ಖಾಸಗಿ ಶಾಲೆ ಬೋಧನಾ ಶುಲ್ಕ ಕಡಿತ ಸುರೇಶ್ ಕುಮಾರ್ ವಿರುದ್ಧ ಆಮ್ ಆದ್ಮಿ ಪಕ್ಷ ಆಕ್ರೋಶ
ಬೆಂಗಳೂರು,ಜನವರಿ 30: ಸರ್ಕಾರದ ಕೆಲಸ ಕೇವಲ ಆದೇಶ ನೀಡುವುದಲ್ಲ, ಸಹಾಯಕ್ಕೆ ನಿಲ್ಲುವುದು. ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರೇ ಶುಲ್ಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೇಳಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಒತ್ತಡಕ್ಕೆ ಮಣಿದು ಈಗ ಶೇ 30 ರಷ್ಟು ಬೋಧನಾ ಶುಲ್ಕ ಕಡಿಮೆ ಮಾಡಿರುವುದು ಸ್ವಾಗತಾರ್ಹ.
ಆದರೆ ಈ ಪೋಷಕರ ಹಾಗೂ ಖಾಸಗಿ ಶಾಲೆಗಳ ಜಟಾಪಟಿಗೆ ಸರ್ಕಾರಿ ಆದೇಶ ನೀಡಿದ್ದೀರೆ ಹೊರತು ಸಮಸ್ಯೆ ಬಗೆಹರಿಸಿಲ್ಲ ಎಂದು ಆಮ್ ಆದ್ಮಿ ಪಕ್ಷದ ಮುಖ್ಯ ವಕ್ತಾರ ಶರತ್ ಖಾದ್ರಿ ನುಡಿದರು.
ಶನಿವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಒಂದು ಕಡೆ ಸಣ್ಣ, ಪುಟ್ಟ ಖಾಸಗಿ ಶಾಲೆಗಳು ಮುಚ್ಚಿಹೋಗುತ್ತಿವೆ, ಇದರಿಂದ ಪೋಷಕರು ಆತಂಕದಲ್ಲಿ ಇದ್ದಾರೆ. ಸರ್ಕಾರದಿಂದ ಖಾಸಗಿ ಶಾಲೆಗಳಿಗೆ ಇಂತಿಷ್ಟು ಸಹಾಯಧನ ಘೋಷಿಸಿ, ಆನಂತರ ಶುಲ್ಕ ಕಡಿತದ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದರೆ ಪೋಷಕರ ಹಾಗೂ ಖಾಸಗಿ ಶಾಲೆಗಳ ಜಗಳವನ್ನು ನಿಲ್ಲಿಸಬಹುದಿತ್ತು ಆದರೆ ಈ ಆದೇಶದಿಂದ ಪರಿಸ್ಥಿತಿ ಮತ್ತಷ್ಟು ಜಟಿಲ ಮಾಡಿದ್ದೀರಿ ಎಂದರು.

ಸರ್ಕಾರಿ ಶಾಲೆಗಳು ಸಂಪೂರ್ಣ ವಿಶ್ವಾಸ ಕಳೆದುಕೊಂಡಿರುವ ಈ ಹೊತ್ತಿನಲ್ಲಿ ಲಕ್ಷಾಂತರ ಮಕ್ಕಳು ಖಾಸಗಿ ಶಾಲೆಗಳನ್ನೇ ನೆಚ್ಚಿಕೊಂಡಿದ್ದಾರೆ. ಈಗ ಈ ಆದೇಶದ ವಿರುದ್ದ ಖಾಸಗಿ ಶಾಲೆಗಳ ಒಕ್ಕೂಟ ನ್ಯಾಯಾಲಯಕ್ಕೆ ಹೋಗುವುದಾಗಿ ಹೇಳಿದೆ. ಇದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ ಹೊರತು ಏನೂ ಆಗುವುದಿಲ್ಲ. ಹೀಗೆ ಪೋಷಕರನ್ನು ಮುಗ್ದ ಮಕ್ಕಳನ್ನು ಗೋಳು ಹೋಯ್ದು ಕೊಳ್ಳುವ ನೀವು ಜವಾಬ್ದಾರಿಯುತ ಸ್ಥಾನದಲ್ಲಿ ಇರಲು ಅನರ್ಹರು ಎಂದರು.
ಸಂಪಂಗಿರಾಮ ನಗರ ವಾರ್ಡ್ ಅಧ್ಯಕ್ಷ ಪ್ರಕಾಶ್ ನೆಡುಂಗಡಿ ಮಾತನಾಡಿ, ಶಿಕ್ಷಣ ಸಚಿವರೇ ಶುಲ್ಕ ಕಡಿತ ಮಾಡಿದ ಮೇಲೆ ಶಾಲೆಗಳು ಅಲ್ಲಿನ ಸಿಬ್ಬಂದಿಗಳಿಗೆ ಸಂಬಳ ನೀಡುತ್ತವೆಯೇ ಎಂಬುದು ನಮ್ಮ ಪ್ರಶ್ನೆಯಾಗಿದೆ. ಶಾಲೆಗಳಿಗೆ ಸಹಾಯಧನ ನೀಡಿದ್ದರೇ, ಖಾಸಗಿ ಶಾಲೆಗಳಿಗೆ ಶೇ 50 ರಷ್ಟು ಶುಲ್ಕ ಕಡಿಮೆ ಮಾಡಿ ಎಂದು ಹೇಳಬಹುದಿತ್ತು, ಆದರೆ ಈಗ ಇದಕ್ಕೆ ಅವಕಾಶವೇ ಇಲ್ಲ ಎಂದರು.











Click it and Unblock the Notifications