400 ಕೋಟಿ ತ್ಯಾಜ್ಯ ವಿಲೇವಾರಿ ಅವ್ಯವಹಾರ: ಸಿಐಡಿ ತನಿಖೆ
ಬೆಂಗಳೂರು, ನವೆಂಬರ್ 2: ಕಸ ವಿಲೇವಾರಿ ಗುತ್ತಿಗೆದಾರರು ನಡೆಸಿದ್ದಾರೆ ಎನ್ನಲಾದ 400 ಕೋಟಿ ರೂ ಮೌಲ್ಯದ ಗೋಲ್‌ಮಾಲ್ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡುವ ಸಾಧ್ಯತೆ ಇದೆ.
ಕಸ ವಿಲೇವಾರಿ ಅವ್ಯವಹಾರ ಕುರಿತಂತೆ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಪಾಲಿಕೆ ಸದಸ್ಯರ ಸಭೆ ನಡೆಸಿದ್ದಾರೆ, ಈ ಪ್ರಕರಣವನ್ನು ಸಿಐಡಿಗೆ ವಹಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕಸ ವಿಲೇವಾರಿ ಹೊಣೆ ಹೊತ್ತಿರುವ ಗುತ್ತಿಗೆದಾರರು ತಮ್ಮ ವಾಹನಗಳಿಗೆ ಜಿಪಿಎಸ್ ಅಳವಡಿಸಿಕೊಳ್ಳದೆ ಪಾಲಿಕೆ ಮತ್ತು ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಿದ್ದಾರೆ. ಹೀಗಾಗಿ 400 ಕೋಟಿಗೂ ಹೆಚ್ಚು ಅವ್ಯವಹಾರವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಇಡೀ ಪ್ರಕರಣವನ್ನು ಸಿಐಡಿ ತನಿಖೆಗೊಳಪಡಿಸಿ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸುವುದು ಮತ್ತು ನಷ್ಟವನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ.

ನಗರದಲ್ಲಿ ನಿತ್ಯ ನಾಲ್ಕು ಸಾವಿರ ಟನ್ ಕಸ ಉತ್ಪಾದನೆಯಾಗುತ್ತಿದ್ದು ಈ ಕಸವನ್ನು ವಿಲೇವಾರಿ ಘಟಕಗಳಿಗೆ ಸಾಗಿಸುವ ಹೊಣೆಯನ್ನು ಗುತ್ತಿಗೆ ನೀಡಲಾಗಿದೆ. ಕಸ ವಿಲೇವಾರಿಗೆಂದೇ ಗುತ್ತಿಗೆದಾರರು ಆಟೋ ಮತ್ತು ಟಿಪ್ಪರ್ ಸೇರಿದಂತೆ 3600 ವಾಹನಗಳನ್ನು ಬಳಕೆ ಮಾಡುತ್ತಿದ್ದಾರೆ.
ಕಸ ಸಾಗಿಸುವ ಒಂದು ಆಟೋಗೆ ಪ್ರತಿನಿತ್ಯ 60 ಸಾವಿರ ಹಾಗೂ ಒಂದು ಟಿಪ್ಪರ್ ಒಂದೂವರೆ ಲಕ್ಷ ರೂ.ಗಳನ್ನು ಪಾಲಿಕೆ ಪಾವತಿಸುತ್ತಿದೆ. ಆದರೆ, ಕೆಲ ಗುತ್ತಿಗೆದಾರರು ವಾಹನಗಳ ತಪ್ಪು ಲೆಕ್ಕ ನೀಡಿ ಕೋಟ್ಯಂತರ ರೂಪಾಯಿ ಗುಳುಂ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಕಸ ಸಾಗಿಸುವ ಎಲ್ಲ ವಾಹನಗಳಿಗೂ ಜಿಪಿಎಸ್ ಅಳವಡಿಕೆ ಕಡ್ಡಾಯ ಮಾಡಲಾಗಿತ್ತು. ಆದರೆ, 3600 ವಾಹನಗಳಲ್ಲಿ ಕೇವಲ 2600 ವಾಹನಗಳು ಮಾತ್ರ ಜಿಪಿಎಸ್ ಅಳವಡಿಸಿಕೊಂಡಿವೆ. ಉಳಿದ 1000 ವಾಹನಗಳು ಜಿಪಿಎಸ್ ಅಳವಡಿಸಿಕೊಳ್ಳದೆ ಹಣ ಪಡೆದುಕೊಂಡಿವೆ.












Click it and Unblock the Notifications