ಬೆಂಗಳೂರು: ಚಲಿಸುವ ಕಾರಿನಲ್ಲಿ ಯುವತಿಯ ರೇಪ್
ಬೆಂಗಳೂರು,ಜು.15: ಸ್ನೇಹಿತನ ಜೊತೆಯಲ್ಲಿದ್ದ 22 ವರ್ಷದ ಯುವತಿಯನ್ನು ಆರು ಮಂದಿ ದುಷ್ಕರ್ಮಿಗಳು ಅಪಹರಿಸಿ ಬಲವಂತವಾಗಿ ಕಾರಿನಲ್ಲಿ ಕುಳ್ಳಿರಿಸಿ ಅತ್ಯಾಚಾರ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಶುಕ್ರವಾರ ಮಧ್ಯರಾತ್ರಿ ಫ್ರೇಜರ್ ಟೌನ್‌ನಲ್ಲಿ ಈ ಘಟನೆ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.ಈ ಸಂಬಂಧ ಫ್ರೇಜರ್ ಟೌನ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದು ಪೊಲೀಸರು ಉಳಿದ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಆರಂಭಿಸಿದ್ದಾರೆ.

ಏನಿದು ಘಟನೆ: ಸ್ಪೆನ್ಸರ್ ರೋಡ್ ಮೇಟ್ರೋಪಾಲಿಟನ್ ಅಪಾರ್ಟ್ಮೆಂಟ್ನಲ್ಲಿ ಗುರುವಾರ ರಾತ್ರಿ ಪಾರ್ಟಿಯೊಂದಿತ್ತು. ಸ್ನೇಹಿತ ಸುಜಿತ್ ಜೊತೆ ಯುವತಿ ಪಾರ್ಟಿಗೆ ಹೋಗಿದ್ದಳು.
ಪಾರ್ಟಿ ಮುಗಿಸಿದ ಬಳಿಕ ಸುಜಿತ್ ಯುವತಿಯನ್ನು ಆಕೆಯ ಮನೆಗೆ ಕಾರಿನಲ್ಲಿ ಬಿಟ್ಟಿದ್ದಾನೆ. ಮನೆ ಬಳಿ ಬಂದ ಮೇಲೆ ಕಾರಿನಲ್ಲೇ ರಾತ್ರಿ 12:30ರ ಸುಮಾರಿನಲ್ಲಿ ಕುಳಿತು ಇಬ್ಬರೂ ಮಾತನಾಡುವಾಗ ಸ್ಕೋಡಾ ಕಾರಿನಲ್ಲಿ ಆರು ಜನ ದುಷ್ಕರ್ಮಿಗಳು ಬಂದಿದ್ದಾರೆ.
ಕಾರಿನಲ್ಲಿದ್ದ ಯುವಕರು ಇಬ್ಬರಿಗೆ ಚಾಕು ತೋರಿಸಿ ಕಾರಿನ ಒಳಗೆ ಬರುವಂತೆ ಬೆದರಿಸಿದ್ದಾರೆ. ಪ್ರಿಯಕರನನ್ನು ಕಾರಿನ ಮುಂಭಾಗದಲ್ಲಿ ಕುಳಿತುಕೊಳ್ಳುವಂತೆ ಹೇಳಿ, ಯುವತಿಯನ್ನು ಹಿಂಭಾಗದಲ್ಲಿ ಕುಳ್ಳಿರಿಸಿದ್ದಾರೆ. ಬಳಿಕ ರಾತ್ರಿಯಿಡಿ ನಗರದಲ್ಲಿ ಕಾರಿನಲ್ಲಿ ಸುತ್ತಾಡಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಇಬ್ಬರನ್ನು ಕಾಕ್ಸ್ ಟೌನ್ ನ ರೇಲ್ವೇ ಹಳಿ ಪಕ್ಕ ಬಿಟ್ಟು ಪರಾರಿಯಾಗಿದ್ದಾರೆ.
ಘಟನೆಯಿಂದ ಹೆದರಿ ಆರಂಭದಲ್ಲಿ ದೂರು ನೀಡದ ಯುವತಿ ಮತ್ತು ಸ್ನೇಹಿತ ಭಾನುವಾರ ಎಂಪೈರ್ ಹೋಟೆಲ್ ಬಳಿ ನಿಂತಿದ್ದ ಸ್ಕೋಡಾ ಕಾರನ್ನು ನೋಡಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕಾರ್ ನಂಬರ್ ಮತ್ತು ಇಲ್ಲಿ ನಿಂತಿರುವ ಕಾರ್ ನಂಬರ್(ಕೆಎ 03 ಎಂಜೆ 8433) ಒಂದೇ ಆಗಿರುವುದನ್ನು ತಿಳಿದು ತಕ್ಷಣ ಇವರು ಪುಲಿಕೇಶಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಆಧಾರದ ಮೇಲೆ ಕಾರಿನ ಮಾಲೀಕ ಹೈದರ್ ನಾಸಿರ್‌ನನ್ನು ಬಂಧಿಸಿ, ಸ್ಕೋಡಾ ಕಾರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತನ ವಿಚಾರಣೆ ನಡೆಯುತ್ತಿದ್ದು, ನಾಪತ್ತೆಯಾಗಿರುವ ಯುವಕರ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.












Click it and Unblock the Notifications