ಬೆಂಗಳೂರು 'ಅಂಚೆ' ಕಚೇರಿಗಳನ್ನು ಮುಚ್ಚಿಸಿದ ಬಿಬಿಎಂಪಿ ಕ್ರಮಕ್ಕೆ ತೀವ್ರ ವಿರೋಧ
ಬೆಂಗಳೂರು, ಆಗಸ್ಟ್ 28: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿನ ಸೇಂಟ್ ಜಾನ್ಸ್ ರಸ್ತೆ ಹಾಗೂ ವಸಂತನಗರದ ಅಂಚೆ ಕಚೇರಿಗಳಿಗೆ ಬಿಬಿಎಂಪಿ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದಾರೆ. ಕೂಡಲೇ ಅದನ್ನು ತೆರವು ಮಾಡಿ ಅಂಚೆ ಕಚೇರಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂಬ ಆಗ್ರಹ ಹೆಚ್ಚಾಗಿದೆ. ಅಲ್ಲದೇ ಬಿಬಿಎಂಪಿಯ ಇಂತಹ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ಸಹ ವ್ಯಕ್ತವಾಗುತ್ತಿದೆ.
ಈ ಕುರಿತು ಸುದ್ದಿಗಾರರ ಜೊತೆಗೆ ಮಾತನಾಡಿದ, ಆಮ್ ಆದ್ಮಿ ಪಾರ್ಟಿ ಬೆಂಗಳೂರು ನಗರಾಧ್ಯಕ್ಷ ಡಾ. ಸತೀಶ್ ಕುಮಾರ್ ಬಿಬಿಎಂಪಿ ಕಟ್ಟಡದಲ್ಲಿರುವ ಅಂಚೆ ಕಚೇರಿಗಳು ಬಾಡಿಗೆ ಕಟ್ಟುತ್ತಿಲ್ಲ ಎನ್ನುವ ಕಾರಣ ನೀಡಿ ಅಧಿಕಾರಿಗಳು ಬಾಗಿಲು ಹಾಕಿಸುತ್ತಿರುವ ಕ್ರಮ ಖಂಡನೀಯ. ಭಾರತೀಯ ಅಂಚೆ ಇಲಾಖೆ ಪ್ರಪಂಚದಲ್ಲೇ ಅತಿ ದೊಡ್ಡ ಸರ್ಕಾರಿ ಅಂಚೆ ಇಲಾಖೆ ಎನ್ನುವ ಹೆಗ್ಗಳಿಕೆ ಪಡೆದಿದೆ.

ಇದು ಭಾರತದ ಪರಂಪರೆ ಹಾಗೂ ಇತಿಹಾಸದ ಭಾಗವಾಗಿದೆ. ಕಡಿಮೆ ವೆಚ್ಚದಲ್ಲಿ ಸಾರ್ವಜನಿಕರಿಗೆ ಅಂಚೆ ಸೇವೆ ಒದಗಿಸುತ್ತಿದೆ. ಇಂತಹ ಸೇವಾ ವಲಯದ ಕಚೇರಿಯನ್ನು ಬಾಡಿಗೆ ಕಟ್ಟಿಲ್ಲ ಎಂಬ ಕಾರಣಕ್ಕೆ ಬಿಬಿಎಂಪಿ ಅಧಿಕಾರಿಗಳು ಮುಚ್ಚಿಸಿರುವುದು ವಿಷಾದನೀಯ ಎಂದರು.
ಸ್ವತಂತ್ರ ಕಾರ್ಯನಿರ್ವಹಣೆಗೆ ಅನುವು ಮಾಡಿಕೊಡಿ
ಅಂಚೆ ಕಚೇರಿಗಳ ಕಟ್ಟಡಗಳ ಮೇಲೆ ತೆರಿಗೆ ಹಾಕದೆ, ಶುಲ್ಕ ವಸೂಲಿ ಮಾಡದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು. ಯಾರೋ ಉದ್ಯಮಿಗಳಿಗೆ, ಪ್ರಭಾವಿಗಳಿಗೆ, ರಾಜಕಾರಣಿಗಳಿಗೆ ಬೇಕಾದಷ್ಟು ಭೂಮಿ, ಕಟ್ಟಡಗಳನ್ನು ಧಾರೆಯೆರೆದು ಕೊಡುತ್ತಿರುವಾಗ ಜನಸಮಾನ್ಯರಿಗೆ ನೆರವಾಗುವ ಅಂಚೆಕಚೇರಿಗಳಿಂದ ಬಾಡಿಗೆ ತೆಗೆದುಕೊಳ್ಳದಿದ್ದರೆ ಸರ್ಕಾರಕ್ಕೆ ಅಂತಹ ದೊಡ್ಡ ನಷ್ಟವೇನೂ ಸಂಭವಿಸುವುದಿಲ್ಲ ಎಂದು ಹೇಳಿದರು.

ಕೇಂದ್ರದ ಬಿಜೆಪಿ ಸರ್ಕಾರವು ಜನಸ್ನೇಹಿ ಅಂಚೆ ಇಲಾಖೆಗಳನ್ನು ಈ ರೀತಿಯ ಅನಾಥ ಹಾಗೂ ಮತದೃಷ್ಟ ಪರಿಸ್ಥಿತಿಗೆ ತಳ್ಳಿ ತನ್ನ ಜವಾಬ್ದಾರಿಯನ್ನು ಮರೆತಿರುವ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಬಿಬಿಎಂಪಿ ಮುಚ್ಚಿಸಿರುವ ಅಂಚೆ ಕಚೇರಿಗಳ ಬಾಗಿಲನ್ನು ತಕ್ಷಣ ತೆರೆಯಲು ಅವಕಾಶ ಮಾಡಿಕೊಡಬೇಕು ಎಂದು ಡಾ.ಸತೀಶ್ ಆಗ್ರಹಿಸಿದರು.
ಲಕ್ಷಾಂತರ ರೂಪಾಯಿ ಕಟ್ಟಡದ ಬಾಡಿಗೆ ಪಾವತಿಸಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ವಿವಿಧ ಅಂಚೆ ಕಚೇರಿಗಳ ವಿರುದ್ಧ ಕ್ರಮ ಕೈಗೊಂಡಿದೆ. ನಿಯಮದಂತೆ ನೋಟಿಸ್ ನೀಡಿ ಬಾಡಿಗೆ ಬಾಕಿ ಉಳಿಸಿಕೊಂಡ ಸೇಂಟ್ ಜಾನ್ಸ್ ರಸ್ತೆಯಲ್ಲಿ ಮಳಿಗೆ ಸಂಖ್ಯೆ ಹಾಗೂ ವಸಂತ ನಗರ ವ್ಯಾಫ್ತಿಯ ಕಚೇರಿ ಸೀಜ್ ಮಾಡಿ ಬಾಗಿಲು ಮುಚ್ಚಿಸಿದೆ.
ಸರ್ಕಾರಿ ಕಟ್ಟಡಗಳ ಮಧ್ಯೆಯೇ ಬೇಧ ಭಾವ
ಬಿಬಿಎಂಪಿಯ ಈ ಕ್ರಮಕ್ಕೆ ಎಎಪಿ ಸೇರಿದಂತೆ ಕೆಲವೊಂದಿಷ್ಟು ಕಡೆಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಬಿಬಿಎಂಪಿಯೇ ಜಲಮಂಡಳಿ ನೀರಿನ ಸೇವಾ ಶುಲ್ಕ ಬಾಕಿ ಉಳಿಸಿಕೊಂಡಿದೆ. ಬಿಬಿಎಂಪಿಯ ಆಸ್ತಿ ತೆರಿಗೆ ಪೈಕಿ ಕೋಟ್ಯಾಂತರ ರೂಪಾಯಿ ಸೇವಾ ಶುಲ್ಕವನ್ನು ಬಿಬಿಎಂಫಿಗೆ ಕಟ್ಟದೇ ವಿಧಾನಸೌಧ ಹಾಗೂ ವಿಕಾಸಸೌಧಗಳು ಬಾಕಿ ಉಳಿಸಿಕೊಂಡಿವೆ. ಅದೇ ರೀತಿ ಅಂಚೆ ಕಚೇರಿಗಳ ಬಾಡಿಗೆ ಉಳಿದಿದೆ. ಎಲ್ಲವು ಸರ್ಕಾರಿ ಕಟ್ಟಡಗಳೇ ಆಗಿದ್ದರೂ ಬಾಕಿ ಹಣ ವಸೂಲಿಯಲ್ಲಿ ಯಾಕಿಷ್ಟು ಬೇಧ ಭಾವ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ.












Click it and Unblock the Notifications