಈಶ್ವರಪ್ಪ ಬೆಂಬಲ!

ಸಿಟಿ ರವಿ ಆಸೆಗೆ ಪೂರಕವಾಗಿ ಕೆಎಸ್ ಈಶ್ವರಪ್ಪ ಕೂಡ ರವಿ ಪರ ಬ್ಯಾಟ್ ಬೀಸಿ ಗಮನ ಸೆಳೆದಿದ್ದರು. ಸಿಟಿ ರವಿ ಮುಂದೆ ಸಿಎಂ ಆಗಲಿ ಎಂಬ ಬಯಕೆಯನ್ನ ಈಶ್ವರಪ್ಪ ವ್ಯಕ್ತಪಡಿಸಿದ್ದರು. ಸಿಟಿಆರ್ ನಾನು ಕೂಡ ಸಿಎಂ ಆಕಾಂಕ್ಷಿ ಎಂದು ಹೇಳಿದ ಮರುದಿನವೇ ಈಶ್ವರಪ್ಪ ಬ್ಯಾಟ್ ಬೀಸಿದ್ರು. ಇಷ್ಟೆಲ್ಲದರ ನಡುವೆ ಸಿಟಿ ರವಿ ಸೋಲು ಕಂಡಿರುವುದು ಎದುರಾಳಿಗಳಿಗೆ ಹೊಸ ಅಸ್ತ್ರ ಸಿಕ್ಕಂತಾಗಿದ್ದು, ಇದೇ ಹೇಳಿಕೆ ಹಿಡಿದು ಇದೀಗ ಬಿಜೆಪಿ ಮಾಜಿ ಶಾಸಕರಿಗೆ ತಿರುಗೇಟು ನೀಡುತ್ತಿದ್ದಾರೆ ನೆಟ್ಟಿಗರು.

ಅರವಿಂದ ಬೆಲ್ಲದ್‌ಗೂ ಆಸೆ ಇತ್ತು!

ಸಿಟಿ ರವಿ ಮಾತ್ರವಲ್ಲ, ಅರವಿಂದ್ ಬೆಲ್ಲದ್ ಕೂಡ ಪರೋಕ್ಷವಾಗಿ ತಾವೇ ಮುಂದಿನ ಸಿಎಂ ಎಂಬ ಮಾತನ್ನು ಹೇಳಿದ್ದರು. ಈ ಬಾರಿ ಚಿಕ್ಕ ವಯಸ್ಸಿನವ್ರು ಬಿಜೆಪಿಯಲ್ಲಿ ಸಿಎಂ ಆಗಬಹುದು. ಲಿಂಗಾಯತ ಸಮುದಾಯದ ಚಿಕ್ಕ ವಯಸ್ಸಿನವರೇ ಸಿಎಂ ಆಗಲಿದ್ದಾರೆ. ಈ ಬಾರಿ ಬಸವರಾಜ ಬೊಮ್ಮಾಯಿ ಸಿಎಂ ಆಗಿ ಮುಂದುವರೆಯಲ್ಲ ಬದಲಿಗೆ ಲಿಂಗಾಯತ ಸಮುದಾಯದ ಚಿಕ್ಕ ವಯಸ್ಸಿನವರೇ ಸಿಎಂ ಆಗಲಿದ್ದಾರೆಂದು ಹೇಳಿಕೆ ನೀಡಿದ್ದರು. ಆದರೆ ರಿಸಲ್ಟ್ ಬಂದ ನಂತರ ಎಲ್ಲಾ ತಲೆಕೆಳಗಾಗಿ ಬಿಜೆಪಿ 65 ಸ್ಥಾನಕ್ಕೆ ತೃಪ್ತಿಪಟ್ಟಿದೆ.

karnataka assembly election result 2023

ಬಿಎಸ್‌ವೈ ವಿರೋಧಿ ಬಣದಲ್ಲಿ ಬೆಲ್ಲದ್?

ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ಅವರನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸೋಕೆ ಪ್ರಯತ್ನ ನಡೆಸುತ್ತಿದ್ದ ಬಿಜೆಪಿಯ ಮತ್ತೊಂದು ಬಣದಲ್ಲಿ ಬೆಲ್ಲದ್ ಇದ್ರು ಎಂಬ ಆರೋಪವಿದೆ. ಹೀಗಾಗಿಯೇ ಬಿಎಸ್‌ವೈ ಸಿಎಂ ಸ್ಥಾನದಿಂದ ಕೆಳಗೆ ಇಳಿದ ನಂತರವೂ ಬೆಲ್ಲದ್‌ಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ ಎಂಬ ಆರೋಪ ಓಡಾಡಿತ್ತು. ಜೊತೆಗೆ ಸಿಎಂ ಕನಸು ಕಂಡ ಬೆಲ್ಲದ್ ಮಾತಿಗೆ ಪಕ್ಷದ ಒಳಗೆ ನಗುವಿನ ಸದ್ದು ಕೇಳಿತ್ತು. ಆದರೆ ಚುನಾವಣೆ ಫಲಿತಾಂಶ ಬಂದಾಗ ಅರವಿಂದ್ ಬೆಲ್ಲದ್ ಕನಸು ನುಚ್ಚುನೂರಾಗಿತ್ತು.

ಮುರುಗೇಶ್ ನಿರಾಣಿ ಆಸೆಗೆ ಕೊಳ್ಳಿ!

ಅಂದಹಾಗೆ ಈ ಹಿಂದೆ ಬಿಎಸ್ ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗಿಳಿದ ನಂತರ ಮುರುಗೇಶ್ ನಿರಾಣಿ ಸಿಎಂ ಆಗಬಹುದು ಎಂಬ ಅಂದಾಜು ಇತ್ತು. ಆದರೆ ಆಗಿದ್ದೇ ಬೇರೆ, ಬಸವರಾಜ ಬೊಮ್ಮಾಯಿಗೆ ಆ ಸಂದರ್ಭದಲ್ಲಿ ಪಟ್ಟಾಭಿಷೇಕ ನೆರವೇರಿತ್ತು. ಈ ಬಾರಿಯಾದರೂ ಸಿಎಂ ಆಗಬಹುದು ಎಂಬ ಕನಸು ನಿರಾಣಿ ಅವರಿಗೆ ಇತ್ತು. ಆದರೆ ಇಲ್ಲೂ ಎಲ್ಲಾ ಉಲ್ಟಾ ಹೊಡೆದು, ಬಿಜೆಪಿ ಕೇವಲ 66 ಸ್ಥಾನಗಳನ್ನ ಪಡೆದಿತ್ತು. ಈ ಎಲ್ಲಾ ಕಾರಣಗಳಿಂದ ಮುರುಗೇಶ್ ನಿರಾಣಿ ಆಸೆ, ಕನಸು ಕನಸಾಗಿಯೇ ಉಳಿಯಿತು.

ಸೋಲಿನ ನಡುವೆ ಸಂತೋಷ್ ವಿರುದ್ಧ ಸಿಟ್ಟು?

ಒಂದ್ಕಡೆ ಬಿಜೆಪಿ ನಾಯಕರ ಸಿಎಂ ಆಸೆ ಈಡೇರಿಲ್ಲ, ಮತ್ತೊಂದ್ಕಡೆ ಬಿಜೆಪಿ ನಾಯಕರಿಗೆ ಬಿಎಲ್ ಸಂತೋಷ್ ಕೈಗೊಳ್ಳುತ್ತಿರುವ ಏಕಪಕ್ಷೀಯ ನಿರ್ಧಾರಗಳು ಸಿಟ್ಟು ತರಿಸಿವೆ ಎಂಬ ಆರೋಪ ಓಡಾಡುತ್ತಿದೆ. ಬಿಜೆಪಿ ಭೀಕರ ಸೋಲು ಕಂಡಿದ್ದ ಪರಿಣಾಮ ಕೇಸರಿ ಪಡೆಯ ನಾಯಕರಿಗೆ ಸಿಟ್ಟು ಬಂದಿದೆ. ಅದರಲ್ಲೂ ಬಿಎಲ್ ಸಂತೋಷ್ ಕೈಗೊಂಡ ನಿರ್ಧಾರಗಳಿಂದ ಸೋಲು ಎದುರಾಗಿದೆ ಎಂಬ ಆರೋಪ ಪಕ್ಷದ ಪಡಸಾಲೆಯಲ್ಲಿ ಚರ್ಚೆ ಆಗ್ತಿದೆ. ಹೀಗಾಗಿ ಬಿಜೆಪಿ ರಾಷ್ಟ್ರೀಯ ನಾಯಕನ ಸಂತೋಷ್ ವಿರುದ್ಧ ಅಸಂತೋಷ ಮೊಳಗಿದೆ ಎನ್ನಲಾಗುತ್ತಿದೆ.

karnataka assembly election result 2023

ಬಿಎಲ್ ಸಂತೋಷ್ ವಿರುದ್ಧ ಸಿಟ್ಟೇಕೆ?

ಅಂದಹಾಗೆ ಬಿಜೆಪಿಯಲ್ಲಿ ಅ'ಸಂತೋಷ' ಮಡುಗಟ್ಟಿದ್ದು, ಯಾವುದೇ ಸಂದರ್ಭದಲ್ಲೂ ಈ ಅಸಮಾಧಾನವು ಸ್ಪೋಟಿಸುವ ಸಾಧ್ಯತೆ ಹೆಚ್ಚಾಗಿದೆ. ಈಗಿನ ಘಟನೆ ಕಾಂಗ್ರೆಸ್‌ಗೆ ಮತ್ತಷ್ಟು ಸಹಕಾರಿ ಆಗುವ ಸಾಧ್ಯತೆ ಹೆಚ್ಚಾದ ಹೊತ್ತಲ್ಲೇ ಮತ್ತೊಂದು ಚರ್ಚೆ ಶುರುವಾಗಿದೆ. ಅದೇನೆಂದರೆ ಬಿಜೆಪಿ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಇಷ್ಟು ಸಿಟ್ಟೇಕೆ? ಎಂದು ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಶುರುವಾಗಿದ್ದು, ಅದರ ಬಗ್ಗೆ ಮಾಹಿತಿ ಇಲ್ಲಿ ತಿಳಿಯೋಣ.

ಬಿಎಲ್ ಸಂತೋಷ್ ಮಾಡಿದ್ದೇನು? ಆಗಿದ್ದೇನು?

ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಜವಾಬ್ದಾರಿ ನಿರ್ವಹಿಸುವ ನೆಪದಲ್ಲಿ ಹಲವು ವಿಚಾರದಲ್ಲಿ ಮೂಗು ತೂರಿಸಿದ್ದರು ಎಂಬ ಆರೋಪ ಓಡಾಡಿದೆ. ಪ್ರತಿಯೊಂದರಲ್ಲೂ ಶಕ್ತಿ ಪ್ರದರ್ಶನಕ್ಕೆ ಮುಂದಾದದ್ದು ಬಿಜೆಪಿ ಸೋಲಿನ ಪ್ರಮುಖ ಕಾರಣಗಳಲ್ಲಿ ಒಂದು ಎನ್ನಲಾಗುತ್ತಿದೆ. ಜೊತೆಗೇ ಯಡಿಯೂರಪ್ಪ ವಿಚಾರ ಕೂಡ ಪ್ರಮುಖವಾಗಿ ಚರ್ಚೆಯಾಗುತ್ತಿದೆ. ಯಡಿಯೂರಪ್ಪ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದರ ಹಿಂದೆ ಯಾರ ಕೈವಾಡವಿತ್ತು ಎಂಬುದು ಮಾತುಕತೆಗೆ ವೇದಿಕೆ ಒದಗಿಸಿದೆ.

ಒಟ್ನಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಫಲಿತಾಂಶದ ಬಳಿಕ ಬಿಜೆಪಿ ಕಂಗೆಟ್ಟಿದೆ. ಅದರಲ್ಲೂ ಕರ್ನಾಟಕದ ಬಿಜೆಪಿ ನಾಯಕರು ತೀವ್ರವಾಗಿ ಸಿಟ್ಟಾಗಿದ್ದಾರೆ. ಅತ್ತ ಸಿಎಂ ಕನಸು ಕಂಡಿದ್ದ ಸಿಟಿ ರವಿ ಮತ್ತು ನಿರಾಣಿ ಸೋಲು ಕಂಡಿದ್ದರೆ, ಮತ್ತೊಂದ್ಕಡೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಕೇಂದ್ರ ಬಿಜೆಪಿ ನಾಯಕರು, ದಿಲ್ಲಿಯಿಂದ ಬಂದು ಇದಕ್ಕೆಲ್ಲಾ ಯಾವ ರೀತಿ ಅಂತ್ಯ ಹಾಡಿ ಅಸಮಾಧಾನ ಸರಿ ಮಾಡುತ್ತಾರಾ ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+