ಬೆಂಗಳೂರಿನ ಚಿಕ್ಕಬಾಣಾವರ ಕೆರೆಯ ಸುತ್ತ ವಾಸಿಸುವವರಿಗೆ ಸಿಹಿ ಸುದ್ದಿ....
ಬೆಂಗಳೂರು ಮಾರ್ಚ್ 1: ಕೊನೆಗೂ ಬೆಂಗಳೂರಿನ ಚಿಕ್ಕಬಾಣಾವರ ಕೆರೆ ಪುನರುಜ್ಜೀವನಕ್ಕೆ 12.60 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ. ಉತ್ತರ ತಾಲೂಕಿನ ಯಶವಂತಪುರ ಹೋಬಳಿಯ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಚಿಕ್ಕಬಾಣಾವರ ಕೆರೆ ಹಲವು ವರ್ಷಗಳಿಂದ ಕಲುಷಿಗೊಂಡಿದೆ. ಹೀಗಾಗಿ ಕೊಳಚೆ ನೀರು ಹರಿದು ದುರ್ವಾಸನೆ ಬೀರುತ್ತಿರುವ ಚಿಕ್ಕಬಾಣಾವರ ಕೆರೆ ಅಭಿವೃದ್ಧಿಗೆ ಬಿಡಿಎ 12.60 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆದಿದೆ.
ಇದರೊಂದಿಗೆ ಪುರಸಭೆ ಎರಡು ಕೋಟಿ ಅನುದಾನ ನೀಡಿದೆ. 105 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಕೆರೆಗೆ 2010ರಿಂದ ವಸತಿ ಘಟಕಗಳಿಂದ ಕೊಳಚೆ ನೀರು ಹರಿದು ಬರುತ್ತಿದೆ. ಡಾ/ಶಿವರಾಮ ಕಾರಂತ ಬಡಾವಣೆಯ ಅಭಿವೃದ್ಧಿಯೊಂದಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಕೊಳಚೆಯಿಂದ ತುಂಬಿರುವ ಚಿಕ್ಕಬಾಣಾವರ ಕೆರೆ ಪುನರುಜ್ಜೀವನಗೊಳಿಸುವ ಕಾಮಗಾರಿಯನ್ನೂ ಆರಂಭಿಸಲಿದೆ.

ಪುನರುಜ್ಜೀವನದ ಭಾಗವಾಗಿ ಬಿಡಿಎ ಕೆರೆಯ ತಳದಿಂದ ಹೂಳು ಅಥವಾ ಹೂಳು ಮಿಶ್ರಿತ ಮರಳನ್ನು ತೆಗೆದು ಅದನ್ನು ಸಾಯ್ಲ್ ಬ್ಯಾಂಕ್ ಅಥವಾ ನಿಗದಿತ ಡಂಪ್ ಯಾರ್ಡ್‌ಗಳಲ್ಲಿ ಠೇವಣಿ ಮಾಡಲಿದೆ. ಏಜೆನ್ಸಿಯು ಠೇವಣಿ ಮಾಡಿದ ಹೂಳು ಅಥವಾ ಮರಳನ್ನು ವಿಲೇವಾರಿ ಮಾಡಲಿದೆ. ಕೆರೆಯ ಪರಿಧಿಯ ಉದ್ದಕ್ಕೂ ವಾಕ್‌ವೇ, ಮಣ್ಣಿನ ಒಡ್ಡು ನಿರ್ಮಿಸಲು ಬಿಡಿಎ ಯೋಜಿಸಿದೆ. ತ್ಯಾಜ್ಯ ನೀರನ್ನು ತಿರುಗಿಸಲು ಚರಂಡಿ ನಿರ್ಮಿಸಲಾಗುತ್ತಿದೆ.
2019ರಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(ಕೆಎಸ್‌ಪಿಸಿಬಿ) ಲೆಕ್ಕ ಪರಿಶೋಧನೆಯನ್ನು ನಡೆಸಿತ್ತು. ಕೆರೆಗೆ ಕೊಳಚೆ ನೀರನ್ನು ಬಿಟ್ಟಿದ್ದಕ್ಕಾಗಿ ಪ್ರದೇಶದ ಒಂಬತ್ತು ಅಪಾರ್ಟ್‌ಮೆಂಟ್‌ಗಳಿಗೆ ನೋಟೀಸ್ ನೀಡಲಾಗಿತ್ತು.
ಚಿಕ್ಕಬಾಣಾವರ ಪುರಸಭೆ ಮುಖ್ಯ ಅಧಿಕಾರಿ ಎಚ್.ಎ.ಕುಮಾರ್ ಮಾತನಾಡಿ, ಕೆರೆ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಡಿಪಿಆರ್‌ಗೆ ಡಿಸಿ ಅನುಮೋದನೆ ಮತ್ತು ಪೌರಾಡಳಿತ ನಿರ್ದೇಶಕನಾಲಯದಿಂದ ಟೆಂಡರ್ ಆಗಿದೆ. ಈಗ ಕೆಲಸ ಪ್ರಾರಂಭಿಸಬೇಕಿದೆ. ಮೊದಲೇ ಹಂತದಲ್ಲಿ ಎರಡು ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಇತ್ತೀಚಿನ ಸರ್ವೆ ಪ್ರಕಾರ ಕೆರೆಯ ವಿಸ್ತೀರ್ಣ 105 ಎಕರೆ. ಅದರಲ್ಲಿ ಎರಡು ಎಕರೆಯಷ್ಟು ಒತ್ತುವರಿಯಾಗಿದೆ. ಒತ್ತುವರಿ ಜಾಗವನ್ನು ಗುರುತಿಸಲಾಗಿದೆ. ಕೆರೆಗೆ ಕಲುಷಿತ ನೀರು ಎಲ್ಲಿಂದಬರುತ್ತದೆ ಎಂದು ಪತ್ತೆಹಚ್ಚಿ ಅದನ್ನು ತಡೆಯಲಾಗುತ್ತದೆ. ಕೆರೆ ಮಣ್ಣು, ಕಲುಷಿತ ನೀರು ತೆಗೆದು ಸುತ್ತ ಸಂರಕ್ಷಿಸಿ ಸುಂದರ ಕೆರೆ ನಿರ್ಮಿಸಲಾಗುವುದು ಎಂದರು.
ಇನ್ನೂ ಶಾಸಕ ಎಸ್.ಮುನಿರಾಜು ಮಾತನಾಡಿ, ಚಿಕ್ಕಬಾಣಾವಾರ ಕೆರೆಯು ಕಾಮಗಾರಿ ಕೆಲಸ ಕೆಲವೇ ದಿನಗಳಲ್ಲಿ ಪ್ರಾರಂಬಾಗುತ್ತದೆ. ಬಿಡಿಎಯಿಂದ 12.60 ಕೋಟಿ ಹಾಗೂ ಪುರಸಭೆಯಿಂದ 2 ಕೋಟಿ ಅನುದಾನವನ್ನು ನೀಡಲಾಗುತ್ತಿದೆ. ಅಧಿವೇಶನದಲ್ಲಿ 20 ಕೋಟಿ ಅನುಧಾನವನ್ನು ಕೇಳಿದ್ದೆವು. ಆದರೆ ಅವರು ಕೊಡಲಿಲ್ಲ. ಇನ್ನು ಕೆಲವು ದಿನಗಳಲ್ಲಿ ಚಿಕ್ಕಬಾಣಾವಾರ ಕೆರೆಗೆ ಕಾಮಗಾರಿ ಕೆಲವು ದಿನಗಳಲ್ಲಿ ಪ್ರಾರಂಭಿಸಲಾಗುತ್ತದೆ ಎಂದರು.
ಸ್ಥಳೀಯ ನಿವಾಸಿ ಚಿಕ್ಕಸ್ವಾಮಿ, ಕೆರೆಗಳನ್ನು ಸರ್ಕಾರ ಅಭಿವೃದ್ಧಿಪಡಿಸಿ ಉಳಿಸಬೇಕಿದೆ. ಮಳೆ ಬಂದಾಗ ಕೆರೆ ಸುತ್ತಲಿನ ಮನೆಗಳಿಗೆ ನೀರು ನುಗ್ಗಲು ಕೆರೆ ಹಾಗೂ ರಾಜಕಾಲುವೆಯ ಒತ್ತುವರಿಯೇ ಕಾರಣವಾಗಿದೆ ತ್ವರಿಗತಿಯಲ್ಲಿ ಕೆರೆ ಹಾಗೂ ರಾಜಕಾಲುವೆ ಒತ್ತವರಿ ತೆರವು ಮಾಡಬೇಕಾಗಿದೆ ಎಂದರು.
ಹ್ಯೂಮನ್ ರೈಟ್ಸ್ ಅಂಡ್ ಪ್ರೊಟೆಕ್ಷನ್ ಕಮಿಟಿ ರಾಜ್ಯಾಧ್ಯಕ್ಷ ಬಿ.ಎಂ.ಚಿಕ್ಕಣ್ಣ, ಕೆರೆ ಅಭಿವೃದ್ಧಿಗಾಗಿ ಪುರಸಭೆ ಅಧಿಕಾರಿಗಳಿಗೆ, ಡಿಸಿಗೆ ಮನವಿ ಪತ್ರ ನೀಡಿದ್ದೇವೆ.ಕೆರೆ ಸ್ವಚ್ಚವಾಗಿದ್ದರೆ ರಾಸುಗಳು, ಜಲಚರಗಳು, ಪಕ್ಷಗಳು, ಸರಿಸೃಪಗಳಿಗೆ ಆಸ್ರಯವಾಗುತ್ತದೆ. ಬೇಸಿಗೆಯಲ್ಲಿ ಎದುರಾಗುತ್ತಿರುವ ಕುಡಿವ ನೀರಿನ ಬವಣೆ ತಪ್ಪಿಸಬಹುದು ಎಂದರು.












Click it and Unblock the Notifications