ಬೆಂಗಳೂರ ಎಎಪಿಯ ಹೊಸ ರಾಜ್ಯ ಕಚೇರಿ ಆರಂಭ
ಬೆಂಗಳೂರು ಜೂ. 16: ಬೆಂಗಳೂರಿನ ಕುಮಾರ ಪಾರ್ಕ್ ಪಶ್ಚಿಮದಲ್ಲಿ ಆಮ್ ಆದ್ಮಿ ಪಕ್ಷದ ನೂತನ ರಾಜ್ಯ ಪ್ರಧಾನ ಕಚೇರಿ ಉದ್ಘಾಟನೆಗೊಂಡಿದೆ. ಪಕ್ಷದ ರಾಜ್ಯ ಉಸ್ತುವಾರಿ ಹಾಗೂ ರಾಷ್ಟ್ರೀಯ ವಕ್ತಾರ ದಿಲೀಪ್ ಪಾಂಡೆ ಮತ್ತು ಪಕ್ಷದ ಮುಖಂಡ ಮುಖ್ಯಮಂತ್ರಿ ಚಂದ್ರು ಕಚೇರಿ ಗುರುವಾರ ಉದ್ಘಾಟಿಸಿದರು.
ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಿಲೀಪ್ ಪಾಂಡೆ, "ಕರ್ನಾಟಕದಲ್ಲಿ ಆಮ್ ಆದ್ಮಿ ಪಾರ್ಟಿಗೆ ಉತ್ತಮ ಜನ ಬೆಂಬಲ ವ್ಯಕ್ತವಾಗುತ್ತಿದೆ. ಇದನ್ನು ನೋಡಿ ಹರ್ಷವೆನಿಸುತ್ತಿದೆ. ದೆಹಲಿ, ಪಂಜಾಬ್ ಮಾದರಿಯಲ್ಲಿ ರಾಜ್ಯದಲ್ಲಿ ಕೂಡ ಭರ್ಜರಿ ಬಹುಮತದೊಂದಿಗೆ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಮೂಲಕ ಎಎಪಿ ಪಕ್ಷದ ವಿಜಯಯಾತ್ರೆ ಆರಂಭವಾಗಲಿದೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಎಎಪಿ ಕರ್ನಾಟಕ ಅಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, "ರಾಜ್ಯದಲ್ಲಿ ಎಎಪಿ ಸೇರ್ಪಡೆಯು ಜನಾಂದೋಲನವಾದಂತೆ ಕಾಣುತ್ತದೆ. ಈ ಆಂದೋಲನೆಕ್ಕೆ ಈ ನೂತನ ಕಚೇರಿ ಸಹಕಾರಿಯಾಗಲಿದೆ. ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷ ಬೆಂಬಲಿಸುವ ಮೂಲಕ ರಾಜ್ಯದಲ್ಲಿ ಪರ್ಯಾಯ ರಾಜಕೀಯಕ್ಕೆ ನಾಂದಿ ಹಾಡಬೇಕು" ಎಂದು ಕರೆ ನೀಡಿದರು.
"ಭ್ರಷ್ಟ ಹಾಗೂ ನಿಷ್ಕ್ರಿಯ ಪಕ್ಷಗಳನ್ನು ಬದಿಗೊತ್ತಿ, ಸ್ವಚ್ಛ ಹಾಗೂ ಜನಪರ ಆಡಳಿತ ನೀಡುವ ಎಎಪಿಯನ್ನು ಅಧಿಕಾರಕ್ಕೆ ತರಲು ಜನರು ಕೈಜೋಡಿಸಬೇಕು" ಎಂದು ಮನವಿ ಮಾಡಿದರು.

ಆಮ್ ಆದ್ಮಿ ಪಾರ್ಟಿಯ ಮುಖಂಡರಾದ ಭಾಸ್ಕರ್ ರಾವ್, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಪಕ್ಷದ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.












Click it and Unblock the Notifications