Bengaluru-Mysuru Expressway: 158 ಸಾವು, ಶುಕ್ರವಾರ 'ಸಾವಿನ ರಹದಾರಿ ಅಭಿಯಾನ'
ಬೆಂಗಳೂರು, ಜೂನ್ 29: ರಾಜ್ಯದ ಎರಡು ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಕೆಲವೇ ದಿನಗಳಲ್ಲಿ ಅತ್ಯಧಿಕ ಅಪಘಾತ, ಸಾವು ನೋವು ಸಂಬವಸಿವೆ. ಇತ್ತ ಕೇಂದ್ರ ಸರ್ಕಾರ ಎರಡು ಟೋಲ್ ಮೂಲಕ ಭಾರೀ ಶುಲ್ಕ ಸಂಗ್ರಹಿಸಲು ಮುಂದಾಗಿದೆ. ಇದೆಲ್ಲರ ವಿರುದ್ಧ ಜೂನ್ 30 ರಂದು ಶುಕ್ರವಾರ 'ಸಾವಿನ ರಹದಾರಿ ಅಭಿಯಾನ' ಹಮ್ಮಿಕೊಳ್ಳಲಾಗಿದೆ.
ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರು ಮಧ್ಯೆ ಎಕ್ಸ್‌ಪ್ರೆಸ್ ವೇ ನಿರ್ಮಿಸಲಾಗಿದೆ. ಈ ಎಕ್ಸ್ ಪ್ರೆಸ್ ವೇ ಹೆದ್ದಾರಿಯಲ್ಲಿ ಕಳೆದ 9 ತಿಂಗಳುಗಳಿಂದ 158 ಜನರ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಈ ಸಂಬಂಧ ಆಕ್ರೋಶ ಗೊಂಡಿರುವ ಆಮ್ ಆದ್ಮಿ ಪಕ್ಷವು (AAP) ನಾಳೆ ಶುಕ್ರವಾರ 'ಸಾವಿನ ರಹದಾರಿ ಅಭಿಯಾನ' ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಸಜ್ಜಾಗಿದೆ.

ಅತ್ಯಂತ ಕಡಿಮೆ ಅವಧಿಯಲ್ಲಿ ಇಷ್ಟೊಂದು ಅಪಘಾತಗಳು, ಸಾವುಗಳು ವರದಿಯಾಗಿರುವುದು ಅತ್ಯಂತ ಗಂಭೀರವಾಗಿದೆ. ತರಾತುರಿಯಲ್ಲಿ ಸರ್ಕಾರಗಳ ಅವೈಜ್ಞಾನಿಕ ಹಾಗೂ ಭ್ರಷ್ಟಾಚಾರ ಮಿಶ್ರಿತ ಯೋಜನೆಗಳಿಂದಾಗಿ ಅಮಾಯಕ ಜನತೆಯ ಬಲಿಯಾಗುತ್ತಿರುವುದು ದುರಂತದ ವಿಚಾರ ಎಂದು ಸರ್ಕಾರದ ವಿರುದ್ಧ ಎಎಪಿ ಕಿಡಿ ಕಾರಿದೆ.
ಸರ್ಕಾರಗಳ ತಪ್ಪು ನಡೆಯಿಂದಾಗಿ ಅಮಾಯಕ ಜೀವಗಳ ಬಲಿಯಾಗುತ್ತಿರುವ ಪರಿಯನ್ನು ಖಂಡಿಸಿ ಆಮ್ ಆದ್ಮಿ ಪಕ್ಷದ ಕಾರ್ಯಾಧ್ಯಕ್ಷ ಮೋಹನ್ ದಾಸರಿ ರವರ ನೇತೃತ್ವದಲ್ಲಿ ಅಭಿಯಾನ ಕೈಗೆತ್ತಿಕೊಂಡಿದೆ. ಈ ಮೂಲಕ ಅಮಾಯಕ ಪ್ರಯಾಣಿಕರ ಜೀವಗಳನ್ನು ಉಳಿಸಲು ಅರಿವು ಮೂಡಿಸಲಾಗುತ್ತಿದೆ ಎಂದು ಪಕ್ಷ ತಿಳಿಸಿದೆ.
ಬೆಳಗ್ಗೆ 11 ಗಂಟೆಗೆ ಬೆಂಗಳೂರು-ಮೈಸೂರು ರಸ್ತೆಯ ಬಿಡದಿ ಹತ್ತಿರ ಕುಣಮಿಣಿಕೆ ಟೋಲ್ ಬಳಿ ಅಭಿಯಾನ ಆರಂಭಗೊಳ್ಳಲಿದೆ. ಎಎಪಿ ನೂರಾರು ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಜುಲೈ 1ರಿಂದ ಜನರಿಗೆ ಟೋಲ್ ಹೊರೆ
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಈಗಾಗಲೇ ಒಂದು ಟೋಲ್ ವಾಹನಗಳಿಂದ ಟೋಲ್ ಸಂಗ್ರಹಿಸುತ್ತಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಸಮೀಪದಲ್ಲಿ ಎರಡನೇ ಟೋಲ್ ಈಗಾಗಲೇ ಸ್ಥಾಪನೆಯಾಗಿದೆ. ಅಲ್ಲಿ ಟೋಲ್ ಕೇಂದ್ರ ಆರಂಭಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಜುಲೈ ಒಂದರಿಂದ ಇದು ಜಾರಿಗೆ ಬರಲಿದೆ.
ಬೆಂಗಳೂರಿನಿಂದ ಮೈಸೂರು ಸುಮಾರು 135 ಕಿಲೋ ಮೀಟರ್ ಇದೆ. ಇದರಲ್ಲಿ ನೂತನ ಎಕ್ಸ್‌ಪ್ರೆಸ್ ವೇ ಸುಮಾರು 113 ಕೀಲೋ ಮೀಟರ್ ಉದ್ದ ಎನ್ನಲಾಗುತ್ತಿದೆ. ಹಾಲಿ ಟೋಲ್ ಬೆಂಗಳೂರಿನಿಂದ ನಿಡಘಟ್ಟದ ವ್ಯಾಪ್ತಿಯವರೆಗೆ ಟೋಲ್ ಸಂಗ್ರಹಿಸುತ್ತಿತ್ತು. ಮತ್ತೊಂದು ಟೋಲ್ ಕೇಂದ್ರ ಆರಂಭವಾಗಲಿದ್ದು, ಮಂಡ್ಯ ಜಿಲ್ಲೆಯ 55-134 ಕಿಮೀ ವ್ಯಾಪ್ತಿಗೆ ಟೋಲ್ ಸಂಗ್ರಹ ಮಾಡಲಿದ್ದಾರೆ. ಪ್ರಯಾಣದ ಸಮಯ ಕಡಿಮೆ ಮಾಡುವ ಮೈಸೂರು-ಬೆಂಗಳೂರು ಪ್ರಯಾಣ ಮತ್ತಷ್ಟು ದುಬಾರಿಯಾಗಲಿದೆ.












Click it and Unblock the Notifications