ಕಾಲೇಜು ಆರಂಭ; ಬೆಂಗಳೂರಲ್ಲಿ 168 ಕೋವಿಡ್ ಪ್ರಕರಣ ಪತ್ತೆ
ಬೆಂಗಳೂರು, ನವೆಂಬರ್ 22 : ಕೋವಿಡ್ ಲಾಕ್ ಡೌನ್ ಘೋಷಣೆ ಬಳಿಕ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿತ್ತು. ಎಂಟು ತಿಂಗಳ ಬಳಿಕ ಕರ್ನಾಟಕದಲ್ಲಿ ಕಾಲೇಜು ಆರಂಭಗೊಂಡಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಕಾಲೇಜಿನಲ್ಲಿ ತರಗತಿ ಆರಂಭವಾಗಿದೆ.
ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಭಂದಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. 5 ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಒಟ್ಟು 168 ವಿದ್ಯಾರ್ಥಿಗಳು, ಸಿಬ್ಭಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಕೋವಿಡ್ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾರ್ಗಸೂಚಿಗಳನ್ನು ಯುಜಿಸಿ ಬಿಡುಗಡೆ ಮಾಡಿದೆ. ಅದರ ಅನ್ವಯ ಸಕಲ ವ್ಯವಸ್ಥೆ ಮಾಡಿಕೊಂಡು ನವೆಂಬರ್ 17ರ ಮಂಗಳವಾರ ಕಾಲೇಜು ಆರಂಭಿಸಲಾಗಿದೆ.

ಬಿಬಿಎಂಪಿ ನೀಡಿರುವ ಮಾಹಿತಿಯಂತೆ ನವೆಂಬರ್ 17 ರಿಂದ 21ರ ತನಕ ನಗರದ 500ಕ್ಕೂ ಹೆಚ್ಚು ಕಾಲೇಜುಗಳಲ್ಲಿ 26,205 ವಿದ್ಯಾರ್ಥಿಗಳು, 5,378 ಉಪನ್ಯಾಸಕರು, 2,680 ಇತರೆ ಸಿಬ್ಬಂದಿ ಸೇರಿ 38,653 ಜನರಿಗೆ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದೆ.
ಒಟ್ಟು ದೃಢಪಟ್ಟ 168 ಪ್ರಕರಣಗಳ ಪೈಕಿ 117 ವಿದ್ಯಾರ್ಥಿಗಳು ಹಾಗೂ 51 ಮಂದಿ ಸಿಬ್ಬಂದಿಗಳಾಗಿದ್ದಾರೆ. ಕೋವಿಡ್ ವರದಿ ನೆಗೆಟೀವ್ ಬಂದ ವಿದ್ಯಾರ್ಥಿಗಳನ್ನು ಮಾತ್ರ ತರಗತಿಗೆ ಹಾಜರಾಗಲು ಅವಕಾಶ ನೀಡಲಾಗುತ್ತಿದೆ.
ಬೆಂಗಳೂರು ನಗರ; ಬೆಂಗಳೂರು ನಗರದಲ್ಲಿ ಶನಿವಾರ 972 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 3,62,626ಕ್ಕೆ ಏರಿಕೆಯಾಗಿದೆ.
ಶನಿವಾರ ನಗರದಲ್ಲಿ 813 ಜನರು ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 17,812 ಆಗಿದೆ. 247 ಜನರು ವಿವಿಧ ಆಸ್ಪತ್ರೆಗಳ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.












Click it and Unblock the Notifications