ಈಚೆಗಷ್ಟೇ ಪುತ್ರ ಅಭಿಷೇಕ್ ಸಿನಿಮಾದ ಕೆಲ ದೃಶ್ಯ ವೀಕ್ಷಿಸಿದ್ದರಂತೆ ಅಂಬರೀಶ್
ಬೆಂಗಳೂರು, ನವೆಂಬರ್ 27: ರೆಬಲ್ ಸ್ಟಾರ್ ಅಂಬರೀಶ್ ನಿಧನ ಹೊಂದುವ ಕೇವಲ ಹತ್ತು ದಿನಗಳ ಮುಂಚೆಯಷ್ಟೇ ತಮ್ಮ ಪುತ್ರ ಅಭಿಷೇಕ್ ಅಭಿನಯದ ಮೊಟ್ಟ ಮೊದಲ ಚಲನಚಿತ್ರ 'ಅಮರ'ಚಿತ್ರದ ಕೆಲವು ತುಣುಕುಗಳನ್ನು ವೀಕ್ಷಿಸಿ ಭಾರಿ ಖುಷಿ ಪಟ್ಟಿದ್ದರು ಎಂದು ಅವರ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.
ಅಂಬರೀಶ್ ಅವರ ಪುತ್ರ ಅಭಿಷೇಕ್ ನಟಿಸುತ್ತಿರುವ ಚೊಚ್ಚಲ ಸಿನಿಮಾ ಮೇ 29ರಂದು ಸೆಟ್ ಏರಿದ್ದು, ದೇಶ ವಿದೇಶಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರವನ್ನು ಹಿರಿಯ ನಿರ್ಮಾಪಕ ಸಂದೇಶ್ ನಾಗರಾಜ್ ನಿರ್ಮಿಸುತ್ತಿದ್ದು, ಹಿರಿಯ ನಟಿ ಸುಧಾರಾಣಿ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿದ್ದಾರೆ.
ಮಾತ್ರವಲ್ಲದೆ ಅಭಿಷೇಕ್ ತಂದೆ ಅಂಬರೀಶ್ ಹಾಗೂ ತಾಯಿ ಸುಮಲತಾ ಕೂಡ ಅತಿಥಿ ಪಾತ್ರವೊಂದರಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಇನ್ನು ಚಿತ್ರೀಕರಣ ಹಂತದಲ್ಲಿರುವಾಗಲೇ ಅಂಬರೀಶ್ ಇಹಲೋಕ ತ್ಯಜಿಸಿದ್ದು, ಇದೀಗ ಅವರಿಬ್ಬರು ನಟಿಸಿರುವುದು ಅನುಮಾನವಾಗುತ್ತಿದೆ.

ಈ ನಡುವೆಯೇ ನಟ ಅಂಬರೀಶ್ ಅವರು ಪುತ್ರ ಅಭಿಷೇಕ್ ನಟಿಸುತ್ತಿರುವ ಚಿತ್ರದ ಕೆಲವು ದೃಶ್ಯಗಳನ್ನು ತರಿಸಿಕೊಂಡು ತಮ್ಮ ಮನೆಯಲ್ಲಿಯೇ ವೀಕ್ಷಿಸಿದ್ದರು. ಅಲ್ಲದೆ ಈ ಚಿತ್ರದ ತುಣುಕುಗಳನ್ನು ವೀಕ್ಷಿಸಿದ ಬಳಿಕ ಹರ್ಷ ವ್ಯಕ್ತಪಡಿಸಿದ್ದರು ಎಂದು ಹೇಳಲಾಗುತ್ತಿದೆ.
ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ನಟಿ ಸುಧಾರಾಣಿ ಅವರನ್ನು ಕಂಡ ಕೂಡಲೇ ಅಂಬರೀಶ್ ನನ್ನ ಮಗ ಹೇಗೆ ನಟಿಸುತ್ತಿದ್ದಾನೆ ಎಂದು ವಿಚಾರಿಸಿದ್ದರು. ಅದಕ್ಕೆ ನಟಿ ಸುಧಾರಾಣಿ ನಿಮ್ಮ ಮಗನಲ್ಲವೇ ಹೇಗೆ ನಟಿಸುತ್ತಾನೆ ಎಂದು ಹೇಳಬೇಕೇ ಎಂದು ಹಾಸ್ಯ ಚಟಾಕಿ ಹಾರಿಸಿದ್ದರು. ಇದರಿಂದ ತಮ್ಮ ಪುತ್ರ ನಟನೆಯ ಬಗ್ಗೆ ಸಂತೋಷ ಪಟ್ಟಿದ್ದ ಅಂಬರೀಶ್ ಸಿಕ್ಕವರಿಗೆಲ್ಲ ತಮ್ಮ ಪುತ್ರನ ಸಿನಿಮಾ ಬಗ್ಗೆ ಖುಷಿಯಿಂದ ಹೇಳಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಸಾಮಾನ್ಯವಾಗಿ ತಮ್ಮ ಖುಷಿಯನ್ನು ಯಾರೊಂದಿಗೂ ಹಂಚಿಕೊಳ್ಳದ ಅಂಬರೀಶ್ ಇತರರ ಕಷ್ಟ-ಸುಖಗಳಿಗಷ್ಟೇ ಕಿವಿಯಾಗುತ್ತಿದ್ದರು. ಆದರೆ ಕಳೆದ ಮೂರು ತಿಂಗಳಿನಿಂದ ಈಚೆಗೆ ಪುತ್ರನ ಸಿನಿಮಾ ಚಿತ್ರೀಕರಣ ಆರಂಭಗೊಂಡ ಬಳಿಕ ಆ ಚಿತ್ರದ ಬಗ್ಗೆ ಚಿತ್ರ ತಂಡದ ಸದಸ್ಯರನ್ನು ಹಾಗೂ ಹಿರಿಯ ನಟ-ಟಿಯರನ್ನು ಆ ಬಗ್ಗೆ ವಿಚಾರಿಸುತ್ತಿದ್ದರು ಹಾಗೂ ತಮ್ಮ ಕುತೂಹಲವನ್ನು ಹಂಚಿಕೊಳ್ಳುತ್ತಿದ್ದರು.
ತಮ್ಮ ಸಾವನ್ನು ಮೊದಲೇ ಕಂಡ ರೀತಿಯಲ್ಲಿ ಹತ್ತು ದಿನಗಳ ಹಿಂದೆ ಪುತ್ರನ ಸಿನಿಮಾದ ಹಲವು ದೃಶ್ಯಗಳನ್ನು ತರಿಸಿಕೊಂಡು ವೀಕ್ಷಿಸಿ ನಂತರ ಮಗನಿಗೆ ಶಹಬ್ಬಾಷ್ ಎಂದಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ಸಿನಿಮಾ ಚಿತ್ರೀಕರಣ ಪೂರ್ಣಗೊಳ್ಳುವ ಮೊದಲೇ ಅಂಬರೀಶ್ ಇನ್ನಿಲ್ಲವಾಗಿದ್ದಾರೆ.
ಅಂಬರೀಶ್ ಸ್ವತಃ ಮಗನ ಚಿತ್ರೀಕರಣ ಸಂದರ್ಭದಲ್ಲಿ ಯಾವತ್ತೂ ಭಾಗಿಯಾಗುತ್ತಿರಲಿಲ್ಲ, ತಾಯಿ ಸುಮಲತಾ ಅವರೇ ಬಹುತೇಕ ಸಮಯದಲ್ಲಿ ಹಾಜರಿರುತ್ತಿದ್ದರು. ತಮ್ಮ ಪುತ್ರ ಎದುರಿಗಿದ್ದರೆ ನಟನೆಗೆ ಹಿಂಜರಿಯಬಹುದು ಎಂಬ ಕಾರಣಕ್ಕಾಗಿ ಅಂಬರೀಶ್ ಚಿತ್ರೀಕರಣ ಸೆಟ್‌ನಿಂದ ದೂರ ಉಳಿದಿದ್ದರು.












Click it and Unblock the Notifications