ಪ್ರಧಾನಿ ಮೋದಿ ಭೇಟಿ: ಕೇರಳದಲ್ಲಿ ಹೈ ಅಲರ್ಟ್!
ತಿರುವನಂತಪುರ: ಪಿಎಂ ಮೋದಿ ಅವರ ಕೇರಳ ಭೇಟಿ ಸಂದರ್ಭದಲ್ಲಿ ಆತ್ಮಾಹುತಿ ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಬೆದರಿಕೆ ಸಂದೇಶ ಇರುವ ಪತ್ರ ಸಂಚಲನ ಸೃಷ್ಟಿಮಾಡಿದೆ. ಹೀಗೆ ಪತ್ರ ಹೊರಬರುತ್ತಿದ್ದಂತೆ ಕೇರಳದಲ್ಲಿ ಹೈ ಅಲರ್ಟ್ ಘೋಷಿಲಾಗಿದೆ. ಏ.24ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಕೇರಳದ ಕೊಚ್ಚಿಗೆ ಭೇಟಿ ನೀಡುತ್ತಿದ್ದಾರೆ.
ಕೇರಳದ ಬಿಜೆಪಿ ರಾಜ್ಯ ಕಚೇರಿಗೆ ಬೆದರಿಕೆ ಸಂದೇಶ ಇರುವ ಪತ್ರ ಬಂದಿದೆ. ಕೇರಳದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮತ್ತೊಂದು ಕಡೆ ಈ ಸಂಬಂಧ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹಾಗೇ ಬೆದರಿಕೆ ಸಂದೇಶ ಇರುವ ಪತ್ರ ಬಹಿರಂಗವಾಗುತ್ತಿದ್ಧಂತೆ ದೇಶಾದ್ಯಂತ ಈ ಬಗ್ಗೆ ಚರ್ಚೆ ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲೂ ಸಂಚಲನ ಸೃಷ್ಟಿಸಿದೆ ಈ ಪತ್ರ.

ಬೇರೆಯವರ ಹೆಸರಲ್ಲಿ ಪತ್ರ!
ಇನ್ನು ಬೆದರಿಕೆ ಪತ್ರದಲ್ಲಿ ವ್ಯಕ್ತಿಯೊಬ್ಬರ ಹೆಸರು ಹಾಗೂ ವಿವರ ಸಿಕ್ಕಿದೆ. ಈ ವಿವರವನ್ನೇ ಆಧರಿಸಿ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಕೇರಳ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದರೆ ವಿಚಾರಣೆಯ ಸಂದರ್ಭದಲ್ಲಿ ಆ ವ್ಯಕ್ತಿ ಬೇರೆಯದ್ದೇ ಕಹಾನಿ ಹೇಳಿದ್ದಾನೆ. ತನ್ನ ಹೆಸರಲ್ಲಿ ಬೇರೆ ಯಾರೋ ಈ ರೀತಿಯ ಕೃತ್ಯವನ್ನು ಎಸಗಿದ್ದಾರೆಂದು ಪೊಲೀಸರ ಬಳಿ ಅಳಲು ತೋಡಿಕೊಂಡಿದ್ದಾನೆ ಎನ್ನಲಾಗಿದೆ. ಹಾಗೇ ಇಷ್ಟೆಲ್ಲದರ ಮಧ್ಯೆ ಕೇರಳದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಕೇಂದ್ರದ ತನಿಖಾ ಸಂಸ್ಥೆಗಳು ಕೇರಳ ಪೊಲೀಸರಿಂದ ಹೆಚ್ಚಿನ ಮಾಹಿತಿ ಕೇಳಿವೆ.
ವರದಿ ಸೋರಿಕೆಗೆ ಆಕ್ರೋಶ
ಇದೆಲ್ಲಾ ಒಂದ್ಕಡೆ ಆದರೆ, ಮತ್ತೊಂದು ಕಡೆ ಪ್ರಧಾನಿ ಮೋದಿ ಕೇರಳ ಭೇಟಿ ವೇಳೆ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳ ಬಗ್ಗೆ ಎಡಿಜಿಪಿ ಸಿದ್ಧಪಡಿಸಿದ್ದ ವರದಿ ಸೋರಿಕೆಯಾಗಿದೆ. ಹಾಗೇ ನಿಷೇಧಿತ ಪಿಎಫ್ಐ ಸಂಘಟನೆ ಸೇರಿ ಇತರ ಸಂಘಟನೆಗಳ ಬೆದರಿಕೆಯ ಬಗ್ಗೆ ಈ ವರದಿಯಲ್ಲಿ ಉಲ್ಲೇಖಿಸಲಾಗಿತ್ತು ಎನ್ನಲಾಗಿದೆ. ವಿದೇಶಾಂಗ ಇಲಾಖೆಯ ರಾಜ್ಯ ಖಾತೆ ಸಚಿವ ಎಂ. ಮುರಳೀಧರನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪೊಲೀಸರಿಂದ ಗಂಭೀರ ಭದ್ರತಾ ಲೋಪವಾಗಿದೆ ಎಂದು ಕಿಡಿಕಾರಿದ್ದಾರೆ.
ಇಷ್ಟೆಲ್ಲಾ ಘಟನೆಗಳ ನಡುವೆ ಪ್ರಧಾನಿ ಮೋದಿ ಅವರ ಕಾರ್ಯಕ್ರಮಗಳು ನಿಗದಿಯಂತೆ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್ ಅವರು ಮಾಹಿತಿ ನೀಡಿದ್ದಾರೆ. ಏಪ್ರಿಲ್ 24ರ ಸೋಮವಾರ, ಕೇರಳದ ಕೊಚ್ಚಿಗೆ ಭೇಟಿ ನೀಡಲಿರುವ ಪಿಎಂ ನರೇಂದ್ರ ಮೋದಿ, ಯುವಂ ಸಮಾವೇಶ ಉದ್ಘಾಟಿಸಿ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮದ ನಂತರ ಕೊಚ್ಚಿಯಲ್ಲಿ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಪಿಎಂ ನರೇಂದ್ರ ಮೋದಿ ಮಾತನಾಡಲಿದ್ದಾರೆ. ಮರುದಿನ ಕೇರಳದ ತಿರುವನಂತಪುರಕ್ಕೆ ಭೇಟಿ ನೀಡಲಿದ್ದಾರೆ.

ಒಟ್ನಲ್ಲಿ ಕೇರಳಕ್ಕೆ ಪ್ರಧಾನಿ ಮೋದಿ ಭೇಟಿಗೂ ಮುನ್ನವೇ ಗೊಂದಲದ ಪರಿಸ್ಥಿತಿ ನಿರ್ಮಾಣ ಆಗುವಂತೆ ಈ ಬೆದರಿಕೆ ಪತ್ರ ಭೀತಿ ಸೃಷ್ಟಿಸಿದೆ. ಇನ್ನು ಬೆದರಿಕೆ ಪತ್ರದ ಹಿನ್ನೆಲೆಯಲ್ಲಿ ಕೇರಳದಲ್ಲಿ ಹೈ ಅಲರ್ಟ್ ಘೋಷಿಸಿ, ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ಹಾಗೇ ಪ್ರಧಾನಿ ಮೋದಿ ಸಾಗುವ ಮಾರ್ಗ ಮತ್ತು ಪ್ರಧಾನಿ ಮೋದಿ ಪಾಲ್ಗೊಳ್ಳಲಿರುವ ಕಾರ್ಯಕ್ರಮದ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.












Click it and Unblock the Notifications