Namma Metro: ಮೆಟ್ರೋ ಇಳಿಯುವಾಗ ತಾಯಿಯಿಂದ ಬೇರ್ಪಟ್ಟ ಮಗು ರೈಲಿನೊಳಗೆ ಉಳಿಯಿತು! ಮುಂದೇನಾಯ್ತು?
ಬೆಂಗಳೂರು, ಆಗಸ್ಟ್ 23: ಬೆಂಗಳೂರು ನಮ್ಮ ಮೆಟ್ರೋ ಮೂರು ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಇಂಟರ್‌ಚೇಂಜ್ ನಿಲ್ದಾಣಗಳಲ್ಲಿ ಜನದಟ್ಟಣೆ ಹೆಚ್ಚಾಗಿದೆ. ಶನಿವಾರ ಮೆಟ್ರೋ ನಿಲ್ದಾಣದಲ್ಲಿ ತಾಯಿ ಜೊತೆಗೆ ಮಗು ಇಳಿಯುವಾಗ ತಾಯಿಯಿಂದ ಮಗು ಬೇರ್ಪಟ್ಟ ಘಟನೆ ನಡೆದಿದೆ. ಇದು ನೇರಳೆ ಮಾರ್ಗದಲ್ಲಿನ ಮಾಗಡಿ ರಸ್ತೆಯಲ್ಲಿ ನಡೆದಿದ್ದು, ಕೆಲವು ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಮಗು ರೈಲಿನಲ್ಲಿ ಒಂಟಿಯಾಗಿ ಚಲಿಸಿದ್ದು ನೋಡಿ ತಾಯಿ ಕಣ್ಣೀರಿಟ್ಟರು.
ಚಲಘಟ್ಟದಿಂದ-ವೈಟ್‌ಫೀಲ್ಡ್ ಸಂಪರ್ಕಿಸುವ ಮೆಟ್ರೋ ಮಾರ್ಗ 1ರಲ್ಲಿ (ನೇರಳೆ ಮಾರ್ಗ) ತಾಯಿ ಮತ್ತು ಮಗು ಮೈಸೂರು ರಸ್ತೆಯಿಂದ ಮೆಟ್ರೋ ಏರಿದ್ದಾರೆ. ಇಬ್ಬರು ಮಾಗಡಿ ರಸ್ತೆಯಲ್ಲಿ ಇಳಿಯಬೇಕಿತ್ತು. ತಾಯಿ ಮಗು ಜೊತೆ ಮೆಟ್ರೋದಿಂದ ಇಳಿಯುವಾಗ ಪ್ಲಾಟ್‌ಫಾರ್ಮ್‌ನಲ್ಲಿದ್ದ ಜನರು ದಿಢೀರನೇ ಮೆಟ್ರೋ ಬಾಗಿಲಿನೊಳಕ್ಕೆ ಬಂದಿದ್ದಾರೆ. ಆಗ ಮಗು ಒಳಗೇ ಉಳಿದಿದೆ. ಹೊರಗೆ ಬರುವಷ್ಟರಲ್ಲಿ ಮೆಟ್ರೋ ಬಾಗಿಲು ಹಾಕಿಕೊಂಡಿದೆ. ತಾಯಿ ಹೊರಗಿದ್ದಾರೆ. ನೋಡ ನೋಡುತ್ತಲೇ ಮೆಟ್ರೋ ಮುಂದಕ್ಕೆ ಚಲಿಸಿ ಬಿಟ್ಟಿದೆ ಎಂದು 'ಪ್ರಜಾವಾಣಿ ವರದಿ' ಮಾಡಿದೆ.

ತಾಯಿಯಿಂದ ಬೇರ್ಪಟ್ಟ ಮಗು ರೈಲಿನಲ್ಲಿ ಒಂಟಿ ಆಯಿತು. ಜೋರಾಗಿ ಅಳತೊಡಗಿತು. ಇತ್ತ ಮಾಗಡಿ ರಸ್ತೆ ನಿಲ್ದಾಣದಲ್ಲಿ ತಾಯಿಗೆ ಏನು ಮಾಡಬೇಕೆಂದು ತೋಚದಂತಾಯಿತು. ಆತಂಕದಲ್ಲಿ ತಾಯಿ ಮೆಟ್ರೋ ಸಿಬ್ಬಂದಿಯನ್ನು ಭೇಟಿ ಮಾಡಿದ್ದಾರೆ. ಇತ್ತ ಮೆಟ್ರೋದೊಳಗೆ ಸಹ ಪ್ರಯಾಣಿಕರು ಮಗುವನ್ನು ಸಮಾಧಾನ ಮಾಡಿದ್ದಾರೆ. ಮುಂದಿನ ನಿಲ್ದಾಣ ಕ್ರಾಂತಿವೀರ ಸಂಗೊಳ್ಳೀ ರಾಯಣ್ಣ ನಿಲ್ದಾಣದಲ್ಲಿ ಮಗು ಜೊತೆಗೆ ಯುವಕನೊಬ್ಬ ಇಳಿದಿದ್ದಾರೆ. ತಾಯಿ ಬರುವವರೆಗೂ ನಿಲ್ದಾಣದಲ್ಲಿ ನಿಂತುಕೊಂಡು ಮಗುವನ್ನು ತಾಯಿಗೆ ಸೇರಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಮೆಟ್ರೋ ಸಾರ್ವಜನಿಕ ಸಂಪರ್ಕಾಧಿಕಾರಿಗಳು ನೀಡಬೇಕಿದೆ.
ಇಂಟರ್‌ಚೇಂಜ್ ನಿಲ್ದಾಣದಲ್ಲಿ ದಟ್ಟಣೆ
ನಮ್ಮ ಮೆಟ್ರೋ ಮೂರು ಮಾರ್ಗಗಳಲ್ಲಿ ಸುಮಾರು 60 ಮೆಟ್ರೋಗಳು ಸಂಚರಿಸುತ್ತಿವೆ. ಒಟ್ಟು 96 ಕಿಲೋ ಮೀಟರ್ ವರೆಗೆ ಮೆಟ್ರೋ ಜಾಲ ವಿಸ್ತರಣೆ ಆಗಿದೆ. ಆರ್‌ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ದೈನಂದಿನ ಸುಮಾರು 50 ಸಾವಿರ ಪ್ರಯಾಣಿಕರು ಸಂಚಾರ ಸೇವೆ ಪಡೆಯುತ್ತಿದ್ದಾರೆ. ಈ ಮಾರ್ಗವನ್ನು ಅತ್ತಿಬೆಲೆ ವರೆಗೆ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ. ಅಲ್ಲದೇ ಹಸಿರು ಮಾರ್ಗದ ಆರ್‌ವಿ.ರಸ್ತೆಯಿಂದ ಯೆಲ್ಲೋ ಲೈನ್ ಆರಂಭವಾಗುತ್ತದೆ. ಅಲ್ಲಿನ ಇಂಟರ್‌ಚೇಂಜ್ ನಿಲ್ದಾಣದಲ್ಲಿ ಜನದಟ್ಟಣೆ ಹೆಚ್ಚಾಗುತ್ತಿದ್ದು, ದಟ್ಟಣೆಯ ಕಿರಿಕಿರಿ ಅನುಭವಿಸುವಂತಾಗಿದೆ. ವಿಶಾಲ ಜಾಗ ಇಲ್ಲ ಅಂತಲೂ ಕೆಲವರು ಅಸಮಾಧಾನ ಹೊರ ಹಾಕಿದ್ದಾರೆ...
ಆರ್.ವಿ.ರಸ್ತೆ ನಿಲ್ದಾಣದಲ್ಲಿ ಬ್ಯಾರಿಕೇಡ್ ಅಳವಡಿಕೆ
ನಮ್ಮ ಮೆಟ್ರೋ ದಟ್ಟಣೆ ಹೆಚ್ಚಾದ ನಿಲ್ದಾಣಗಳಲ್ಲಿ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಆರ್‌ವಿ.ರಸ್ತೆ ಇಂಟರ್‌ಚೇಂಜ್ ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ (ಪಿಎಸ್‌ಡಿ) ಅಳವಡಿಕೆ ಬದಲಾಗಿ ಸದ್ಯ ಬ್ಯಾರೀಕೇಡ್ ಅಳವಡಿಸಲಾಗುತ್ತಿದೆ. ಇದರಿಂದ ಸಂಭವನೀಯ ಅಪಾಯ ತಡೆಯಬಹುದಾಗಿದೆ.












Click it and Unblock the Notifications