ದರ್ಶನ್‌ಗೆ ಇದೆಲ್ಲ ಬೇಕಿರಲಿಲ್ಲ, ಅಂಬರೀಶ್ ಇದ್ದಿದ್ದರೆ ಕಪಾಳಕ್ಕೆ ಹೊಡೆಯುತ್ತಿದ್ದರು: ಓಂ ಪ್ರಕಾಶ್ ರಾವ್
ಬೆಂಗಳೂರು, ಜೂನ್ 23: ಕೊಲೆ ಪ್ರಕರಣದಲ್ಲಿ ಅಂದರ್ ಆಗಿರುವ ನಟ ದರ್ಶನ್ (Actor Darshan Case) ಕುರಿತು ನಿರ್ಮಾಪಕರೂ ಆಗಿರುವ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಸಣ್ಣ ವಿಷಯಕ್ಕೆ ಹೀಗೆಲ್ಲ ಮಾಡಿಕೊಂಡರು. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು ಎಂದಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಸ್ಯಾಂಡಲ್‌ವುಡ್‌ನಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇಷ್ಟು ಸಣ್ಣ ವಿಷಯಕ್ಕೆ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಅವರಿಗೆ ಇದೆಲ್ಲ ಬೇಕಿರಲಿಲ್ಲ ಎಂದು ಹೇಳಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಮೇಲೆ ನಡೆದ ಹಿಂಸಾ ಪ್ರಯೋಗ ತುಂಬಾ ತಪ್ಪು ಎಂದು ಅವರು ಖಂಡಿಸಿದರು. ಇದನ್ನು ಯಾರೇ ಮಾಡಿರಲಿ, ಅವರಿಗೆಲ್ಲ ಕಾನೂನಿನಡಿ ಶಿಕ್ಷೆ ಆಗಬೇಕು. ನಮ್ಮ ಕರ್ನಾಟಕ ಪೊಲೀಸರು ವಿಚಾರಣೆ ಮಾಡಿರುವ ರೀತಿ, ತನಿಖೆ ನಡೆದಿರುವ ಹಾದಿ ಶ್ಲಾಘನೀಯ ಎಂದು ಅವರು ತಿಳಿಸಿದರು.
ಚಿತ್ರರಂದ ಸ್ಟಾರ್ ನಟನೊಬ್ಬ ಇಂತಹ ವಿಷಯದಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿರುವುದಕ್ಕೆ ನನಗೆ ತುಂಬಾ ಬೇಜಾರಾಗಿದೆ. ನಾನೀಗ ದರ್ಶನ್ ಅವರನ್ನು ಭೇಟಿ ಮಾಡಿಯೇ ತುಂಬ ವರ್ಷಗಳಾಗಿವೆ. ವರ್ಷದ ಹಿಂದೆ ಚಿತ್ರವೊಂದಕ್ಕಾಗಿ ನಾನು ಅವರಿಗೆ ಕರೆ ಮಾಡಿದ್ದೆ. ಆದರೆ ಅವರ ಡೇಟ್ ಸಿಗಲಿಲ್ಲ. ನಾನು ವೈಯಕ್ತಿಕ ಕಾರಣಗಳಿಂದ ಅವರೊಂದಿಗೆ ಹತ್ತು ವರ್ಷಗಳಿಂದ ಮಾತನಾಡುತ್ತಿರಲಿಲ್ಲ ಎಂದು ಹಳೆಯದನ್ನೆಲ್ಲ ನೆನಪಿಸಿಕೊಂಡರು.

ರೇಣುಕಾಸ್ವಾಮಿಯದ್ದು ಘನಗೋರ ಅಪರಾಧವೇನಲ್ಲ
ಸದ್ಯ ನಾನು ಮಾಡುತ್ತಿರುವ 'ಫಿನಿಕ್ಸ್' ಸಿನಿಮಾ ಅವರಿಗಾಗಿಯೇ. ವರ್ಷದ ಹಿಂದೆ ಕರೆ ಮಾಡಿ ಸಿನಿಮಾ ಮಾಡೋಣ ಎಂದು ಕೇಳಿದ್ದೆ. ಈ ಹಿಂದೆ ನಾನು ಅವರಿಗೆ ನಿರ್ದೇಶಿಸಿದ್ದೆ. ಅಂದಿನ ಸಿನಿಮಾ, ಶೂಟಿಂಗ್ ವೇಳೆ ದರ್ಶನ್ ಯಾವತ್ತೂ ಗಲಾಟೆ ಮಾಡಿಕೊಂಡಿರಲಿಲ್ಲ ಎಂದು ಅವರು ಹೇಳಿದರು.
ಇನ್ನೂ ರೇಣುಕಾಸ್ವಾಮಿ ಮಾಡಿರುವುದು ಘನಗೋರ ಅಪರಾಧ ಅಲ್ಲ. ಪೊಲೀಸರಿಗೆ ತಿಳಿಸಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದರು. ಆದರೆ ಯಾರೇ ಆಗಲಿ ಒಬ್ಬ ವ್ಯಕ್ತಿಗೆ ಈ ರೀತಿ ಹಿಂಸೆ ಕೊಡಬಾರದು ಎಂದರು.
ನಿರ್ದೇಶಕ ಓಂ ಪ್ರಕಾಶ್ ರಾವ್, ಪ್ರಿನ್ಸ್, ಕಲಾಸಿಪಾಳ್ಯ, ಅಯ್ಯ, ಮಂಡ್ಯ, ಯೋಧ ಸಿನಿಮಾ ನಿರ್ದೇಶಿಸಿದ್ದಾರೆ. ಅಲ್ಲದೇ ಅಭಯ್ ಸಿನಿಮಾದಲ್ಲಿ ದರ್ಶನ್ ಜೊತೆಗೆ ಓಂಪ್ರಕಾಶ್ ರಾವ್ ನಟಿಸಿದ್ದಾರೆ.
ದರ್ಶನ್‌ಗೆ ಕಪಾಳಕ್ಕೆ ಹೊಡೆಯುತ್ತಿದ್ದರು
ನಟ ದಿ.ಅಂಬರೀಶ್ ಅವರಿಗೆ ನಟ ದರ್ಶನ್ ತುಂಬಾ ಗೌರವ ಕೊಡುತ್ತಿದ್ದರು. ಅವರ ಈ ವೇಳೆ ಇದ್ದಿದ್ದರೆ ದರ್ಶನ್ ಕರೆದು ಕಪಾಳಕ್ಕೆ ಹೊಡೆಯುತ್ತಿದ್ದರು. ಇದು ತಪ್ಪು, ಹೀಗೆ ಮಾಡುವುದು ಸರಿಯಲ್ಲ ಎಂದು ಬುದ್ಧಿ ಹೇಳುತ್ತಿದ್ದರು. ಸುಮಲತಾ ಅವರು ಸಹ ದರ್ಶನ್ ಪ್ರಕರಣದಿಂದ ನೊಂದಿರುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.












Click it and Unblock the Notifications