ಸಿದ್ದು ಓಟಕ್ಕೆ ಬ್ರೇಕ್ ಹಾಕಲು ಬಂತು ಸಮನ್ವಯ ಸಮಿತಿ
ಬೆಂಗಳೂರು, ಸೆ.26 : ಹಲವಾರು ದಿನಗಳ ಹಗ್ಗಜಗ್ಗಾಟದ ನಂತರ ಕರ್ನಾಟಕದಲ್ಲಿ ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯ ಸಾಧಿಸಲು ಕಾಂಗ್ರೆಸ್ ಸಮನ್ವಯ ಸಮಿತಿ ರಚಿಸಿದೆ. ಸಚಿವ ಸ್ಥಾನ ವಂಚಿತರಾದ ಹಿರಿಯ ಮುಖಂಡ ಡಿ.ಕೆ.ಶಿವಕುಮಾರ್ ಅವರು ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.
ಗುರುವಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕರ್ನಾಟಕ ಕಾಂಗ್ರೆಸ್ ನಲ್ಲಿ ಆರು ಮಂದಿ ಸದಸದ್ಯರನ್ನು ಹೊಂದಿರುವ ಸಮನ್ವಯ ಸಮತಿ ರಚಿಸಲು ಒಪ್ಪಿಗೆ ನೀಡಿದ್ದಾರೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರ ಕೈಗೆ ಸಮಿತಿಯ ಚುಕ್ಕಾಣಿ ನೀಡಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಸಮಿತಿಯ ಸಂಚಾಲಕ ಸ್ಥಾನ ನೀಡಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಸ್ಥಾನ ವಂಚಿತ ಹಿರಿಯ ಮುಖಂಡ ಡಿ.ಕೆ.ಶಿವಮಕುಮಾರ್ ಅವರಿಗೆ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ. ಈ ಮೂಲಕ ಶಿವಕುಮಾರ್ ಅವರ ಅಸಮಾಧಾನವನ್ನು ಸ್ಪಲ್ಪ ಮಟ್ಟಿಗೆ ಕಡಿಮೆ ಮಾಡಲು ಪಕ್ಷ ಮುಂದಾಗಿದೆ.
ಪಕ್ಷ ಮತ್ತು ಸರ್ಕಾರದ ನಡುವೆ ಹೊಂದಾಣಿಕೆ ತರಲು ಸಮನ್ವಯ ಸಮತಿ ರಚನೆ ಮಾಡಲಾಗಿದೆ. ಪ್ರಾಣಾಳಿಕೆಗಳ ಜಾರಿ, ಸಚಿವರಿಗೆ ಸಹಕಾರ ಮುಂತಾದ ವಿಚಾರಗಳಲ್ಲಿ ಸಮಿತಿ ಸರ್ಕಾರಕ್ಕೆ ಸಹಾಯ ಮಾಡಲಿದೆ. ಪಕ್ಷದ ಪ್ರಣಾಳಿಕೆಯ ಭರವಸೆಯನ್ನು ಈಡೇರಿಸುವ ಕುರಿತು ಸರ್ಕಾರಕ್ಕೆ ಸಮಿತಿ ಸಲಹೆ ನೀಡಲಿದೆ.
ಸಮಿತಿಯ ಸದಸ್ಯರು : ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಸಮಿತಿಯ ನೇತೃತ್ವ ವಹಿಸಿದ್ದಾರೆ. ಉಳಿದಂತೆ, ಸಮಿತಿಯ ಸಂಚಾಲಕರಾಗಿ ಡಾ.ಜಿ.ಪರಮೇಶ್ವರ್ ಅವರನ್ನು ನೇಮಿಸಲಾಗಿದೆ. ಉಳಿದಂತೆ ಎಐಸಿಸಿಯಿಂದ ಸೆಲ್ವ ಕುಮಾರ್, ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಕೆ.ಜೆ.ಜಾರ್ಜ್, ಡಿ.ಕೆ.ಶಿವಕುಮಾರ್ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.
ಭಿನ್ನಾಭಿಪ್ರಾಯವಿಲ್ಲ : ಪಕ್ಷ ಮತ್ತು ಸರ್ಕಾರದ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕಾಂಗ್ರೆಸ್ ಸರ್ಕಾರವಿರುವ ಎಲ್ಲಾ ರಾಜ್ಯಗಳಲ್ಲಿ ರಚಿಸುವಂತೆ ಕರ್ನಾಟಕದಲ್ಲಿ ಸಮನ್ವಯ ಸಮಿತಿ ರಚನೆ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಇದು ಕಾಂಗ್ರೆಸ್ ಪಾಲಿಗೆ ಹೊಸ ಪರಿಕಲ್ಪನೆಯಲ್ಲ.
ಹಿಂದೆ ವೀರಪ್ಪ ಮೊಯ್ಲಿ, ಎಸ್.ಎಂ.ಕೃಷ್ಣ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗಲೂ ಬೇರೆ-ಬೇರೆ ರೂಪದಲ್ಲಿ ಸಮಿತಿ ಅಸ್ತಿತ್ವದಲ್ಲಿತ್ತು. ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯ ಸಾಧಿಸಲು ಈ ಸಮಿತಿ ರಚಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಸಮಿತಿ ರಚಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಓಟಕ್ಕೆ ಕಾಂಗ್ರೆಸ್ ಬ್ರೇಕ್ ಹಾಕಿದೆ ಎಂಬ ಮಾತುಗಳು ಕೇಳಿಬರುತ್ತಿವೆ.












Click it and Unblock the Notifications