Actor Darshan Arrest: ನಟ ದರ್ಶನ್ ಅರೆಸ್ಟ್- ರೇಣುಕಾಸ್ವಾಮಿ ಯಾರು?
ಬೆಂಗಳೂರು ಜೂನ್ 11: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರನ್ನು ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಇಂದು ಬಂಧಿಸಿ ಬೆಂಗಳೂರಿಗೆ ಕರೆತರಲಾಗುತ್ತಿದೆ.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ವ್ಯಾಪ್ತಿಯ ಶೆಡ್‌ನಲ್ಲಿ ರೇಣುಕಾಸ್ವಾಮಿ ಎಂಬುವವರ ಕೊಲೆ ಮಾಡಲಾಗಿತ್ತು. ಜೂನ್ 8ರಂದು ಈ ಕೊಲೆ ನಡೆದಿದೆ. ಈ ಕೊಲೆಯನ್ನು ನಟ ದರ್ಶನ್ ಸೂಚನೆ ಮೇರೆಗೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಕೊಲೆ ಮಾಡಿದ ಆರೋಪಿಗಳು ರೇಣುಕಾಸ್ವಾಮಿ ಅವರನ್ನು ನಟ ದರ್ಶನ್ ಅವರ ಸೂಚನೆ ಮೇರೆಗೆ ಮಾಡಿದ್ದೇವೆ ಎಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ಹೀಗಾಗಿ ದರ್ಶನ್ ಅವರನ್ನು ಬಂಧಿಸಲಾಗಿದೆ.

ಸದ್ಯ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ದರ್ಶನ್ ಅವರನ್ನು ಕರೆತರಲಾಗುತ್ತಿದೆ. ಜೂನ್ 8ರಂದು ರೇಣುಕಾಸ್ವಾಮಿ ಅವರಿಗೆ ಬಲವಾಗಿ ಹೊಡೆದು ಕೊಲೆ ಮಾಡಲಾಗಿತ್ತು. ಅವರ ಮೃತದೇಹ ಮೋರಿಯಲ್ಲಿ ಪತ್ತೆಯಾಗಿತ್ತು. ರೇಣುಕಾಸ್ವಾಮಿ ಮೂಲತ: ಚಿತ್ರದುರ್ಗದವರು.
ಪವಿತ್ರ ಗೌಡ ಅವರ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದ ಎನ್ನುವ ಕಾರಣಕ್ಕೆ ರೇಣುಕಾಸ್ವಾಮಿ ಅವರನ್ನು ಕೊಲೆ ಮಾಡಲಾಗಿದೆ. ಪವಿತ್ರ ಗೌಡ ದರ್ಶನ್ ಗೆಳತಿ ಎನ್ನಲಾಗುತ್ತಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ವ್ಯಾಪ್ತಿಯ ಶೆಡ್‌ಗೆ ರೇಣುಕಾಸ್ವಾಮಿ ಅವರನ್ನು ಕರೆಸಿ ದರ್ಶನ್ ಕೂಡ ರೇಣುಕಾಸ್ವಾಮಿ ಮೇಲೆ ಮಾರನಾಂತಿಕ ಹಲ್ಲೆ ಮಾಡಿದ್ದರು ಎನ್ನಲಾಗುತ್ತಿದೆ. ಇದೇ ಪ್ರಕರಣದಲ್ಲಿ ಪವಿತ್ರಾ ಗೌಡ ಅವರನ್ನೂ ಬಂಧಿಸುವ ಸಾಧ್ಯತೆ ಇದೆ. ರೇಣುಕಾಸ್ವಾಮಿ ತಂದೆ- ತಾಯಿ ಕೂಡ ಆಗಮಿಸಿದ್ದಾರೆ. ಪೊಲೀಸ್ ಠಾಣೆಗೆ ರೇಣುಕಾಸ್ವಾಮಿ ಅವರ ಮೃತದೇಹ ಕೂಡ ತರಲಾಗಿದೆ.

ಆರಂಭದಲ್ಲಿ ರೇಣುಕಾಸ್ವಾಮಿ ಅವರದ್ದು ಆತ್ಮಹತ್ಯೆ ಎಂದು ಶಂಕಿಸಲಾಗಿತ್ತು. ಆದರೆ ವಿಚಾರಣೆ ಬಳಿಕ ಅದೊಂದು ಕೊಲೆ ಎಂದು ತಿಳಿದು ಬಂದಿದೆ.
ರೇಣುಕಾಸ್ವಾಮಿ ಯಾರು?
ರೇಣುಕಾಸ್ವಾಮಿ ಚಿತ್ರದುರ್ಗದ ಲಕ್ಷ್ಮಿ ವೆಂಕಟೇಶ್ವರ ನಗರದ ನಿವಾಸಿ. ತಂದೆ ಬೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದಾರೆ. ರೇಣುಕಾಸ್ವಾಮಿ ಅಪೋಲ್ ಮೆಡಿಕಲ್‌ನಲ್ಲಿ ಕೆಲಸ ಮಾಡ್ತಾಯಿದ್ದರು ಎಂದು ತಿಳಿದು ಬಂದಿದೆ. ಇವರಿಗೆ ಮದುವೆ ಕೂಡ ಆಗಿತ್ತು. ಅಲ್ಲದೆ ಹೆಂಡತಿ ಗರ್ಭಿಣಿ ಕೂಡ ಆಗಿದ್ದಳು.
ದುರ್ಗದಿಂದ ರೇಣುಕಾಸ್ವಾಮಿ ಮಿಸ್ಸಿಂಗ್ ಆಗಿದ್ದರು ಎನ್ನುವ ದೂರು ಕೂಡ ನೀಡಲಾಗಿತ್ತು. ಬೆಂಗಳೂರಿನಲ್ಲಿ ಪತ್ತೆಯಾದ ಶವವನ್ನು ಪರಿಶೀಲನೆ ಮಾಡಿದ ಬಳಿಕ ಅದು ರೇಣುಕಾಸ್ವಾಮಿ ಅವರದ್ದೇ ಎಂದು ತಿಳಿದು ಬಂದಿದೆ.
ರೇಣುಕಾಸ್ವಾಮಿ ಕೊಲೆಗೆ ಕಾರಣವೇನು?
ಪವಿತ್ರ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದ, ಕಾಮೆಂಟ್ ಮಾಡುತ್ತಿದ್ದ ಹಾಗೂ ವಿಡಿಯೋ ಫೋಟೋ ಕೂಡ ಕಳುಹಿಸುತ್ತಿದ್ದ ಎನ್ನುವ ಆರೋಪದ ಮೇಲೆ ದರ್ಶನ್ ಅವರು ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮಾರಣಾಂತಿಕ ಹಲ್ಲೆಯಿಂದ ಸ್ಥಳದಲ್ಲೇ ರೇಣುಕಾಸ್ವಾಮಿ ಮೃತಪಟ್ಟಿದ್ದರಿಂದ ಆತನ ದೇಹವನ್ನು ಅನುಗ್ರಹ ಅಪಾರ್ಟ್‌ಮೆಂಟ್ ಬಳಿಯ ಚರಂಡಿಯಲ್ಲಿ ಎಸೆಯಲಾಗಿತ್ತು. ಮೃತದೇಹ ಚರಂಡಿಯಲ್ಲಿ ಕಂಡ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮರಣೋತ್ತರ ಪರೀಕ್ಷೆ ಬಳಿಕ ಇದೊಂದು ಕೊಲೆ ಎನ್ನುವುದು ತಿಳಿದಿದೆ. ಕೊಲೆಯ ಜಾಡು ಹಿಡಿದ ಹೊರಟ ಪೊಲೀಸರಿಗೆ ಕೊಲೆಯ ಹಿಂದೆ ನಟ ದರ್ಶನ್ ಅವರ ಕೈವಾಡವಿದೆ ಎನ್ನುವುದು ಗೊತ್ತಾಗಿದೆ. ಇದರಿಂದ ದರ್ಶನ್ ಅವರನ್ನು ಮೈಸೂರಿನಲ್ಲಿ ಬಂಧಿಸಿ ವಿಚಾರಣೆಗಾಗಿ ಕರೆದುಕೊಂಡು ಬರಲಾಗುತ್ತಿದೆ.
ದರ್ಶನ ಮನೆ ಬಳಿ ಬಿಗಿ ಭದ್ರತೆ
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಅವರ ಮನೆಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಬ್ಯಾರಿಕೇಡ್‌ಗಳನ್ನು ಹಾಕಿ ಭದ್ರತೆ ಒದಗಿಸಲಾಗಿದೆ.
ನಟ ದರ್ಶನ್ ಬಳಿಕ ಪವಿತ್ರಾ ಗೌಡ ವಶಕ್ಕೆ
ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಪ್ರೇಯಸಿ ಪವಿತ್ರಾ ಗೌಡ ಅವರನ್ನೂ ವಶಕ್ಕೆ ಪಡೆಯಲಾಗಿದೆ. ಆರ್‌ಆರ್ ನಗರ ಪೊಲೀಸರು ಪವಿತ್ರಾ ಗೌಡ ಅವರನ್ನು ವಶಕ್ಕೆ ಪಡೆದಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಅವರನ್ನು ಸದ್ಯ ಕರೆತರಲಾಗುತ್ತಿದೆ.
ರೇಣುಕಾಸ್ವಾಮಿ ನಟ ದರ್ಶನ್ ಅವರ ಪ್ರೇಯಸಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಮಾಡುತ್ತಿದ್ದ ಎನ್ನಲಾಗುತ್ತಿದೆ. ಹೀಗಾಗಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಕೊಲೆಗೆ ದರ್ಶನ್ ಸೂಚನೆ ಕಾರಣ ಎಂದು ಬಂಧಿತ ಆರೋಪಿಗಳು ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ನಟ ದರ್ಶನ್ ಅವರನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ.












Click it and Unblock the Notifications