ಬಿಜೆಪಿ ಕಾರ್ಯಕರ್ತರಿಂದ ನಿಂದನೆ, ಬೆದರಿಕೆ: ಪೊಲೀಸರಿಗೆ ಎಎಪಿ ದೂರು
ಬೆಂಗಳೂರು, ಜನವರಿ 09: ಆಮ್ ಆದ್ಮಿ ಪಾರ್ಟಿ (ಎಎಪಿ) ಮುಖಂಡ ಹಾಗೂ ಮಾಜಿ ನ್ಯಾಯಾಧೀಶ ಎಂ.ವೆಂಕಟರಮಣಪ್ಪರವರಿಗೆ ಜೀವ ಬೆದರಿಕೆ ಹಾಕಿದ್ದ ಬಿಜೆಪಿ ಕಾರ್ಯಕರ್ತನನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಕ್ಷದ ಮುಖಂಡರು ಪೊಲೀಸರಿಗೆ ದೂರು ನೀಡಿದೆ.
ಎಎಪಿ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ನಮ್ಮ ಪಕ್ಷದ ಮುಖಂಡ ಎಂ.ವೆಂಕಟರಮಣಪ್ಪ ಅವರಿಗೆ ಬಿಜೆಪಿ ಕಾರ್ಯಕರ್ತನೊಬ್ಬ ಚಾಕು ತೋರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಜೀವ ಬೆದರಿಕೆ ಹಾಕಿದ್ದಾರೆ. ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಜೀವನ್ ಭೀಮಾ ನಗರದಲ್ಲಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದರು.
ಸಿ.ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದ ಮಲ್ಲೇಶ್ ಪಾಳ್ಯದಲ್ಲಿ ಆಮ್ ಆದ್ಮಿ ಪಾರ್ಟಿಯ ನೂತನ ಕಚೇರಿ ಉದ್ಘಾಟನೆ ಮಾಡಲಾಯಿತು. ಉದ್ಘಾಟನಾ ಕಾರ್ಯಕ್ರಮ ಮುಗಿಸಿಕೊಂಡು ಎಂ.ವೆಂಕಟರಮಣಪ್ಪರವರು ಹೋಟೆಲ್‌ಗೆ ತೆರಳಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತನೊಬ್ಬ ನಾಲ್ಕು ಗೂಂಡಾಗಳೊಂದಿಗೆ ಬಂದು ಅವರಿಗೆ ಚಾಕು ತೋರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಪಕ್ಷದ ಕಚೇರಿ ಹಾಗೂ ಅವರ ಹೋಟೆಲನ್ನು ಖಾಲಿ ಮಾಡಬೇಕು ಎಂದು ಬೆದರಿಕೆ ಹಾಕಿದ್ದಾನೆ ಎಂದು ತಿಳಿಸಿದರು.

ಸಿ.ವಿ ರಾಮನ್ ನಗರದ ಬಿಜೆಪಿ ಶಾಸಕ ಎಸ್.ರಘುರವರಿಗೆ ಆಮ್ ಆದ್ಮಿ ಪಾರ್ಟಿಯ ಭಯ ಶುರುವಾಗಿದೆ. ಕ್ಷೇತ್ರದೆಲ್ಲೆಡೆ ಆಮ್ ಆದ್ಮಿ ಪಾರ್ಟಿಗೆ ಉತ್ತಮ ಜನ ಬೆಂಬಲ ವ್ಯಕ್ತವಾಗುತ್ತಿರುವುದು ಶಾಸಕರ ನಿದ್ದೆ ಗಡೆಸಿದೆ. ಆದ್ದರಿಂದ ಬೆಂಬಲಿಗರನ್ನು ಛೂ ಬಿಟ್ಟು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಇಂತಹ ದುಷ್ಕೃತ್ಯಗಳಿಗೆ ಎಎಪಿ ನಾಯಕರು ಹೆದರುವುದಿಲ್ಲ. ಬಿಜೆಪಿಯ ಭ್ರಷ್ಟ ಆಡಳಿತವನ್ನು ಕೊನೆಗಾಣಿಸಿ, ಪಾರದರ್ಶಕ ಹಾಗೂ ಜನಪರ ಆಡಳಿತವನ್ನು ಅಧಿಕಾರಕ್ಕೆ ತರುವ ನಮ್ಮ ಪ್ರಯತ್ನ ಮುಂದುವರಿಯುತ್ತದೆ. ನಾವು ಇದರಲ್ಲಿ ಯಶಸ್ಸು ಕಾಣಲಿದ್ದೇವೆ ಎಂದು ಅವರು ಎಚ್ಚರಿಕೆ ನೀಡಿದರು.

ನಂತರ ಮಾತನಾಡಿದ ಮಾಜಿ ನ್ಯಾಯಾಧೀಶ ಎಂ.ವೆಂಕಟರಮಣಪ್ಪ ಅವರು, ನಾವು ಕಾನೂನು ಪಾಲನೆಯಲ್ಲಿ ನಂಬಿಕೆ ಹೊಂದಿದ್ದೇವೆ. ಬಿಜೆಪಿ ಕೂಡ ಇದೇ ಮಾರ್ಗದಲ್ಲಿ ಸಾಗಬೇಕು ಎಂದು ಬಯಸುತ್ತೇವೆ. ಅದರ ಬದಲು, ರೌಡಿಗಳನ್ನು ಬಿಟ್ಟು ಧಮಕಿ ಹಾಕಿಸುವುದು ಸರಿಯಲ್ಲ. ಬಿಜೆಪಿ ಗೂಂಡಾಗಿರಿಗೆ ಅಂತ್ಯ ಹಾಡಲು ಸಿ.ವಿ ರಾಮನ್ ನಗರದ ಜನರು ಮುಂದಾಗಬೇಕು. ಶಾಸಕರ ಬೆಂಬಲಿಗರಿಂದ ತೊಂದರೆ ಅನುಭವಿಸುವವರು ನಮ್ಮ ಕಚೇರಿಗೆ ಮಾಹಿತಿ ನೀಡಬಹುದು. ಕ್ಷೇತ್ರದ ಜನರನ್ನು ಗೂಂಡಾಗಿರಿಯಿಂದ ಕಾಪಾಡಲು ಆಮ್ ಆದ್ಮಿ ಪಾರ್ಟಿ ಸದಾ ಸಿದ್ಧವಾಗಿರುತ್ತದೆ ಎಂದು ಕರೆ ನೀಡಿದರು.












Click it and Unblock the Notifications