IPL 2023: ಸಿಎಸ್‌ಕೆ ತಂಡದ ಸಾಧನೆ ಪಠ್ಯವಾಗಲಿ ಎಂದ ಎಡಿಜಿಪಿ ಅಲೋಕ್ ಕುಮಾರ್: ನೆಟ್ಟಿಗರ ಪ್ರತಿಕ್ರಿಯೆ ಹೇಗಿತ್ತು ನೋಡಿ?
ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೈನಲ್ ತಲುಪಿದೆ. ನಾಯಕ ಎಂಎಸ್ ಧೋನಿ ಯುವ ಬೌಲಿಂಗ್ ಪಡೆಯೊಂದಿಗೆ ತಂಡವನ್ನು ಫೈನಲ್‌ವರೆಗೆ ಮುನ್ನಡೆಸಿದ್ದಾರೆ. ಕಳೆದ ಬಾರಿ ಕಳಪೆ ಪ್ರದರ್ಶನ ನೀಡುವ ಮೂಲಕ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಅಲಂಕರಿಸಿದ್ದ ಸಿಎಸ್‌ಕೆ ಈ ಬಾರಿ ವಾಪಸಾತಿ ಮಾಡಿದೆ.
CSK success story must be included as part of curriculum in every Management institution for teaching students “ Leadership & Team Building”
— alok kumar (@alokkumar6994) May 24, 2023
ಸಿಎಸ್‌ಕೆ ತಂಡದ ಆಟಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕರ್ನಾಟಕ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ಸಿಎಸ್‌ಕೆ ತಂಡದ ಆಟವನ್ನು ಮೆಚ್ಚಿಕೊಂಡಿದ್ದು, ಸಿಎಸ್‌ಕೆ ತಂಡದ ಯಶಸ್ಸಿನ ಕಥೆ ಕಾಲೇಜು ವಿದ್ಯಾರ್ಥಿಗಳಿಗೆ ಪಠ್ಯವಾಗಬೇಕು ಎಂದು ಹೇಳಿದ್ದಾರೆ.

ಟ್ವೀಟ್ ಮಾಡಿರುವ ಅವರು, ಚೆನ್ನೈ ಸೂಪರ್ ಕಿಂಗ್ಸ್ ತಂಡ ಯಶಸ್ಸಿನ ಕಥೆ ಮ್ಯಾನೇಜ್‌ಮೆಂಟ್ ಕಾಲೇಜುಗಳಲ್ಲಿ ಪಠ್ಯವನ್ನಾಗಿ ಅಳವಡಿಸನೇಕು, ವಿದ್ಯಾರ್ಥಿಗಳಿಗೆ 'ನಾಯಕತ್ವ ಮತ್ತು ತಂಡವನ್ನು ಕಟ್ಟುವ ಬಗ್ಗೆ' ಪಾಠ ಮಾಡಬೇಕು ಎಂದು ಹೇಳಿದ್ದಾರೆ.
ಅಲೋಕ್ ಕುಮಾರ್ ಅವರು ಮಾಡಿರುವ ಟ್ವೀಟ್‌ಗೆ ಹಲವು ರೀತಿಯ ಪ್ರತಿಕ್ರಿಯೆಗಳು ಬಂದಿವೆ. "ಸೋಲಿನಿಂದ ಪಾಠ ಕಲಿಯುವುದು ಬಹಳಷ್ಟು ಇದೆ, ಆರ್ ಸಿಬಿ ಪಠ್ಯವನ್ನು ಸೇರಿಸಬೇಕು" ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದು, "ಇದನ್ನು ಒಪ್ಪಿಕೊಳ್ಳುತ್ತೇನೆ, ಅವರ ಯಶಸ್ಸಿನ ಕಥೆಯ ಜೊತೆಗೆ, ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಆ ತಂಡ 2 ವರ್ಷ ಬ್ಯಾನ್ ಆಗಿದ್ದನ್ನು ಅಳಿಸುವುದಿಲ್ಲ ಎಂದು ಭಾವಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
ಆರ್ ಸಿಬಿ ತಂಡದ ಬಗ್ಗೆ ಪಠ್ಯ ಇರಬೇಕು
ಮತ್ತೊಬ್ಬರು ಕೂಡ ಟ್ವೀಟ್ ಮಾಡಿದ್ದು, " ಆರ್ ಸಿಬಿ ಬಗ್ಗೆ ಪಠ್ಯ ಸೇರಿಸಬೇಕು, ಹಲವು ಬಾರಿ ಸೋತ ಮೇಲೂ ವಿಶ್ವಾಸದಿಂದ ಈ ಸಲ ಕಪ್ ನಮ್ದೇ ಎಂದು ಹೇಳುತ್ತಾರೆ. ಸೋಲುಗಳನ್ನು ನಿಭಾಯಿಸುವುದು ಕೂಡ ಮುಖ್ಯವಾಗುತ್ತದೆ" ಎಂದು ಆರ್ ಸಿಬಿ ಪರವಾಗಿ ಬ್ಯಾಟ್ ಬೀಸಿದ್ದಾರೆ.
"ಮತ್ತೊಬ್ಬರು ಟ್ವೀಟ್ ಮಾಡಿದ್ದು, ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಉತ್ತಮ ಪ್ರದರ್ಶನ ನೀಡಲು ತಂಡದ ನಾಯಕರು ಮುಖ್ಯ ಕಾರಣ, ಪಂಜಾಬ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ಉತ್ತಮ ತಂಡಗಳನ್ನು ಹೊಂದಿದ್ದರು ಸರಿಯಾದ ನಾಯಕತ್ವದ ಕೊರತೆಯಿಂದ ಟೂರ್ನಿಯಿಂದ ಹೊರಬಿದ್ದವು" ಎಂದು ಹೇಳಿದ್ದಾರೆ.
ಮತ್ತೊಬ್ಬರು ಪ್ರತಿಕ್ರಿಯೆ ನೀಡಿ, "ಸಿಎಸ್‌ಕೆ ತಂಡದ ಸಕ್ಸಸ್ ಸ್ಟೋರಿಯನ್ನು ಏನೆಂದು ಕಲಿಸುತ್ತೀರಿ? ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಂಡ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಆ ತಂಡವನ್ನು ಎರಡು ವರ್ಷಗಳ ಕಾಲ ಬ್ಯಾನ್ ಮಾಡಿತ್ತು. ಇದೆಲ್ಲವನ್ನೂ ವಿದ್ಯಾರ್ಥಿಗಳಿಗೆ ಕಲಿಸುತ್ತೀರಾ?, ಅದರ ಬದಲು ಆರ್ ಸಿಬಿ ಹೇಗೆ ಅಷ್ಟು ನಿಯತ್ತಿನ ಅಭಿಮಾನಿಗಳನ್ನು ಹೊಂದಿದೆ, ಪ್ರಾಮಾಣಿಕತೆ ಬಗ್ಗೆ ಆರ್ ಸಿಬಿ ತಂಡದಿಂದ ಕಲಿಯಬೇಕು ಎಂದು ಹೇಳಿದ್ದಾರೆ.












Click it and Unblock the Notifications