ಮಹಾಲಕ್ಷ್ಮೀ ಲೇಔಟ್‌ನಿಂದ ನಟರಾಜ್ ಗೌಡ ಕಾಂಗ್ರೆಸ್ ಅಭ್ಯರ್ಥಿ
ಬೆಂಗಳೂರು, ಸೆಪ್ಟೆಂಬರ್ 03 : ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಜೆಡಿಎಸ್ ಶಾಸಕ ಕೆ. ಗೋಪಾಲಯ್ಯ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಯಾವುದೇ ಕ್ಷಣದಲ್ಲಿ ಉಪ ಚುನಾವಣೆ ಎದುರಾಗುವ ಸಾಧ್ಯತೆ ಇದೆ. ಮೂರು ಪಕ್ಷಗಳು ತಯಾರಿ ಆರಂಭಿಸಿವೆ.
ಕರ್ನಾಟಕ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ, ರಾಜ್ಯ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ನಟರಾಜ್ ಗೌಡರನ್ನು ಕಣಕ್ಕಿಳಿಸುವ ಕುರಿತಾಗಿ ಚಿಂತನೆ ನಡೆಸಿದೆ. 17 ಕ್ಷೇತ್ರಗಳಲ್ಲಿ ಎಲ್ಲಿಯೂ ಅನರ್ಹ ಶಾಸಕರು ಗೆಲ್ಲಬಾರದು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಣತೊಟ್ಟಿವೆ.
ಎರಡು ದಶಕಗಳಿಂದ ನಟರಾಜ್ ಗೌಡ ಪಕ್ಷದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಗೌಡ ಸಮುದಾಯದ ಮತಗಳು ಹೆಚ್ಚಾಗಿರುವ ಕಾರಣ ನಟರಾಜ್ ಗೌಡ ಅಭ್ಯರ್ಥಿಯಾದರೆ ಸಮುದಾಯದ ಬೆಂಬಲವೂ ಸಿಗಲಿದೆ ಎಂಬುದು ಪಕ್ಷದ ಲೆಕ್ಕಾಚಾರವಾಗಿದೆ.

ವಿದ್ಯಾರ್ಥಿ ಸಂಘಟನೆ ನಂಟು : 1997 ರಲ್ಲಿ ವಿವಿ ಪುರಂ ಕಾಲೇಜಿನಲ್ಲಿ ಕಾಂಗ್ರೆಸ್‌ನ ಅಂಗ ಸಂಸ್ಥೆಯಾದ ಎನ್‌ಎಸ್‌ಯುಐ ಮೂಲಕ ನಟರಾಜ್ ಗೌಡ ರಾಜಕೀಯ ಜೀವನ ಆರಂಭಿಸಿದರು. ಸೋನಿಯಾ ಗಾಂಧಿ ಸಮಾವೇಶವನ್ನು ಆಯೋಜಿಸುವ ಚಟುವಟಿಕೆಗಳಲ್ಲಿ ತೊಡಗಿದ್ದರು.
ಎನ್‌ಎಸ್‌ಯುಐ ಸಕ್ರಿಯ ಸದಸ್ಯರಾಗಿ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿರುವ ನಟರಾಜ್ ಗೌಡ ಯುವ ಕಾಂಗ್ರೆಸ್ ಪದಾಧಿಕಾರಿಗಳಾಗಿ ಕೆಲಸ ಮಾಡಿದರು. ಕೆಪಿಸಿಸಿ ಕಚೇರಿಯ ಸಕ್ರಿಯ ಸದಸ್ಯರಾಗಿ, ಕಾರ್ಯದರ್ಶಿಯಾಗಿ, ಮಾಧ್ಯಮ ವಿಭಾಗದ ಸಂಯೋಜಕರಾಗಿ ಮತ್ತು ವಕ್ತಾರರಾಗಿ ಪ್ರಸ್ತುತ ರಾಜ್ಯ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಉಪ ಚುನಾವಣೆ ಟಿಕೆಟ್ ಸಿಗುವ ಕುರಿತು ಪ್ರತಿಕ್ರಿಯೆ ನೀಡಿರುವ ನಟರಾಜ್ ಗೌಡ, "ಉಪ ಚುನಾವಣಾ ಕಣಕ್ಕಿಳಿಯುವ ಕುರಿತು ಆಲೋಚನೆ ಇದೆ. ಆದರೆ, ಪಕ್ಷವು ತೆಗೆದುಕೊಳ್ಳುವ ನಿರ್ಧಾರಗಳಿಗೆ ಬದ್ಧರಾಗಿರುತ್ತೇನೆ" ಎಂದು ಹೇಳಿದ್ದಾರೆ.
ಪದವೀಧರರ ಕ್ಷೇತ್ರದ ಚುನಾವಣೆಗಾಗಿ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ತಳಮಟ್ಟದಲ್ಲಿ ನಟರಾಜ್ ಗೌಡ ಕಾರ್ಯ ನಿರ್ವಹಣೆ ಮಾಡಿದ್ದರು. ಆದ್ದರಿಂದ, ಕ್ಷೇತ್ರದ ಪರಿಚಯ ಚೆನ್ನಾಗಿದೆ.












Click it and Unblock the Notifications