ಶಾಸಕ ಸತೀಶ್ ರೆಡ್ಡಿ ಪರ ದರ್ಶನ್ ಭರ್ಜರಿ ಪ್ರಚಾರ!
ಬೊಮ್ಮನಹಳ್ಳಿ: ರಾಜ್ಯ ಚುನಾವಣಾ ಅಖಾಡದಲ್ಲಿ ಚಿತ್ರ ತಾರೆಯರ ಮೆರಗು ರಂಗು ರಂಗಾಗಿದೆ. ಅದರಲ್ಲೂ ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಸ್ಯಾಂಡಲ್‌ವುಡ್ ನಟ, ನಟಿಯರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಹಾಗೇ ಬೆಂಗಳೂರಿನ ಹೈವೋಲ್ಟೇಜ್ ಕ್ಷೇತ್ರ ಬೊಮ್ಮನಹಳ್ಳಿಯಲ್ಲಿ ನಟ ದರ್ಶನ್ ಭರ್ಜರಿ ಪ್ರಚಾರ ನಡೆಸಿ, ಶಾಸಕ ಸತೀಶ್ ರೆಡ್ಡಿ ಪರವಾಗಿ ಮತಯಾಚನೆ ಮಾಡಿದ್ದಾರೆ.
ಬೊಮ್ಮನಹಳ್ಳಿ ಜಿದ್ದಾಜಿದ್ದಿನ ಹಣಾಹಣಿಗೆ ಸಾಕ್ಷಿಯಾಗಿ ನಿಂತಿದೆ. ಕಳೆದ 3 ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸತತ ಗೆಲುವು ಕಾಣುತ್ತಾ ಶಾಸಕರಾಗಿರುವ ಸತೀಶ್ ರೆಡ್ಡಿ 4ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹೀಗಾಗಿ ಈ ಚುನಾವಣೆ ಸಾಕಷ್ಟು ಗಮನ ಸೆಳೆದಿದ್ದು, ನಟ ದರ್ಶನ್ ಕೂಡ ಸತೀಶ್ ರೆಡ್ಡಿ ಪರ ಬೊಮ್ಮನಹಳ್ಳಿಯ ಗಾರ್ಮೆಂಟ್ಸ್ ಹಾಗೂ ಪ್ರಮುಖ ಪ್ರದೇಶಗಳಲ್ಲಿ ಮತಯಾಚನೆ ಮಾಡಿದರು. ಇನ್ನು ದರ್ಶನ್ ಎಂಟ್ರಿ ಹಿನ್ನೆಲೆಯಲ್ಲಿ ಭಾರಿ ಜನಸಂಖ್ಯೆ ಬೊಮ್ಮನಹಳ್ಳಿಯಲ್ಲಿ ನೆರೆದಿತ್ತು. ಬೊಮ್ಮನಹಳ್ಳಿ-ಬೇಗೂರು ರಸ್ತೆಯಲ್ಲಿ ನಟ ದರ್ಶನ್ ಫ್ಯಾನ್ಸ್ ಭಾರಿ ಸಂಖ್ಯೆಯಲ್ಲಿ ಸೇರಿ ನೆಚ್ಚಿನ ನಟನನ್ನ ಬರಮಾಡಿಕೊಂಡರು.

ಏನಿದು ಗಾರ್ಮೆಂಟ್ಸ್ ಲೆಕ್ಕಾಚಾರ?
ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಹತ್ತಾರು ಗಾರ್ಮೆಂಟ್ಸ್ ತಲೆ ಎತ್ತಿವೆ. ಇಲ್ಲಿ ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಹೊರ ರಾಜ್ಯದಿಂದ ಬಂದು ಬದುಕು ಕಟ್ಟಿಕೊಂಡ ಕಾರ್ಮಿಕರ ಸಂಖ್ಯೆ ಸಾಕಷ್ಟಿದೆ. ಈ ಎಲ್ಲಾ ಲೆಕ್ಕಾಚಾರಗಳ ಆಧಾರದಲ್ಲೇ ಎಲೆಕ್ಷನ್ ನಡೆಯುತ್ತದೆ. ಈ ಹಿಂದೆ ಕೂಡ ಸತೀಶ್ ರೆಡ್ಡಿ ಶಾಸಕರಾಗುವಲ್ಲಿ ಗಾರ್ಮೆಂಟ್ಸ್ ನೌಕರರ ಮತಗಳು ಪ್ರಮುಖ ಪಾತ್ರ ವಹಿಸಿದ್ದವು. ಈ ಹಿನ್ನೆಲೆಯಲ್ಲಿ ನಟ ದರ್ಶನ್ ಅವರ ಜೊತೆ ಸತೀಶ್ ರೆಡ್ಡಿ ಬೊಮ್ಮನಹಳ್ಳಿ ಗಾರ್ಮೆಂಟ್ಸ್ ಒಳಗೆ ಭರ್ಜರಿ ಪ್ರಚಾರ ನಡೆಸಿದ್ದಾರೆ. ಈ ಮೂಲಕ ಬೊಮ್ಮನಹಳ್ಳಿ ಚುನಾವಣಾ ಕಣದಲ್ಲಿ ದೊಡ್ಡ ತಿರುವು ಸಿಕ್ಕಿದೆ.
ಬೈಕ್ ರ‍್ಯಾಲಿ, ಭರ್ಜರಿ ರೋಡ್‌ಶೋ
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಸಾಕಷ್ಟು ವಿಶಾಲವಾಗಿದೆ. ಹೀಗಾಗಿ ಬಹುತೇಕ ಕಡೆ ರೋಡ್ ಶೋ ಮೂಲಕವೇ ನಟ ದರ್ಶನ್ ಶಾಸಕ ಸತೀಶ್ ರೆಡ್ಡಿ ಪರ ಪ್ರಚಾರ ನಡೆಸಿದರು. ಅರಕರೆ, ಬಿಳೆಕಹಳ್ಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ಬೈಕ್ ರ‍್ಯಾಲಿ ನಡೆಯಿತು. ಮತ್ತೊಂದ್ಕಡೆ ಬೊಮ್ಮನಹಳ್ಳಿಯ ಬಿಳೆಕಹಳ್ಳಿಯಿಂದ ಶುರುವಾದ ಬೈಕ್ ರ‍್ಯಾಲಿ ಪುಟ್ಟೇನಹಳ್ಳಿ ಸತ್ಯ ಗಣಪತಿಯ ದೇವಾಲಯದ ತನಕ ನಡೆಯಿತು. ನಂತರ ಸತ್ಯ ಗಣಪತಿ ದೇವಾಲಯ ಬಳಿ ಮೈದಾನದಲ್ಲಿ ಬೃಹತ್ ಬಹಿರಂಗ ಸಭೆ ನಡೆಸಿ ಕ್ಯಾಂಪೇನ್ ನಡೆಸಲಾಯಿತು.

ಬೊಮ್ಮನಹಳ್ಳಿಯಲ್ಲಿ ಬಿಜೆಪಿ ಹಿಡಿತ
2008ರಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಸ್ಥಾನಮಾನ ಪಡೆಯಿತು. ಅಂದಿನಿಂದ ಇಂದಿನ ತನಕ ಈ ಕ್ಷೇತ್ರದಲ್ಲಿ ಬಿಜೆಪಿ ಹಿಡಿತವಿದೆ. ಆದರೆ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಕೂಡ ಗೆಲುವಿಗಾಗಿ ಹೋರಾಟ ಆರಂಭಿಸಿದೆ. ಈ ನಡುವೆ ನಟ ದರ್ಶನ್ ಬಿಜೆಪಿ ಅಭ್ಯರ್ಥಿ ಶಾಸಕ ಸತೀಶ್ ರೆಡ್ಡಿ ಪರ ಪ್ರಚಾರ ಅಖಾಡಕ್ಕೆ ಎಂಟ್ರಿಯಾಗಿದ್ದಾರೆ. ಮತದಾನಕ್ಕೆ ಇನ್ನೇನು ಕೆಲವೇ ದಿನ ಬಾಕಿ ಇರುವಾಗಲೇ ಭರ್ಜರಿ ಕ್ಯಾಂಪೇನ್ ನಡೆಸಿದ್ದಾರೆ. ಇದು ಚುನಾವಣೆಯಲ್ಲಿ ದೊಡ್ಡ ತಿರುವ ನೀಡುವ ನಿರೀಕ್ಷೆಯಲ್ಲಿ ಬಿಜೆಪಿ ಇದೆ.
ಒಟ್ನಲ್ಲಿ ಬಿಜೆಪಿ ಮತ್ತೊಮ್ಮೆ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಲು ಸಜ್ಜಾಗಿದೆ. ಬೆಂಗಳೂರಿನ ಹೈವೋಲ್ಟೇಜ್ ಕ್ಷೇತ್ರಗಳ ಪೈಕಿ ಬೊಮ್ಮನಹಳ್ಳಿ ಕ್ಷೇತ್ರ ಕೂಡ ಒಂದಾಗಿದ್ದು, 2018ರ ಚುನಾವಣೆಯಲ್ಲಿ ಸತೀಶ್ ರೆಡ್ಡಿ ಬಿಜೆಪಿಯಿಂದ ಸತತ 3ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್ ಅಭ್ಯರ್ಥಿ ಸುಷ್ಮಾ ರಾಜಗೋಪಾಲ ರೆಡ್ಡಿ ವಿರುದ್ಧ 47,162 ಮತಗಳ ಅಂತರದಲ್ಲಿ ಗೆದ್ದರು. ಒಟ್ಟು 1,11,863 ಮತ ಪಡೆಯುವ ಮೂಲಕ ಸತೀಶ್ ರೆಡ್ಡಿ ಗೆದ್ದಿದ್ದರು. ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಅಂದೇ ಸೋಲು-ಗೆಲುವಿನ ಲೆಕ್ಕಾಚಾರಕ್ಕೆ ಉತ್ತರ ಸಿಗಲಿದೆ.












Click it and Unblock the Notifications