224 ಕ್ಷೇತ್ರದ ಜನರ ಮಾಹಿತಿ ಸಂಗ್ರಹ: ಎಎಪಿಯಿಂದ 'ಜನರಿಂದ ಜನರಿಗಾಗಿ' ಪ್ರಣಾಳಿಕೆ ತಯಾರಿಕೆ ಸಿದ್ಧತೆ
ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಜನರ ಸಮಸ್ಯೆಗಳ ಕುರಿತು ಸಂಗ್ರಹಿಸಿ, ಅವರುಗಳಿಗೆ ಪರಿಹಾರ ಒಳಗೊಂಡಂತಹ ಪ್ರಣಾಳಿಕೆ ತಯಾರಿಸಲು ಆಮ್ ಆದ್ಮಿ ಪಾರ್ಟಿ ಯೋಜನೆ ರೂಪಿಸಿದೆ.
ಬೆಂಗಳೂರು, ಮಾರ್ಚ್ 14: ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಜನರ ಸಮಸ್ಯೆಗಳ ಕುರಿತು ಸಂಗ್ರಹಿಸಿ, ಅವರುಗಳಿಗೆ ಪರಿಹಾರ ಒಳಗೊಂಡಂತಹ ಪ್ರಣಾಳಿಕೆ ತಯಾರಿಸಲಾಗುತ್ತದೆ. 'ಜನರಿಂದ ಜನರಿಗಾಗಿ' ಪ್ರಣಾಳಿಕೆ ಸಿದ್ಧಪಡಿಸಲು ಆಮ್ ಆದ್ಮಿ ಪಾರ್ಟಿ ತಿಳಿಸಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಜನರ ಅಭಿಪ್ರಾಯವನ್ನು ಸಂಗ್ರಹಿಸಿ, ಅವರಿಗೆ ಯಾವುದರ ಅಗತ್ಯವಿದೆ ಎಂಬ ಮಾಹಿತಿ ಆಧರಿಸಿ ಪ್ರಣಾಳಿಕೆ ಸಿದ್ಧಪಡಿಸುತ್ತಿದ್ದೇವೆ. ಇದೊಂದು ಅಭಿಯಾನ ರೀತಿ ನಡೆಯಲಿದೆ. ಹಲವು ಪಕ್ಷಗಳು ಕಾಟಾಚಾರಕ್ಕೆ ಎಂಬಂತೆ ಒಂದು ಸಂವಾದ ನಡೆಸಿ ಮಾಹಿತಿ ಸಂಗ್ರಹಿಸಿದ್ದೇವೆಂದು ಬಿಂಬಿಸಿಕೊಳ್ಳುತ್ತವೆ. ನಿಜವಾಗಿಯೂ ಚರ್ಚೆ ನಡೆಸಬೇಕಿರುವುದು ಜನಸಾಮಾನ್ಯರ ಜೊತೆ ಹಾಗೂ ಹಳ್ಳಿಕಟ್ಟೆಗಳಲ್ಲಿ ಎಂದು ಪ್ರಮುಖ ಪಕ್ಷಗಳ ವಿರುದ್ದ ಹರಿಹಾಯ್ದರು.

ಪ್ರಣಾಳಿಕೆ ತಯಾರಿಕೆಗಾಗಿ ಎಎಪಿ ಯೋಜನೆ ರೂಪಿಸಿದೆ. ಎಲ್ಲ ವರ್ಗಗಳ ಜನರೂ ಇದರಲ್ಲಿ ಭಾಗವಹಿಸಬೇಕೆಂಬ ಅಪೇಕ್ಷೆಯಿದೆ. ಬೇರೆಲ್ಲ ರಾಜ್ಯಗಳಲ್ಲಿ ಚುನಾವಣೆ ನಡೆದಾಗಲೂ ಪಕ್ಷವು ಗ್ಯಾರೆಂಟಿ ಕಾರ್ಡ್ ರೂಪದಲ್ಲಿ ಮತದಾರರಿಗೆ ಆಶ್ವಾಸನೆ ಕೊಟ್ಟಿದೆ. ಎಎಪಿ ಗೆದ್ದ ಕಡೆಗಳಲ್ಲಿ ನಮ್ಮ ಸಾಧನೆಗಳ ಬಗ್ಗೆ ಮತದಾರರಿಗೆ ರಿಪೋರ್ಟ್ ಕಾರ್ಡ್ ನೀಡಲಾಗಿದೆ. ಅದನ್ನು ನೀವು ಹೋಲಿಕೆ ಮಾಡಿ ನೋಡಬಹುದಾಗಿದೆ ಎಂದರು.
'ಮಾರ್ಚ್ 4ರಂದು ದಾವಣಗೆರೆಯಲ್ಲಿ, ಪಕ್ಷದ ರಾಷ್ಟ್ರೀಯ ಸಂಚಾಲಕರಾದ ಶ್ರೀ ಅರವಿಂದ್ ಕೇಜ್ರಿವಾಲ್‌ರವರು ಕರ್ನಾಟಕದ ಜನತೆಗೆ ಗ್ಯಾರೆಂಟಿಗಳ ಮೊದಲ ಪಟ್ಟಿಯನ್ನು ಘೋಷಿಸಿದರು. ಅದರಲ್ಲಿ ಶೂನ್ಯ ಭ್ರಷ್ಟಾಚಾರ, 300 ಯೂನಿಟ್ ಉಚಿತ ವಿದ್ಯುತ್, ಯುವಜನತೆಗೆ ಖಚಿತ ಉದ್ಯೋಗ ಹಾಗೂ ಉದ್ಯೋಗ ಸಿಗುವ ತನಕ ತಿಂಗಳಿಗೆ 3000 ರೂಪಾಯಿ ಉದ್ಯೋಗ ಭತ್ಯೆ, ರೈತರ ಸಾಲ ಮನ್ನಾ, ಕನಿಷ್ಠ ಬೆಂಬಲ ಬೆಲೆ, ಉಚಿತ ಗುಣಮಟ್ಟದ ಶಿಕ್ಷಣ, ಉಚಿತ ಗುಣಮಟ್ಟದ ಆರೋಗ್ಯ ಸೇವೆ, ಗುತ್ತಿಗೆ ನೌಕರರಿಗೆ ಖಾಯಂ ಉದ್ಯೋಗ ಎಂಬ ಗ್ಯಾರೆಂಟಿಗಳನ್ನು ಘೋಷಿಸಿದ್ದಾರೆ. ಇದಕ್ಕೆ ಇನ್ನಷ್ಟು ಗ್ಯಾರೆಂಟಿಗಳನ್ನು ಸೇರಿಸಲು ರಾಜ್ಯಾದ್ಯಂತ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಪೃಥ್ವಿ ರೆಡ್ಡಿ ಹೇಳಿದರು.

ಮಾರ್ಚ್ 18 ಮತ್ತು 19 ಶನಿವಾರ ಹಾಗೂ ಭಾನುವಾರದಂದು ಪಕ್ಷದ ಕಾರ್ಯಾಧ್ಯಕ್ಷ, ಉಪ ಕಾರ್ಯಾಧ್ಯಕ್ಷರು, ಸ್ಪರ್ಧಾಕಾಂಕ್ಷಿಗಳು ಹಾಗೂ ಕಾರ್ಯಕರ್ತರು ಅವರವರ ಕ್ಷೇತ್ರಗಳಲ್ಲಿ ಪ್ರಣಾಳಿಕೆಗೆ ಮಾಹಿತಿ ಸಂಗ್ರಹಿಸಲಿದ್ದಾರೆ. ಇದಕ್ಕಾಗಿ ಹಿಂದಿನ ಅಭಿಯಾನದಲ್ಲಿ ದೊರೆತ ಮಾಹಿತಿಯನ್ನು ಆಧರಿಸಿ 15 ಪ್ರಮುಖ ವಿಷಯಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಸಂಗ್ರಹಿಸಿದ ಮಾಹಿತಿ ಆಧಾರದಲ್ಲಿ ಪ್ರಣಾಳಿಕೆ ಸಿದ್ಧಪಡಿಸಲಿದ್ದಾರೆ.
ಡಿಜಿಟಲ್ ಮೂಲಕ ನೀವು ಪಾಲ್ಗೊಳ್ಳಿ
ಮಾಹಿತಿ ಸಂಗ್ರಹಕ್ಕಾಗಿ ಸರಳ ಡಿಜಿಟಲ್ (http://bit.ly/JanaraPranalike) ಪ್ರಕ್ರಿಯೆಯನ್ನು ಸಿದ್ದಪಡಿಸಿದ್ದೇವೆ. ಈ ಲಿಂಕ್ ಕ್ಲಿಕ್ ಮಾಡಿ ನೀವು ಸಹ ಪ್ರಣಾಳಿಕೆಗೆ ಮಾಹಿತಿ ನೀಡಬಹುದಾಗಿದೆ. ಇಲ್ಲವೇ ವಾಟ್ಸಪ್ ಸಂಖ್ಯೆ 9353116032 ಗೆ "ಜನರ ಪ್ರಣಾಳಿಕೆ" ಎಂದು ವಾಟ್ಸಪ್ ಮೆಸೇಜ್ ಕಳುಹಿಸಿ ತಾವು ಭಾಗವಹಿಸಬಹುದು ಎಂದು ಅವರು ವಿವರಿಸಿದರು.
ಎಎಪಿ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್ ಕಾಳಪ್ಪ ಮಾತನಾಡಿ, ಚುನಾವಣೆ ಹೊಸ್ತಿಲಲ್ಲಿ ಎಲ್ಲ ಪಕ್ಷಗಳು ಪ್ರಣಾಳಿಕೆ ಘೋಷಿಸುತ್ತವೆ. ಆದರೂ 65 ವರ್ಷಗಳ ಬಳಿಕವೂ ಭಾರತೀಯರು ಮಕ್ಕಳಿಗೆ ಶಿಕ್ಷಣ ಹಾಗೂ ಕುಟುಂಬಕ್ಕೆ ಆರೋಗ್ಯ ಸೇವೆಯನ್ನೇ ಬಯಸುತ್ತಿದ್ದಾರೆ ಎಂಬುದನ್ನು ಅವು ಅರ್ಥ ಮಾಡಿಕೊಂಡಿಲ್ಲ. ಯಾರೂ ಸಾರ್ವಜನಿಕರ ಅಭಿಪ್ರಾಯವನ್ನು ಕೇಳಿಲ್ಲ. ಎಎಪಿಯು ಅವೆಲ್ಲವನ್ನೂ ಬದಲಾಯಿಸಿದೆ. ಇಂದು, ಭಾರತದ ಪ್ರತಿ ಚುನಾವಣೆಯಲ್ಲೂ ಶಿಕ್ಷಣ ಹಾಗೂ ಆರೋಗ್ಯವು ಪ್ರಮುಖ ವಿಷಯಗಳಾಗಿವೆ. ನಾವು ಜನರಿಗೆ ಏನು ಬೇಕು ಎಂದು ಕೇಳಿದ್ದರಿಂದಾಗಿ ನಮಗೆ ಇವುಗಳ ಮಹತ್ವ ಅರ್ಥವಾಯಿತು ಎಂದು ತಿಳಿಸಿದರು.












Click it and Unblock the Notifications