ಬೆಂಗಳೂರಿಗೂ ಬರಲಿದೆ 'ಟ್ರಿಣ್ ಟ್ರಿಣ್' ಸೈಕಲ್ ಸೇವೆ
ಬೆಂಗಳೂರು, ಜುಲೈ 4: ಮೈಸೂರಿನ ನಂತರ ಇದೀಗ ರಾಜ್ಯ ಸರ್ಕಾರ 'ಟ್ರಿಣ್ ಟ್ರಿಣ್' ಬೈಸಿಕಲ್ ಯೋಜನೆಯನ್ನು ಬೆಂಗಳೂರು ನಗರದಲ್ಲಿಯೂ ಜಾರಿಗೆ ತರಲು ಹೊರಟಿದೆ.
ಈ ಯೋಜನೆಯಿಂದಾಗಿ ಪರಿಸರ ಮಾಲಿನ್ಯಕ್ಕೂ ಬ್ರೇಕ್ ಬೀಳಲಿದೆ. ಜೊತೆಗೆ ನಿಮಗೆ ಬೇಕಾದ ಜಾಗಕ್ಕೆ ಸುಲಭ ಪ್ರಯಾಣ ಮಾಡಬಹುದಾಗಿದ್ದು, ಅನಗತ್ಯ ಖರ್ಚು ತಗ್ಗಲಿದೆ.
ಬಾಡಿಗೆಗೆ ಸೈಕಲ್ ಒದಗಿಸುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಯೋಜನೆ ಈಗಾಗಲೇ ಮೈಸೂರು ನಗರದಲ್ಲಿ ಜಾರಿಗೆ ಬಂದಿದ್ದು, ಪ್ರವಾಸಿಗರಿಗೆ ಪ್ರತಿ ಗಂಟೆಗೆ 15 ರೂಪಾಯಿಯಂತೆ ಸೈಕಲ್ ಒದಗಿಸಲಾಗುತ್ತಿದೆ. ಅದೇ ರೀತಿಯಾಗಿ ಬೆಂಗಳೂರಿನಲ್ಲೂ ಜಾರಿಯಾಗಲಿದ್ದು, ನಗರದೆಲ್ಲೆಡೆ ಸೈಕಲ್‌ಗಳ ಟ್ರಿಣ್ ಟ್ರಿಣ್ ಸದ್ದು ಮೊಳಗಲಿದೆ.

ಇದಕ್ಕಾಗಿ ನಗರದ ಪ್ರಮುಖ ಕಡೆಗಳಲ್ಲಿ ಸೈಕಲ್ ಸ್ಟ್ಯಾಂಡ್ ನಿರ್ಮಾಣ, ನಿಲ್ದಾಣಕ್ಕೆ ಅಗತ್ಯವಿರುವ ವಿದ್ಯುತ್ ಸಂಪರ್ಕ, ಸ್ಮಾರ್ಟ್‌ಕಾರ್ಡ್ ಸ್ವೆಪ್ ಮಾಡುವ ಯಂತ್ರಗಳ ಅಳವಡಿಕೆ ಸೇರಿದಂತೆ ಇನ್ನಿತರ ಸಿದ್ಧತೆಗಳನ್ನು ಮಾಡಬೇಕಿದ್ದು, ಮೆಟ್ರೋ ನಿಲ್ದಾಣಗಳಲ್ಲೂ ಬಾಡಿಗೆ ಸೈಕಲ್‌ಗಳ ಸೇವೆ ದೊರೆಯಲಿದೆ.
ನಗರ ಭೂ ಸಾರಿಗೆ ನಿರ್ದೇಶನಾಲಯ ಈ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಿದೆ. ಮೊದಲ ಹಂತದಲ್ಲಿ 5000ಬೈಸಿಕಲ್ ಗಳು ಸಾರ್ವಜನಿಕ ಸೇವೆಗೆ ಸಿಗಲಿದೆ. ರೈಲ್ವೇ ನಿಲ್ದಾಣ, ಮೆಟ್ರೋ ರೈಲು ನಿಲ್ದಾಣ, ಬಿಎಂಟಿಸಿ ಬಸ್ ನಿಲ್ದಾಣ ಹಾಗೂ ಸಾರ್ವಜನಿಕರು ಹೆಚ್ಚು ಭೇಟಿ ನೀಡ ಬಯಸುವ ಸ್ಥಳಗಳಿಗೆ ಈ ಸೇವೆಯನ್ನು ಒದಗಿಸಲು ನಿರ್ಧರಿಸಲಾಗಿದೆ.
ಪ್ರತಿ ಬೈಸಿಕಲ್ ನಲ್ಲಿಯೂ ಜಿಪಿಎಸ್ ಅಳವಡಿಕೆ ಮಾಡಲಾಗಿದೆ, ಬೆಂಗಳೂರು ನಗರದಾಧ್ಯಂತ 350ಡಾಕಿಂಗ್ ಸ್ಟೇಷನ್ ಗಳನ್ನು ತೆರೆಯಲಾಗುತ್ತಿದ್ದು ಬಿಬಿಎಂಪಿ ಸಹಯೋಗದೊಂದಿಗೆ ಬೈಸಿಕಲ್ ಪಥವನ್ನು ನಿರ್ಮಿಸುವ ಯೋಜನೆಯನ್ನು ಮಾಡಲಾಗಿದೆ. ಮೊದಲ ಹಂತದಲ್ಲಿ ಹೀರೋ ಕಂಪನಿ ಬೈಸಿಕಲ್ ಗಳನ್ನು ಬಾಡಿಗೆ ಆಧಾರದಲ್ಲಿ ಸಾರ್ವಜನಿಕ ಸೇವೆಗೆ ಒದಗಿಸಲು ಒಪ್ಪಿದೆ.
ಸೈಕಲ್‌ನಲ್ಲಿ ಓಡಾಡ ಬಯಸುವವರು ನಗರದಲ್ಲಿರುವ ಯಾವುದಾದರೊಂದು ನೋಂದಣಿ ಕೇಂದ್ರದಲ್ಲಿ ತಮ್ಮ ಗುರುತಿನ ಚೀಟಿ ಅಥವಾ ವಿಳಾಸದ ಚೀಟಿಯನ್ನು ಪ್ರದರ್ಶಿಸಿದರೆ ಅವರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ. ಇದನ್ನು ಎಲ್ಲಿ ಬೇಕಾದರೂ ಬಳಸಬಹುದಾಗಿದ್ದು, ನಿಮ್ಮ ಅನುಕೂಲಕತೆಗೆ ತಕ್ಕಂತೆ ಸೈಕಲ್ ಪಡೆಯಬಹುದು.
ಇನ್ನು ಪ್ರತಿ ಗಂಟೆಗೆ ಎಷ್ಟು ಪಾವತಿ ಮಾಡಬೇಕೆಂಬುದು ಇನ್ನೂ ನಿರ್ಧಾರವಾಗಿಲ್ಲ. ಆದ್ರೆ ಮೈಸೂರಿನಲ್ಲಿರುವಂತೆ ಒಂದು ಗಂಟೆಗೆ 15 ರೂ., ನಂತರದ ಪ್ರತಿ ಅರ್ಧ ಗಂಟೆಗೆ 10 ರೂಪಾಯಿಯಂತೆ ನಿಗದಿ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಪರಿಸರ ಪ್ರೇಮಿಗಳು ಈ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನಗತ್ಯವಾಗಿ ಇಂಧನ ಬಳಸುವ ವಾಹನಗಳ ಬಳಕೆ ಕಡಿಮೆ ಮಾಡಿ ಸೈಕಲ್ ಉಪಯೋಗಿಸಿದರೆ ಮಾಲಿನ್ಯ ತಡೆಗೆ ಸಹಕಾರಿಯಾಗಲಿದೆ.












Click it and Unblock the Notifications