ಗಂಡ ಚಾಕೊಲೇಟ್ ಕೊಡಿಸಲಿಲ್ಲ.. ಹೆಂಡತಿ ಜೀವ ಕಳೆದುಕೊಂಡಳು..!
ಬೆಂಗಳೂರು: ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನೋ ಗಾದೆ ಮಾತಿದೆ. ಆದರೆ ಈಗಿನ ಕಾಲದಲ್ಲಿ ಸಣ್ಣ ಸಣ್ಣ ವಿಚಾರಕ್ಕೂ ಜೀವ ತೆಗೆದುಕೊಳ್ಳುವ ನಿರ್ಧಾರ ಮಾಡಿಬಿಡುತ್ತಾರೆ ಗಂಡ ಅಥವಾ ಹೆಂಡತಿ. ಅದರಲ್ಲೂ ಗಂಡ ಚಾಕೊಲೇಟ್ ತಂದು ಕೊಡಲಿಲ್ಲ ಅನ್ನೋ ಕಾರಣಕ್ಕೆ ಹೆಂಡತಿ ನೇಣು ಬಿಗಿದುಕೊಂಡಿರುವ ವಿಲಕ್ಷಣ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರದಿಯಾಗಿದೆ.
ಮಹಾನಗರಿ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ಮೃತ ಮಹಿಳೆಯನ್ನು ನಂದಿನಿ(25) ಎಂದು ಗುರುತಿಸಲಾಗಿದೆ. ಮೃತ ಮಹಿಳೆ ನಂದಿನಿಯ ಪತಿ ಶಂಕರನಗರದ ಸಲೂನ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಈ ಜೋಡಿ ಮುದ್ದಾದ ಇಬ್ಬರು ಮಕ್ಕಳ ಜೊತೆ ಹೆಣ್ಣೂರು ಬಳಿಯ ಹೊನ್ನಪ್ಪ ಲೇಔಟ್‌ನಲ್ಲಿ ಜೀವನ ಸಾಗಿಸುತ್ತಿದ್ದರು. ಆದರೆ ಪತ್ನಿಯ ಕಠಿಣ ನಿರ್ಧಾರ ಕುಟುಂಬಕ್ಕೆ ಈಗ ದೊಡ್ಡ ಆಘಾತವನ್ನೇ ನೀಡಿದೆ.

ಲವ್ ಮ್ಯಾರೇಜ್: ನಂದಿನಿ ಹಾಗೂ ಗೌತಮ್ ಕಾಲೇಜು ದಿನಗಳಿಂದ ಸ್ನೇಹಿತರಾಗಿದ್ದು, ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ನಂದಿನಿ ಹಾಗೂ ಗೌತಮ್ ಪ್ರೀತಿಗೆ ಸಾಕ್ಷಿಯಾಗಿ ಇಬ್ಬರು ಮಕ್ಕಳೂ ಇದ್ದರೂ. ಆದರೆ ಘಟನೆ ನಡೆಯುವ ದಿನ ಎಂದಿನಂತೆ ಕೆಲಸಕ್ಕೆ ಹೊರಟಿದ್ದ ಪತಿಯ ಜೊತೆಗೆ ಪತ್ನಿ ಕಿರಿಕ್ ತೆಗೆದಿದ್ದಳಂತೆ. ನನಗೆ ಚಾಕೊಲೇಟ್ ಬೇಕು ಎಂಬ ಬೇಡಿಕೆ ಇಟ್ಟಿದ್ದಳಂತೆ ನಂದಿನಿ. ಹೆಂಡತಿಯ ಆಸೆ ಪೂರೈಸುವುದನ್ನು ತಡ ಮಾಡಿದ್ದಕ್ಕೆಇಂತಹ ಘಟನೆ ನಡೆದು ಹೋಗಿದೆ.
ಕೆಲಸದ ಒತ್ತಡದಲ್ಲಿ ಪತಿ: ಮೃತ ನಂದಿನಿ ಪತಿ ಗೌತಮ್ ಹೆಂಡತಿ ಜೊತೆ ಕಿರಿಕ್ ಮಾಡಿಕೊಂಡ ದಿನ ಕೆಲಸದ ಒತ್ತಡದಲ್ಲಿದ್ದ ಎನ್ನಲಾಗಿದೆ. ಹೀಗಾಗಿ ಬೆಳಗ್ಗೆ ನೇರವಾಗಿ ಸಲೂನ್ ಶಾಪ್‌ಗೆ ತೆರಳಿದ್ದಾನೆ. ಇದರಿಂದ ನಂದಿನಿ ಮತ್ತಷ್ಟು ಕೋಪಗೊಂಡು, ಗಂಡ ನನಗೆ ಚಾಕೊಲೇಟ್ ಕೊಡಿಸಲಿಲ್ಲ ಎಂಬ ಬೇಸರದಲ್ಲಿದ್ದಳಂತೆ. ಮುಂದೆ ನಡೆಯುವ ಘಟನೆಯ ಅರಿವಿಲ್ಲದೆ ಗೌತಮ್ ತನ್ನ ಕೆಲಸದಲ್ಲೇ ಮಗ್ನನಾಗಿದ್ದ.
ಕರೆ ಸ್ವೀಕರಿಸದ ನಂದಿನಿ: ಕೆಲಸ ಮುಗಿಸಿ ಸ್ವಲ್ಪ ಬಿಡುವಾದ ನಂತರ ತನ್ನ ವಾಟ್ಸಾಪ್ ತೆರೆದಿದ್ದ ಗೌತಮ್‌ಗೆ ಶಾಕ್ ಕಾದಿತ್ತು. ಪತ್ನಿ ಮಾಡಿದ್ದ ಮೆಸೇಜ್ ನೋಡಿ ಬೆಚ್ಚಿಬಿದ್ದಿದ್ದ ಗೌತಮ್. ನಂದಿನಿ ಕಳಿಸಿದ್ದ ಆ ಮೆಸೇಜ್‌ನಲ್ಲಿ 'ನಾನು ಹೋಗುತ್ತಿದ್ದೇನೆ, ಮಕ್ಕಳನ್ನು ಚೆನ್ನಾಗಿ ನೋಡಿಕೋ' ಎಂಬ ಸಂದೇವಿತ್ತು. ತಕ್ಷಣ ಪತ್ನಿಗೆ ಕರೆ ಮಾಡಿದ್ದ ಗೌತಮ್. ಆದರೆ ಪತ್ನಿ ಆತನ ಕರೆಯನ್ನು ಸ್ವೀಕರಿಸಿರಲಿಲ್ಲ. ಹೀಗಾಗಿ ಅನುಮಾನಗೊಂಡು ತಕ್ಷಣ ಆತ ಮನೆಗೆ ತೆರಳಿದ್ದಾನೆ. ಕೊನೆಗೆ ಭೀಕರ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಜೀವ ಉಳಿಸಲು ಪ್ರಯತ್ನ: ಇನ್ನು ನಂದಿನಿಯ ಜೀವ ಕಾಪಾಡಲು ಗೌತಮ್ ಹರಸಾಹಸಪಟ್ಟಿದ್ದು, ತಕ್ಷಣ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದಾನೆ. ಆದರೆ ತಕ್ಷಣ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿದರೂ ಅಷ್ಟರಲ್ಲಾಗಲೇ ನಂದಿನಿ ಮೃತಪಟ್ಟಿದ್ದಳು. ಹೆಂಡತಿಯ ಪ್ರಾಣ ಪಕ್ಷಿ ಹಾರಿಹೋಗಿರುವ ವಿಚಾರ ಗೊತ್ತಾದ ತಕ್ಷಣ ಗೌತಮ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಅಷ್ಟರಲ್ಲಾಗಲೇ ಈ ವಿಷಯ ಸುತ್ತಮುತ್ತಲೂ ಹಬ್ಬಿಬಿಟ್ಟಿತ್ತು.
ಇಬ್ಬರು ಮಕ್ಕಳು ಅನಾಥ: ಮೃತ ನಂದಿನಿ ಹಾಗೂ ಗೌತಮ್ ಪ್ರೀತಿಸಿ ಮದುವೆಯಾದರೂ ಕ್ಷುಲ್ಲಕ ವಿಚಾರಕ್ಕೆ ಪತ್ನಿ ಜೀವ ಕಳೆದುಕೊಳ್ಳುವ ಮೂಲಕ ಇಬ್ಬರು ಮಕ್ಕಳನ್ನು ಅನಾಥರನ್ನಾಗಿದ್ದಾರೆ. ಏನೂ ಅರಿಯದ ಕಂದಮ್ಮಗಳು ಈಗ ತಾಯಿಯ ಪ್ರೀತಿ, ಅಕ್ಕರೆ, ಮಮತೆ ಇಲ್ಲದೆ ಜೀವನ ನಡೆಸಬೇಕಿದೆ. ಮತ್ತೊಂದು ಕಡೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಹೆಣ್ಣೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದು, ಪೊಲೀಸರ ತನಿಖೆ ಮುಗಿದ ಮೇಲೆ ಸತ್ಯಾಂಶ ಹೊರಬೀಳಲಿದೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications