Online Dating App: 'ಹೀಗೆ ಮಾಡು ಎಂದಳು ನಾನು ಮಾಡಿದೆ' -ಆನ್‌ಲೈನ್ ಡೇಟಿಂಗ್ ಮೂಲಕ ಶಾಕ್ ಕೊಟ್ಟ ಮಹಿಳೆ: 7.95 ಲಕ್ಷ ಪಂಗನಾಮ!
ಬೆಂಗಳೂರು ನವೆಂಬರ್ 17: ಆನ್‌ಲೈನ್ ಡೇಟಿಂಗ್ ಆ್ಯಪ್ ಮೂಲಕ 28 ವರ್ಷದ ಯುವಕನೊಬ್ಬನಿಗೆ ವಂಚನೆ ಮಾಡಿರುವುದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಯುವಕನಿಗೆ ನಗ್ನ ವೀಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿ ಆತನಿಂದ 7.95 ಲಕ್ಷ ರೂಪಾಯಿ ಹಣ ವಸೂಲಿ ಮಾಡಲಾಗಿದೆ.
ಆಗ್ನೇಯ ಬೆಂಗಳೂರಿನ ಕಾಡುಬೀಸನಹಳ್ಳಿ ನಿವಾಸಿ ಗೌತಮ್ ಕುಮಾರ್ (ಹೆಸರು ಬದಲಾಯಿಸಲಾಗಿದೆ) ವಂಚನೆಗೊಳಗಾದವರು. ಅವರು ನವೆಂಬರ್ 3 ರಂದು 'ಕೂಗರ್ ಡೇಟಿಂಗ್ ಆ್ಯಪ್'ನಲ್ಲಿ ಕೋಮಲ್ ಶರ್ಮಾ ಎಂಬುವವರನ್ನು ಭೇಟಿಯಾಗಿದ್ದರು. ಈಕೆ ಕಿರಿಯ ಪುರುಷನೊಂದಿಗೆ ಪ್ರಣಯ ಸಂಬಂಧವನ್ನು ಬಯಸುವ ಮಧ್ಯವಯಸ್ಕ ಮಹಿಳೆ.

ಅಂದೇ ರಾತ್ರಿ 9.40ರ ಸುಮಾರಿಗೆ ಕೋಮಲ್ ಕುಮಾರ್‌ಗೆ ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೋ ಕರೆ ಮಾಡಿದ್ದರು. ಆಗ ಕೋಮಲ್ ಗೌತಮ್ ಕುಮಾರ್‌ಗೆ ಬೆತ್ತಲೆಯಾಗುವಂತೆ ತಿಳಿಸಿದ್ದಾಳೆ. ಅವಳು ಸಹ ನಗ್ನಳಾಗಿದ್ದರಿಂದ ಗೌತಮ್ ಅದಕ್ಕೆ ಒಪ್ಪಿಗೆ ನೀಡಿದ್ದಾನೆ. ಜೊತೆಗೆ ಆಕೆ ಹೇಳಿದಂತೆ ನಡೆದುಕೊಂಡಿದ್ದಾನೆ.
ಕರೆ ಮುಗಿದ ಕೆಲವೇ ಕ್ಷಣಗಳಲ್ಲಿ ಕೋಮಲ್ ತಾನು ಬೆತ್ತಲೆಯಾಗಿರುವ ವೀಡಿಯೊದ ಭಾಗವನ್ನು ತೆಗೆದು ಹಾಕಿ ಗೌತಮ್ ಬೆತ್ತಲೆಯಾಗಿರುವ ವಿಡಿಯೋವನ್ನು ಮಾತ್ರ ಹಂಚಿಕೊಂಡಿದ್ದಾಳೆ. ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿ ಅದನ್ನು ಹಂಚಿಕೊಳ್ಳುವುದಾಗಿ ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದ್ದಾಳೆ ಎಂದು ಕುಮಾರ್ ಹೇಳಿಕೊಂಡಿದ್ದಾರೆ. ಕುಮಾರ್್ಗೆ ಅದೇ ದಿನ ನಗ್ನ ವೀಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿ 7.95 ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ.
ಬೇರೆ ದಾರಿ ಕಾಣದೆ ಕುಮಾರ್ ತನ್ನ ಐಸಿಐಸಿಐ ಬ್ಯಾಂಕ್ ಖಾತೆಯ ಮೂಲಕ ಕೋಮಲ್ ಸೂಚಿಸಿದ ಆರು ಬ್ಯಾಂಕ್ ಖಾತೆಗಳಿಗೆ ಅಂದರೆ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ (ಪಿಎನ್‌ಬಿ) ಎರಡು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಕೋಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಹಾಗೂ ಹೆಚ್.ಡಿ.ಎಫ್.ಸಿ.ಗೆ ಒಟ್ಟು 7.95 ಲಕ್ಷ ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದಾರೆ.
ನಂತರ ಕುಮಾರ್ ಅವರು ನವೆಂಬರ್ 5 ರಂದು ವೈಟ್‌ಫೀಲ್ಡ್ ಸೈಬರ್ ಎಕನಾಮಿಕ್ ಮತ್ತು ನಾರ್ಕೋಟಿಕ್ಸ್ ಕ್ರೈಮ್ (ಸಿಇಎನ್) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಿಇಎನ್ ಪೊಲೀಸರು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷನ್ 67 (ಇಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ವಸ್ತುಗಳನ್ನು ಪ್ರಕಟಿಸುವ ಅಥವಾ ರವಾನಿಸುವ ಶಿಕ್ಷೆ) ಮತ್ತು ಐಪಿಸಿ ಸೆಕ್ಷನ್ 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಯನ್ನು ಪ್ರೇರೇಪಿಸುವುದು) ಅಡಿಯಲ್ಲಿ ಲೈಂಗಿಕ ವಂಚನೆ ಪ್ರಕರಣವನ್ನು ದಾಖಲಿಸಿದ್ದಾರೆ.
ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿಗೆ (1930) ತಕ್ಷಣವೇ ಅಪರಾಧವನ್ನು ವರದಿ ಮಾಡಲು ಕುಮಾರ್ ವಿಫಲರಾಗಿದ್ದಾರೆ. ಗಂಟೆಯೊಳಗೆ ಅಪರಾಧವನ್ನು 1930 ಗೆ ವರದಿ ಮಾಡಿದರೆ ಕಳೆದುಹೋದ ಮೊತ್ತವನ್ನು ಮರುಪಡೆಯುವ ಸಾಧ್ಯತೆಗಳು ಹೆಚ್ಚು ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ. ಆದರೆ ಅದನ್ನು ಮಾಡಲು ಕುಮಾರ್ ಅವರಿಗೆ ಸಾಧ್ಯವಾಗಿಲ್ಲ.
ಈ ಬಗ್ಗೆ ಮಾಹಿತಿ ನೀಡಿದ ತನಿಖಾಧಿಕಾರಿಯೊಬ್ಬರು 'ಶಂಕಿತರ ಖಾತೆಗಳನ್ನು ಫ್ರೀಜ್ ಮಾಡಲು ನಾವು ಈಗಾಗಲೇ ಆಯಾ ಬ್ಯಾಂಕ್‌ಗಳೊಂದಿಗೆ ಸಂವಹನ ನಡೆಸಿದ್ದೇವೆ. ಒಮ್ಮೆ ನಾವು ವಹಿವಾಟಿನ ವಿವರಗಳನ್ನು ಸ್ವೀಕರಿಸಿದರೆ, ನಾವು ಇನ್ನಷ್ಟು ತಿಳಿದುಕೊಳ್ಳುತ್ತೇವೆ' ಎಂದು ಹೇಳಿದರು.
2023ರಲ್ಲಿ 84 ಲೈಂಗಿಕ ದೌರ್ಜನ್ಯ ಪ್ರಕರಣಗಳು ಈ ವರ್ಷದ ಜನವರಿ ಮತ್ತು ಸೆಪ್ಟೆಂಬರ್ ನಡುವೆ ನಗರದಲ್ಲಿ ದಾಖಲಾಗಿವೆ ಎಂದು ಬೆಂಗಳೂರು ಪೊಲೀಸರು ಅಕ್ಟೋಬರ್ 10ರಂದು ಬಿಡುಗಡೆ ಮಾಡಿದ ಅಂಕಿಅಂಶಗಳಲ್ಲಿ ಬಹಿರಂಗಪಡಿಸಿದ್ದಾರೆ. ಇದರಿಂದ ಸಂತ್ರಸ್ತರಿಗೆ 97.45 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖಾಧಿಕಾರಿಗಳು ದೂರುದಾರರಿಗೆ 8.67 ಲಕ್ಷ ರೂಪಾಯಿಗಳನ್ನು ಯಶಸ್ವಿಯಾಗಿ ಹಿಂದಿರುಗಿಸಿದ್ದಾರೆ ಎಂದು ಅಂಕಿಅಂಶಗಳು ತೋರಿಸಿವೆ.












Click it and Unblock the Notifications