ಬೆಂಗಳೂರಿನ ಶಾಲೆ ಬಂದ್! 500 ವಿದ್ಯಾರ್ಥಿಗಳಿಗೆ ಜ್ವರ, ಇಬ್ಬರಿಗೆ H1N1 ಸೋಂಕು ಪತ್ತೆ
ಬೆಂಗಳೂರು: ರಾಜಧಾನಿಯಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಳೆಗಾಲ ಹಾಗೂ ಹವಾಮಾನ ವೈಪರೀತ್ಯದ ಪರಿಣಾಮವಾಗಿ ಡೆಂಗ್ಯೂ ಸೇರಿದಂತೆ ಹಲವು ಜ್ವರಗಳು ಜನರನ್ನು ಕಾಡುತ್ತಿರುವ ಬೆನ್ನಲ್ಲೇ, ಇದೀಗ ಶಾಲಾ ಮಕ್ಕಳಲ್ಲಿ ಎಚ್1ಎನ್1 ಸೋಂಕು ಪತ್ತೆಯಾಗಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ನಗರದ ಪಾಟರಿ ರಸ್ತೆಯಲ್ಲಿರುವ ಪ್ರತಿಷ್ಠಿತ ಖಾಸಗಿ ಶಾಲೆಯೊಂದರಲ್ಲಿ ಏಕಾಏಕಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 21ಕ್ಕೂ ಅಧಿಕ ಶಾಲಾ ಸಿಬ್ಬಂದಿಗೆ ಜ್ವರ, ಕೆಮ್ಮು ಮತ್ತು ಶೀತ ಕಾಣಿಸಿಕೊಂಡಿದೆ.
ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಇಡೀ ಶಾಲೆಯನ್ನೇ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಶಾಲಾ ಆಡಳಿತ ಮಂಡಳಿಯ ಈ ನಿರ್ಧಾರವು ಪೋಷಕರಲ್ಲಿ ಹಾಗೂ ಸ್ಥಳೀಯ ನಿವಾಸಿಗಳಲ್ಲಿ ಗಾಬರಿ ಹುಟ್ಟಿಸಿದೆ.

ವಿದ್ಯಾರ್ಥಿಗಳಲ್ಲಿ ಎಚ್1ಎನ್1 ಸೋಂಕು ಪತ್ತೆ
ಈ ಶಾಲೆಯಲ್ಲಿ ಒಟ್ಟು 2,500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ ಬರೋಬ್ಬರಿ 500 ವಿದ್ಯಾರ್ಥಿಗಳಲ್ಲಿ ಏಕಾಏಕಿ ಅನಾರೋಗ್ಯ ಕಾಣಿಸಿಕೊಂಡಿದೆ. 137 ಮಕ್ಕಳಿಗೆ ತೀವ್ರ ಜ್ವರ ಬಂದಿದ್ದರಿಂದ ಶಾಲೆಯಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. 15ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನ ತಕ್ಷಣವೇ ಮನೆಗೆ ಕಳುಹಿಸಲಾಗಿತ್ತು. ಇದರ ಬೆನ್ನಲ್ಲೇ ಶಾಲೆಯ 21 ಸಿಬ್ಬಂದಿಯಲ್ಲೂ ಇದೇ ರೀತಿಯ ರೋಗಲಕ್ಷಣಗಳು ಕಂಡು ಬಂದಿದೆ.
ಆಘಾತಕಾರಿ ವಿಷಯವೆಂದರೆ, ಅನಾರೋಗ್ಯಕ್ಕೀಡಾದವರ ಪೈಕಿ ಇಬ್ಬರು ವಿದ್ಯಾರ್ಥಿಗಳಲ್ಲಿ ಎಚ್1ಎನ್1 ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿದ್ದು, ಇಡೀ ಶಾಲಾ ಆವರಣವನ್ನ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿದೆ.
ಆನ್‌ಲೈನ್ ಕ್ಲಾಸ್ ಮೊರೆ ಹೋದ ಆಡಳಿತ ಮಂಡಳಿ
ಜ್ವರ, ಶೀತ, ಕೆಮ್ಮು ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಶಾಲೆಯಲ್ಲಿ ಭೌತಿಕ ತರಗತಿಗಳನ್ನ ನಡೆಸುವುದು ಸುರಕ್ಷಿತವಲ್ಲ ಎಂದು ತೀರ್ಮಾನಿಸಲಾಗಿದೆ. ಜ್ವರದ ಲಕ್ಷಣಗಳಿರುವ ವಿದ್ಯಾರ್ಥಿಗಳು ಶಾಲೆಗೆ ಬಾರದಂತೆ ಸೂಚಿಸಿ ತರಗತಿಗಳನ್ನ ಆರಂಭಿಸುವ ಪ್ರಯತ್ನ ಮಾಡಲಾಗಿತ್ತಾದರೂ, ಸೋಂಕು ಹೆಚ್ಚಾದ ಕಾರಣ ಆಗಸ್ಟ್ 18ರವರೆಗೆ ಮಾಂಟೆಸ್ಸರಿ ಹಾಗೂ ಪ್ರಾಥಮಿಕ ಶಾಲಾ ತರಗತಿಗಳನ್ನ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
ಸೋಂಕು ಹರಡುವುದನ್ನ ತಡೆಯುವ ಉದ್ದೇಶದಿಂದ 6ನೇ ತರಗತಿಯಿಂದ 12ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಮನೆಯಿಂದಲೇ ಆನ್‌ಲೈನ್ ತರಗತಿ ವ್ಯವಸ್ಥೆ ಮಾಡಲಾಗಿದೆ.
ಅನಾರೋಗ್ಯಕ್ಕೆ ಬೀದಿಬದಿ ಅಂಗಡಿಗಳೇ ಕಾರಣ
ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಈ ಅನಾರೋಗ್ಯಕ್ಕೆ ಶಾಲೆಯ ಸುತ್ತಮುತ್ತಲಿನ ಬೀದಿ ಬದಿ ಅಂಗಡಿಗಳೇ ಪ್ರಮುಖ ಕಾರಣ ಎಂದು ಶಾಲಾ ಆಡಳಿತ ಮಂಡಳಿ ಗಂಭೀರ ಆರೋಪ ಮಾಡಿದೆ. ಶಾಲೆಯ ಆವರಣದ ಅಕ್ಕಪಕ್ಕದಲ್ಲಿರುವ ಬೀದಿಬದಿಯ ಆಹಾರ ಮಾರಾಟ ಮಳಿಗೆಗಳು, ತಂಪು ಪಾನೀಯ ಹಾಗೂ ಫಾಸ್ಟ್ ಫುಡ್ ಅಂಗಡಿಗಳು ಕನಿಷ್ಠ ಶುಚಿತ್ವವನ್ನು ಸಹ ಕಾಪಾಡಿಕೊಳ್ಳುತ್ತಿಲ್ಲ.
ಕಬಾಬ್, ಎಗ್ ರೈಸ್ ಮಾರಾಟ ಮಾಡುವ ಅಂಗಡಿಗಳು ಉತ್ಪತ್ತಿಯಾಗುವ ತ್ಯಾಜ್ಯವನ್ನ ಸರಿಯಾಗಿ ವಿಲೇವಾರಿ ಮಾಡುತ್ತಿಲ್ಲ. ಜೊತೆಗೆ, ಶಾಲೆಯ ಗೋಡೆಯ ಪಕ್ಕದಲ್ಲೇ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಇಡೀ ಪರಿಸರ ಮಲಿನಗೊಂಡಿದ್ದು, ರೋಗರುಜಿನಗಳಿಗೆ ಆಹ್ವಾನ ನೀಡುತ್ತಿದೆ ಎಂದು ದೂರಲಾಗಿದೆ.
ಕಟ್ಟುನಿಟ್ಟಿನ ನಿಯಮ ಜಾರಿಗೆ ಆಗ್ರಹ
ಶಾಲಾ ಆವರಣದಿಂದ 50 ಮೀಟರ್ ವ್ಯಾಪ್ತಿಯಲ್ಲಿ ಅತಿಯಾದ ಕೊಬ್ಬು ಮತ್ತು ಸಕ್ಕರೆ ಅಂಶ ಇರುವ ಜಂಕ್ ಫುಡ್ ಹಾಗೂ ಅನಾರೋಗ್ಯಕರ ಆಹಾರ ಪದಾರ್ಥಗಳ ಮಾರಾಟವನ್ನು ನಿಷೇಧಿಸಿ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಆದರೆ, ಈ ಆದೇಶ ಕೇವಲ ಕಾಗದದಲ್ಲಿ ಮಾತ್ರ ಉಳಿದಿದ್ದು, ವಾಸ್ತವದಲ್ಲಿ ಪಾಲನೆಯಾಗುತ್ತಿಲ್ಲ.
ಕೂಡಲೇ ಜಿಬಿಎ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಆದೇಶವನ್ನ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಶಾಲೆಯ ಅಕ್ಕಪಕ್ಕದಲ್ಲಿರುವ ಅನಧಿಕೃತ ಬೀದಿಬದಿ ವ್ಯಾಪಾರಿಗಳನ್ನು ತಕ್ಷಣವೇ ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಶಾಲಾ ಆಡಳಿತ ಮಂಡಳಿ ಆಗ್ರಹಿಸಿದೆ.


Click it and Unblock the Notifications
