ಡೈವೋರ್ಸ್ ನೀಡಲು ನಿರಾಕರಿಸಿದ ಹೆಂಡತಿಯ ಕೊಲೆಗೆ ಅಪಘಾತದ ನಾಟಕವಾಡಿದ ಪತಿ!
ಬೆಂಗಳೂರು, ಜುಲೈ. 17: ಅಪಘಾತದಲ್ಲಿ ಗರ್ಭಿಣಿ ಮಹಿಳೆ ಕಾಲು ಮುರಿತಕ್ಕೆ ಒಳಗಾಗಿ, ಗರ್ಭಪಾತಕ್ಕೆ ಕಾರಣವಾದ ಘಟನೆಯ ತನಿಖೆ ನಡೆಸಿದ ಬೆಂಗಳೂರು ಪೊಲೀಸರು ಆಕೆಯ ಪತಿ ಮತ್ತು ಆತನ ಸಹಚರನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪತ್ನಿಯನ್ನು ಕೊಲೆ ಮಾಡಲು ಪತಿ ಅಪಘಾತದ ನಾಟಕವಾಡಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.
ಉತ್ತರ ಬೆಂಗಳೂರಿನ ಬಾಗಲೂರು ಬಳಿಯ ಬಂಡೆ ಕೊಡಿಗೇಹಳ್ಳಿ ನಿವಾಸಿ ಅರವಿಂದ ಕುಮಾರ್ (28) ಎಂಬುವವರು ತನ್ನ ಪತ್ನಿ ವಿಚ್ಛೇದನ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕೊಲೆ ಮಾಡಲು ಯತ್ನಿಸಿದ್ದಾರೆ. ಅವರನ್ನು ಮತ್ತು ಅರವಿಂದನ ಚಾಲಕ ಚಿಕ್ಕಮಧುರೆಯ ಉದಯ್ ಕುಮಾರ್ (27) ಎಂಬಾತನನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನೃತ್ಯ ಶಿಕ್ಷಕಿಯಾಗಿದ್ದ ಅರವಿಂದ ಅವರ ಪತ್ನಿ ಚೈತನ್ಯ ಅವರು ಡಿಸೆಂಬರ್ 31, 2022 ರಂದು ತರಗತಿ ಮುಗಿಸಿ ಮನೆಗೆ ಹೋಗುತ್ತಿದ್ದಾಗ 'ಅಪಘಾತ' ಸಂಭವಿಸಿದೆ. ವೇಗವಾಗಿ ಬಂದ ಎಸ್‌ಯುವಿ ರಸ್ತೆಯ ಎಡಭಾಗದಲ್ಲಿದ್ದ ಆಕೆಯ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಆ ಸಮಯದಲ್ಲಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಚೈತನ್ಯ ಶೀಘ್ರದಲ್ಲೇ ಮಗುವನ್ನು ಕಳೆದುಕೊಂಡಿದ್ದಾರೆ. ಗಾಯಗಳಿಂದ ಚೇತರಿಸಿಕೊಳ್ಳಲು ಆಸ್ಪತ್ರೆಯಲ್ಲಿ ತಿಂಗಳುಗಳನ್ನು ಕಳೆದಿದ್ದಾರೆ.
ಆರೋಪಿಗಳನ್ನು ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅರವಿಂದ್ ಕಳೆದ ವರ್ಷ ಚೈತನ್ಯ ಅವರನ್ನು ಮದುವೆಯಾಗಿದ್ದು, ಹೊಸಕೋಟೆಯಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಚೈತನ್ಯ ತನ್ನ ಪತಿಯನ್ನು ಪೋಷಕರಿಂದ ಬೇರೆ ಬಂದು ವಾಸಿಸುವಂತೆ ಒತ್ತಾಯಿಸುತ್ತಿದ್ದರಿಂದ ದಂಪತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದು ವೈವಾಹಿಕ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು ಮತ್ತು ಅರವಿಂದ್ ವಿಚ್ಛೇದನಕ್ಕೆ ಕೋರಿದ ನಂತರ ಆಕೆ ಪೋಷಕರ ಮನೆಗೆ ತೆರಳಿದ್ದು, ಜೊತೆಗೆ ಚೈತನ್ಯ ಅವರು ಗರ್ಭಿಣಿಯಾಗಿದ್ದರಿಂದ ವಿಚ್ಛೇದನ ನೀಡಲು ನಿರಾಕರಿಸಿದ್ದರು.
ಹೀಗಾಗಿ ಅರವಿಂದ್ ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದ್ದರು, ಇದಕ್ಕೆ ಉದಯ್ ಅವರನ್ನು ಬಳಸಿಕೊಂಡು ಅವನಿಗೆ 1.5 ಲಕ್ಷ ರೂಪಾಯಿ ನೀಡಿದ್ದರು. ಅಪಘಾತವೆಂಬಂತೆ ಕೊಲೆಗೆ ಸಂಚು ರೂಪಿಸಿ ಸಿಸಿಟಿವಿ ಕ್ಯಾಮೆರಾ ಇಲ್ಲದ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಚೈತನ್ಯ ಪ್ರತಿ ದಿನ ಭರತನಾಟ್ಯ ತರಗತಿಗಳಿಗೆ ಹೋಗಿ ಕೆಐಎಡಿಬಿ ಲೇಔಟ್ ಮೂಲಕ ಮನೆಗೆ ಹಿಂದಿರುಗುತ್ತಿದ್ದರು. ಅಲ್ಲಿ ಸಿಸಿಟಿವಿ ಕ್ಯಾಮೆರಾಗಳಿಲ್ಲದ ಕಾರಣ, ಅವರು ಅವಳನ್ನು ಕೊಲ್ಲಲು ಸರಿಯಾದ ಸ್ಥಳ ಎಂದು ನಿರ್ಧರಿಸಿದ್ದರು.
ಜನವರಿ 1 ರಂದು ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಿದ ಅವರು, ಆಕೆ ಮನೆಗೆ ಹೋಗುತ್ತಿದ್ದಾಗ ಸ್ಕೂಟರ್‌ಗೆ ಡಿಕ್ಕಿ ಹೊಡೆದು ವೇಗವಾಗಿ ಹೊರಟುಹೋದರು. ಅಪಘಾತದಲ್ಲಿ ಚೈತನ್ಯ ಅವರಿಗೆ ಗಂಭೀರ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ದೇವನಹಳ್ಳಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೀಡಾದ ವಾಹನಕ್ಕಾಗಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
"ಅಪಘಾತದ ಸ್ಥಳಕ್ಕೆ ಹೋಗುವ ರಸ್ತೆಗಳಲ್ಲಿನ ವಿವಿಧ ಸಿಸಿಟಿವಿ ಕ್ಯಾಮೆರಾಗಳಿಂದ ರೆಕಾರ್ಡ್ ಮಾಡಿದ ದೃಶ್ಯಗಳನ್ನು ಪರಿಶೀಲಿಸಿದ ನಂತರ, ಕಾರನ್ನು ಗುರುತಿಸಲಾಯಿತು. ಈ ಕಾರು ಗ್ಯಾರೇಜ್‌ನಲ್ಲಿ ಪತ್ತೆಹಚ್ಚಲಾಯಿತು. ಕಾರಿನ ಮಾಲೀಕರನ್ನು ಸಂಪರ್ಕಿಸಿದಾಗ, ಕೆಲ ತಿಂಗಳ ಹಿಂದೆ ಅರವಿಂದ್ ಎಂಬುವವರಿಗೆ ಕಾರನ್ನು ಮಾರಾಟ ಮಾಡಿರುವುದಾಗಿ ತಿಳಿಸಿದರು. ವಿಚಾರಣೆ ವೇಳೆ ಇದು ಅಪಘಾತವಲ್ಲ, ಕೊಲೆಯ ಪ್ರಯತ್ನ ಎಂದು ತಿಳಿಯಿತು. ಪ್ರಕರಣವನ್ನು ಬಾಗಲೂರು ಪೊಲೀಸರಿಗೆ ವರ್ಗಾಯಿಸಲಾಯಿತು ಮತ್ತು ಅರವಿಂದ್ ಅವರ ಮಾಹಿತಿಯ ಆಧಾರದ ಮೇಲೆ ಉದಯ್ ಅವರನ್ನು ಸಹ ಬಂಧಿಸಲಾಯಿತು" ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications