ಪ್ರಯಾಣದರ ಇಳಿಸಿ, ಎಎಪಿ ಅಹೋರಾತ್ರಿ ಧರಣಿ
ಬೆಂಗಳೂರು, ನ.12 : ಡೀಸೆಲ್ ದರ ಇಳಿಕೆಯಾದ ಹಿನ್ನಲೆಯಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಪ್ರಯಾಣ ದರವನ್ನು ಕಡಿಮೆ ಮಾಡುವಂತೆ ಆಗ್ರಹಿಸಿ ಆಮ್ ಆದ್ಮಿ ಪಕ್ಷ ಅಹೋರಾತ್ರಿ ಧರಣಿ ಆರಂಭಿಸಿದೆ. ಪಕ್ಷದ ಮುಖಂಡ ರವಿ ಕೃಷ್ಣಾ ರೆಡ್ಡಿ ಧರಣಿ ನೇತೃತ್ವ ವಹಿಸಿದ್ದಾರೆ.
ಬುಧವಾರ ಸಂಜೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಶಾಂತಿನಗರ ಬಸ್ ನಿಲ್ದಾಣದ ಬಳಿ ಅಹೋರಾತ್ರಿ ಧರಣಿಯನ್ನು ಆರಂಭಿಸಿದ್ದು, ಡೀಸೆಲ್ ದರ ಕಡಿಮೆಯಾಗಿದೆ ಆದ್ದರಿಂದ ಪ್ರಯಾಣದರವನ್ನು ಕಡಿಮೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. [ಪ್ರಯಾಣ ದರ ಏಕೆ ಇಳಿಸಲು ಸಾಧ್ಯವಿಲ್ಲ]

ದೇಶದಲ್ಲಿಯೇ ದುಬಾರಿ ಪ್ರಯಾಣದರವಿರುವುದು ಕರ್ನಾಟಕದಲ್ಲಿ, ಡೀಸೆಲ್ ದರ ಏರಿಕೆಯಾಗಿದೆ ಎಂದು ದರ ಏರಿಕೆ ಮಾಡಿದವರು, ಡೀಸೆಲ್ ದರ ಕಡಿಮೆಯಾದಾಗ, ಪ್ರಯಾಣದರವನ್ನು ಕಡಿಮೆ ಮಾಡಿ, ಜನಸಾಮಾನ್ಯರನ್ನು ಉಳಿಸಿ ಎಂದು ಘೋಷಣೆ ಕೂಗುತ್ತಿದ್ದಾರೆ.
ಕೆಎಸ್ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ ಆದ್ದರಿಂದ ಪ್ರಯಾಣ ದರವನ್ನು ಸದ್ಯ ಕಡಿಮೆ ಮಾಡಲು ಸಾಧ್ಯವಿಲ್ಲ. ಅಂತರಾಷ್ಟ್ರೀಯ ಮಾರುಕಟ್ಟೆಯ ದರಗಳಿಗೆ ಅನುಗುಣವಾಗಿ ಡೀಸೆಲ್ ದರ ಏರಿಳಿತವಾಗುತ್ತಿದೆ ಎಂದು ಈಗಾಗಲೇ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಡೀಸೆಲ್ ದರ ಇಳಿಕೆಯಾಗಿದೆ ಆದ್ದರಿಂದ ಪ್ರಯಾಣದರವನ್ನು ಕಡಿಮೆ ಮಾಡಿ ಎಂದು ಮಾಜಿ ಸಾರಿಗೆ ಸಚಿವ ಆರ್.ಅಶೋಕ್ ಸರ್ಕಾರವನ್ನು ಒತ್ತಾಯಿಸಿದ್ದರು. ಬಿಜೆಪಿ ಮತ್ತು ಲೋಕಸತ್ತಾ ಪಕ್ಷಗಳು ದರ ಇಳಿಕೆ ಮಾಡಿ ಎಂದು ಪ್ರತಿಭಟನೆ ನಡೆಸಿದ್ದವು. ಆದರೆ, ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿದ ಸಾರಿಗೆ ಸಚಿವರು ದರ ಇಳಿಕೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ.
ತೆರಿಗೆ ವಿನಾಯಿತಿ ನೀಡಿ : ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಸರ್ಕಾರ ತೆರಿಗೆ ವಿನಾಯಿತಿ ನೀಡಬೇಕು. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ ವಾಯುವ್ಯ ಸಾರಿಗೆ ಸಂಸ್ಥೆಗಳಿಗೆ ಸರ್ಕಾರ ತೆರಿಗೆ ವಿನಾಯಿತಿ ನೀಡುವ ಜೊತೆಗೆ ವಿದ್ಯಾರ್ಥಿ, ಅಂಗವಿಕಲರು, ವಯೋವೃದ್ಧರ ಪಾಸ್‍ಗಳಿಗೆ ಸರ್ಕಾರದಿಂದ ನೀಡುವ ಸಬ್ಸಿಡಿ ಹಣವನ್ನು ಭರಿಸಿದರೆ ದರ ಇಳಿಕೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.












Click it and Unblock the Notifications